ಲಕ್ಷ್ಮಿಯ ಉಪದೇಶ!

   

*

ಹೇಗಿದ್ದೀಯ ಶಂಭು? ನಿನಗೇನು? ಪ್ರತಿ ಕ್ಷಣ ಸಂತೋಷದಿಂದ ಇರುವವನು! ಈಗಲೂ ಸಂತೋಷದಿಂದ ಇರ್ತೀ ಅಂತ ಗೊತ್ತು...! ಆದರೂ ಕೆಲವೊಂದು ವಿಷಯಗಳನ್ನು ನಿನಗೆ ಹೇಳಬೇಕು ಅನ್ನಿಸುತ್ತಿದೆ! ಹೇಳಿಬಿಡುತ್ತೇನೆ!

ಇದು..., ನೀನು ನೆಮ್ಮದಿಯಾಗಿಲ್ಲ ಅಂತ ಅನ್ನಿಸಿ ಹೇಳುತ್ತಿರುವುದಲ್ಲ..., ಗೊತ್ತು..., ಘಟನೆ ಏನೇ ಆದರೂ..., ಮಾನಸಿಕ ಸಂಘರ್ಷಗಳು ಏನೇ ಇದ್ದರೂ- ನೀ ನೆಮ್ಮದಿಯಾಗಿರುತ್ತಿ! ಆ ಘಟನೆಗಳನ್ನೂ- ಸಂಘರ್ಷವನ್ನೂ ಎಂಜಾಯ್ ಮಾಡ್ತಿ! ಸೈಕಲಾಜಿಕಲ್ ಅನಾಲಿಸಿಸ್ ಮಾಡ್ತಿ! ಸೊ ಇದನ್ನು ಹೇಳುತ್ತಿರುವ ಉದ್ದೇಶ..., ನಿನ್ನದೇ ಮಜವಾದ ಲೆಕ್ಕಾಚಾರವಿದೆಯಲ್ಲಾ...? ಆ ಲೆಕ್ಕಾಚಾರದ ಪ್ರಕಾರ..., ನಿನ್ನ ಪ್ರಿಯಾರಿಟಿ ಬದಲಾಗಬೇಕಾದ ಸಮಯವಾಯಿತು ಎಂದು ಕಂಫರ್ಮ್ ಮಾಡುವುದಷ್ಟೆ!!!

ಎಷ್ಟು ನಗು ಬಂತು ಗೊತ್ತಾ ಆ ಲೆಕ್ಕಾಚಾರ ನೋಡಿ...,

ಬದುಕುವುದು ಅರವತ್ತು ವರ್ಷವಂತೆ! ಮೊದಲ ಇಪ್ಪತ್ತು ವರ್ಷ ವಿದ್ಯಾಲಕ್ಷ್ಮಿಯಂತೆ..., ಎರಡನೇ ಇಪ್ಪತ್ತು ವರ್ಷ ಧೈರ್ಯಲಕ್ಷ್ಮಿಯಂತೆ..., ಮೂರನೇ ಇಪ್ಪತ್ತು ವರ್ಷ ಧನಲಕ್ಷ್ಮಿಯಂತೆ!!

ಹುಟ್ಟಿನಿಂದಲೇ ಮೂರೂ ಲಕ್ಷ್ಮಿಯರಿದ್ದರೂ..., ಪ್ರಮಾಣದ ಲೆಕ್ಕಾಚಾರದಲ್ಲಿ ಈ ವಿಭಜನೆಯಂತೆ- ನಿನ್ನ ತಲೆ!

ಆದರೆ ಒಂದು ವಿಷಯವಂತೂ ನಿಜವೋ ಶಂಭು...! ಚಿಕ್ಕವಯಸ್ಸಿನಲ್ಲಿ ನಿನಗೇನಾದರೂ ಧನಲಕ್ಷ್ಮಿ ಹೆಚ್ಚಾಗಿ ಒಲಿದಿದ್ದರೆ ಅದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತಿತ್ತು- ನಿನ್ನ ವ್ಯಕ್ತಿತ್ವದ ಅನ್ವಯ!!

ನೀನೂ ನಿನ್ನ ಸೈಕಾಲಜಿಯೂ! ಎಲ್ಲವೂ ನಿನಗೆ ಗೊತ್ತು..., ನಿನಗೇ ಗೊತ್ತು- ಅನ್ನಬೇಡ ಶಂಭು! ಕೆಲವೊಂದು ಸೂಕ್ಷ್ಮಗಳು ನಿನಗೆ ಅರ್ಥವಾಗುವುದಿಲ್ಲ! ಅರ್ಥವಾದರೂ ನಿನ್ನಿಂದ ಒಪ್ಪಿಕೊಳ್ಳಲಾಗುವುದಿಲ್ಲ! ನೀನು ಮಾತ್ರ ನಿನ್ನ ತತ್ತ್ವಗಳನ್ನು- ವಿಶ್ಲೇಷಣೆಗಳನ್ನು ಇನ್ನೊಬ್ಬರು ಒಪ್ಪಬೇಕು ಅನ್ನುತ್ತೀ..., ಇನ್ನೊಬ್ಬರಮೇಲೆ ಬಲವಂತದಿಂದ ಹೇರುತ್ತಿ!

ಕೇಳು..., ಪ್ರಿಯಾರಿಟಿ..., ನಮ್ಮ ಬದುಕನ್ನು ನಿರ್ಧರಿಸುವುದು ಈ ಪ್ರಿಯಾರಿಟಿಗಳೇ!

ವೈಯುಕ್ತಿಕಕ್ಕೋ..., ಸಂಬಂಧಗಳಿಗೋ..., ಕನಸುಗಳಿಗೋ..., ನಿನ್ನ ಪ್ರಿಯಾರಿಟಿ ಯಾವುದಕ್ಕೆ ಅನ್ನುವುದೇ ನಿನ್ನ ಬದುಕು!

ಇದನ್ನ ನಿನ್ನ ಲೆಕ್ಕಾಚಾರಕ್ಕೇ ಅನ್ವಯಿಸೋಣ...!

ಮೊದಲ ಇಪ್ಪತ್ತು ವರ್ಷ ವೈಯುಕ್ತಿಕ! ಎರಡನೇ ಇಪ್ಪತ್ತು ವರ್ಷ ಸಂಬಂಧಗಳು! ಇನ್ನು ಮೂರನೇ ಇಪ್ಪತ್ತು??

ನಾನೇನು ಹೇಳುತ್ತಿದ್ದೇನೆ ಅನ್ನುವುದು ಅರ್ಥವಾಯಿತು ತಾನೆ?

ಯೋಚಿಸಿ ನೋಡು..., ನಿನಗೆ ಅವರೆಂದರೆ ಅಸಾಧ್ಯ ಗೌರವ- ಇಷ್ಟ! ನಿನಗೆ ಅವರನ್ನು ಭೇಟಿಯಾಗಬೇಕು! ಹೊರಡುತ್ತೀ...! ಅವರು ಅಲ್ಲಿ ಇರುವುದಿಲ್ಲ! ಕಾಲ್ ಮಾಡುತ್ತಿ! “ನಾನಲ್ಲಿ ಇಲ್ಲ!” ಎಂದು ಹೇಳುತ್ತಾರೆಯೇ ಹೊರತು- "ಎಲ್ಲಿ" ಇದ್ದಾರೆಂದು ಹೇಳುವುದಿಲ್ಲ!

ಅರ್ಥವೇನು? ನಿನಗೇಕೆ ಅರ್ಥವಾಗುವುದಿಲ್ಲ?

ಅರ್ಥವಾದರೂ ನಿನ್ನ ಈಗೋ- ಅಹಂ- ಒಪ್ಪುವುದಿಲ್ಲ!

-ನ್ನ-ನ್ನು ಅವರು ಕಡೆಗಣಿಸುತ್ತಾರ? ಅನ್ನುತ್ತಿ!

ಮುನ್ನೂರು ನಾನೂರು ಕಿಲೋಮೀಟರ್ ಪ್ರಯಾಣ ಮಾಡಿ ಒಬ್ಬರನ್ನು ಭೇಟಿಯಾಗಲು ಹೋಗುತ್ತಿ! ಅವರು ಮನೆಗೆ ಕರೆಯುವುದಿಲ್ಲ! ಅವರು ಹೇಳಿದ ಸ್ಥಳಕ್ಕೆ ಹೋಗುತ್ತಿ! ಅವರದೇ ಊರು..., ಅವರಿಗಾಗಿಯೇ ಹೋಗಿದ್ದಿ..., ಪರ್ಟಿಕ್ಯುಲರ್ ಸಮಯವನ್ನೂ ಹೇಳಿರುತ್ತೀ..., ಆದರೂ ಅವರು ನಿನ್ನನ್ನು ಗಂಟೆಗಟ್ಟಲೆ ಕಾಯಿಸುತ್ತಾರೆ!

ಅರ್ಥವೇನು? ನಿನಗೇಕೆ ಅರ್ಥವಾಗುವುದಿಲ್ಲ?

ಅರ್ಥವಾದರೂ ನಿನ್ನ ಈಗೋ- ಅಹಂ- ಒಪ್ಪುವುದಿಲ್ಲ!!

-ನ್ನ-ನ್ನು ಅವರು ಕಡೆಗಣಿಸುತ್ತಾರ? ಅನ್ನುತ್ತಿ!

ಶಂಭೂ..., ಕೇಳು..., ನನಗೆ ನಿನ್ನಬಗ್ಗೆ ಒಂದು ಡೌಟ್ ಬಂದಿದೆ ಅಂದುಕೋ..., ಅದಕ್ಕೆ ಯಾವುದೇ ಆಧಾರವಿರುವುದಿಲ್ಲ- ಡೌಟ್ ಬಂದಿದೆ ಅಷ್ಟೆ! ಒಂದೋ ನಾನು ಮೌನವಾಗುತ್ತೇನೆ! ಇಲ್ಲಾ..., ನಿನ್ನನ್ನು ಪ್ರಶ್ನೆ ಮಾಡುತ್ತೇನೆ! ಆ ಪ್ರಶ್ನೆಗೆ ನನ್ನಲ್ಲಿ ನನ್ನದೇ ಆದ ಉತ್ತರವೊಂದು ಸಿದ್ಧವಿರುತ್ತದೆ! ನೀನು ಹೇಳುವ ಉತ್ತರ ಅದಕ್ಕೆ ವ್ಯತಿರಿಕ್ತವಾಗಿದ್ದರೆ ನಾನು ಡಿಸ್ಟರ್ಬ್ ಆಗುತ್ತೇನೆ! ನಿನ್ನನ್ನು ಕ್ರಾಸ್ ಮಾಡಲು ಶುರುಮಾಡುತ್ತೇನೆ! ತಿರುತಿರುಗಿ ಪ್ರಶ್ನೆಗಳನ್ನು ಕೇಳುತ್ತೇನೆ- ಕೇಳುತ್ತಲೇ ಇರುತ್ತೇನೆ! ಸಾಕ್ಷಿಗಳಿಗಾಗಿ ನಿನ್ನ ಫಾಲೋ ಮಾಡ್ತೇನೆ..., ಹೇಗಾದರೂ ಸರಿ ನನ್ನ ಡೌಟ್ ನಿಜ ಎಂದು ಸಾಬೀತು ಮಾಡಲು ಪ್ರಯತ್ನಿಸುತ್ತೇನೆ- ಪ್ರಯತ್ನಿಸುತ್ತಲೇ ಇರುತ್ತೇನೆ!

ಹಾಗೆ ಮಾಡಲು ಶುರು ಮಾಡಿದ ದಿನ- ನೀನು ನನ್ನನ್ನು ದೂರ ಇಡುವುದು ಒಳ್ಳೆಯದು! ಇದು ಮುಗಿಯದ ಕಥೆ! ನನ್ನ ಮೌನವನ್ನು ಕಂಡು ಗೊಂದಲಗೊಂಡು ಕಾರಣ ಕೇಳುವುದಾಗಲಿ..., ನನ್ನ ಪ್ರಶ್ನೆಗಳಿಗೆ ವಿವರಣೆ ಕೊಟ್ಟು ನಿನ್ನ ನಿಜಾಯಿತಿಯನ್ನು ಸಾಬೀತುಪಡಿಸಲು ಶ್ರಮಿಸುವುದಾಗಲಿ..., ವ್ಯರ್ಥ!

ಗಮನಿಸಿದ್ದೀಯ? ಒಬ್ಬರಿಗೆ ನಿನ್ನ ಮೇಲೆ ಆಸಕ್ತಿಯಿದ್ದಾಗ..., ಅವರು- ನಿನ್ನ ಮಧ್ಯೆ ಒಂದು ರೊಟೇಷನ್ ಸೃಷ್ಟಿಸುತ್ತಾರೆ! ಅಂದರೆ..., ಭೇಟಿಯಾಗುವುದಾಗಲಿ, ಕಾಲ್, ಮೆಸೇಜ್‌ ಮಾಡುವುದಾಗಲಿ ಏನೋ ಒಂದು ರೊಟೇಷನ್- ಪ್ರೋಟೋಕಾಲ್! ನಂತರ ನಿನ್ನ ಮೇಲಿನ ಅವರ ಆಸಕ್ತಿ ಕಡಿಮೆಯಾದಾಗ ಆ ರೊಟೇಷನ್ ಅವರಿಗೆ ಪಿರಿಪಿರಿಯಾಗುತ್ತದೆ! ನಿನಗೆ ಅವರ ಬದಲಾವಣೆ ಅರ್ಥವೇ ಆಗುವುದಿಲ್ಲ! ಆದರೆ ನೀನು ಅವರಿಗೆ ಪಿರಿಪಿರಿ ಆಗುತ್ತಿದ್ದಿ ಅನ್ನುವುದು ಅರ್ಥವಾಗುತ್ತದೆ! ಯಾಕೆ ಪಿರಿಪಿರಿ ಎಂದು ತಿಳಿದುಕೊಳ್ಳಲು ಶ್ರಮಿಸುತ್ತಿ! ಅದು ಅವರಿಗೆ ಮತ್ತಷ್ಟು ಪಿರಿಪಿರಿಯಾಗಿ..., ಯಾಕಿಷ್ಟು ಹಿಂಸೆ ಕೊಡುತ್ತೀಯ ಅನ್ನುವಂತೆ- ಆಗಿನ ನಿನ್ನ ವರ್ತನೆಯನ್ನು ಅವರೇ ಎತ್ತಿ ತೋರಿಸುತ್ತಾರೆ! ನಿನ್ನ ತಕರಾರಿಗೆ ಕಾರಣ ಅವರ ಬದಲಾವಣೆ ಅನ್ನುವುದನ್ನು ಅವರು ಒಪ್ಪುವುದೇ ಇಲ್ಲ!!

ಪ್ರಪಂಚವೇ ಹಾಗಿದೆಯೋ ಶಂಭು!

ಇನ್ನು ಆ ವಿಷಯ ಹೇಳ್ತೀನಿ ಕೇಳು! ಅದು ಕೂಡ ತುಂಬಾ ಮಜ ಕೊಡ್ತು! ನಿನ್ನ ಬಾಯಿ ಮುಚ್ಚಿಹೋದ ಸಂದರ್ಭ!!! ಅವಳ ವಿಷಯದಲ್ಲಿ ಏನು ಹೇಳಲೂ ತೋಚದೆ ಮೌನಿಯಾದ ವಿಷಯ! ಪಾಪ ನೀನು...!

ಅವಳು ನನ್ನನ್ನು ಬೇಟಿಯಾಗಲು ಬಂದಿದ್ದಳು! ಆಗ ನನಗೂ ಅಮ್ಮನಿಗೂ ಹುಷಾರಿರಲಿಲ್ಲ. ಇಬ್ಬರಿಗೂ ಪರಿಪೂರ್ಣ ಮಂಪರು! ಅದಕ್ಕೇ ಬಾಗಿಲು ಸ್ವಲ್ಪವೇ ಸ್ವಲ್ಪ ತೆರೆದು..., ಅವಳನ್ನು ಮನೆಯ ಒಳಗೆ ಕರೆಯದೆ, ವಿಷಯ ಹೇಳಿ- ಹಾಗಿಂದ ಹಾಗೆಯೇ ಕಳಿಸಿಬಿಟ್ಟೆ!

ಪಾಪ ಹುಡುಗಿ ನಿನಗೆ ಕಾಲ್ ಮಾಡಿದಳು!

ಎಷ್ಟೇ ಹುಷಾರು ತಪ್ಪಿದರೂ..., ಅಷ್ಟು ವರ್ಷದ ನಂತರ ಮನೆಗೆ ಹೋದವಳನ್ನು ಒಳಗೇ ಕರೆಯಲಿಲ್ಲ- ಹೀಗೆ ಮಾಡಬಹುದಾ?!” ಎಂದು ಅವಳ ಸಂಕಟ ಹೇಳಿದರೆ..., ನೀನಾದರೂ ಏನು ಹೇಳಬೇಕು?

ಅಮ್ಮ ಇದ್ದರ? ಅಥವಾ ಅವಳೊಬ್ಬಳೇನಾ? ಅಮ್ಮ ಎಲ್ಲೋ ಹೋಗಿ ಅವಳೊಂದಿಗೆ ಬೇರೆ ಯಾರಾದರೂ ಇದ್ದಿರಬಹುದಾ?!” ಅಂದಿ- ನಿನ್ನ ತಲೆ!!

ನಿನ್ನ ಉದ್ದೇಶ..., ಗಂಡು ಹೆಣ್ಣು ಪ್ರೈವೇಟ್ ಆಗಿರುವ ಸಮಯದಲ್ಲಿ ಅವಳು ಬಂದಿದ್ದಳೇನೋ..., ಅದಕ್ಕೇ ನಾನು ಒಳಗೆ ಸೇರಿಸಿಲ್ಲವೇನೋ- ಎಂದು ಹೇಳುವುದು!! ಪ್ರಪಂಚದ ಬಗೆಗಿನ ನಿನ್ನ ದೃಷ್ಟಿಕೋನ- ಕರ್ಮ!!

ಅವಳಿಗೆ ಅದೆಲ್ಲ ಅರ್ಥವಾಗುವುದಿಲ್ಲವೋ...! ಅದಕ್ಕೇ..., ಪಾಪ..., ಅಷ್ಟು ಅತ್ತು ಕರೆದು...,

ಹೋಗಿ ಹೋಗಿ ನಿಮಗೆ ಹೇಳಿದೆನಲ್ಲಾ...? ಅವಳು ನಿಮಗಿಂತ- ನನಗಿಂತ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತಾಳೆ!” ಅಂದಳು!

ಎಷ್ಟು ಮುಗ್ಧೆ ಅಲಾ?!

ಗಂಡು ಹೆಣ್ಣು ಪ್ರೈವೇಟ್ ಆಗಿರುವುದಕ್ಕೂ..., ಅಮ್ಮನನ್ನೂ ನೋಡಿಕೊಳ್ಳುವುದಕ್ಕೂ ಸಂಬಂಧವಿಲ್ಲ ಅನ್ನುವುದು ಅವಳ ಅರಿವಿಗೇ ಬರುವುದಿಲ್ಲವೋ!

ಸೆಕ್ಸ್ ಅನ್ನುವುದು ಏನೋ ಕ್ರೈಂ..., ಅದನ್ನು ಮಾಡುವವರು ಅಪ್ಪ ಅಮ್ಮನನ್ನು ನೋಡಿಕೊಳ್ಳಲಾರದಷ್ಟು ಕೆಟ್ಟವರು- ಅನ್ನುವಂತೆ ಯೋಚಿಸುವ ಅವಳಿಗೆ ನೀನಾದರೂ ಏನು ವಿವರಣೆ ಕೊಡುತ್ತೀ?

ಸಧ್ಯ... ಏನೂ ವಿವರಣೆ ಕೊಡಲಿಲ್ಲವಲ್ಲ! ಕೊಡಬೇಡ..., ಅವಳಿಗೆ ಅರ್ಥವಾಗುವುದಿಲ್ಲ- ನಿನ್ನ ಮೌನವೇ ಒಳ್ಳೆಯದು!

-ಪಿಲ್..., ಕಾಂಡಂ-ಗಳನ್ನು ಇಟ್ಟುಕೊಂಡು ತಿರುಗಾಡುವ ಹದಿನಾಲ್ಕು ಹದಿನೈದು ವರ್ಷದ ಹೆಣ್ಣುಮಕ್ಕಳಿರುವ ಈ ಕಾಲದಲ್ಲಿ ಇವಳಂತವಳೂ ಇದ್ದಾಳೆನ್ನುವುದೇ ಒಂದು ಆಶ್ಚರ್ಯ..., ಅವಳನ್ನು ಹಾಗೇ ಉಳಿಸಿಕೋ...!

ಅವಳಿಗೆ ಪ್ರತಿ ಕ್ಷಣ ನೀನಿರು- ನಿನ್ನ ಅಗತ್ಯ ಅವಳಿಗೆ ಇದೆಯೋ ಇಲ್ಲವೋ..., ನೀನವಳಿಗೆ ಅರ್ಥವಾಗುತ್ತೀಯೋ ಇಲ್ಲವೋ..., ನಿನ್ನೊಳಗೆ ಅವಳಿಗೆ ನೀನು ಕೊಟ್ಟಿರುವ ಸ್ಥಾನದ ಅರಿವು ಅವಳಿಗೆ ಆಗುತ್ತೋ ಇಲ್ಲವೋ..., ಅವಳನ್ನು ಕಾಪಾಡಿಕೋ- ಅವಳ ಮುಗ್ಧತೆಯೊಂದಿಗೆ!

ಅವಳಿದ್ದರೆ ಪ್ರಪಂಚದೆಡೆಗಿನ ನಿನ್ನ ಕೆಟ್ಟ ದೃಷ್ಟಿಕೋನ ಬದಲಾಗುತ್ತೆ! ಹಾಗೇ ನಿನ್ನಿಂದ ಅವಳಿಗೆ 'ನಿನ್ನಂತಾ' ಕೆಟ್ಟ ಪ್ರಪಂಚದ ಅರಿವೂ ಆಗಲಿ!!

ಇನ್ನು ಮುಖ್ಯ ವಿಷಯಕ್ಕೆ ಬರೋಣ...!

ಪ್ರಿಯಾರಿಟಿ!

ಇದೆಲ್ಲಾ ನಿನ್ನ ಪ್ರಿಯಾರಿಟಿಯನ್ನು "ಸಂಬಂಧಗಳಿಂದ" "ಕನಸಿನೆಡೆಗೆ" ತಿರುಗಿಸಲು ಸೂಚನೆಗಳು!

ಗೊತ್ತು..., ಆಲ್ರೆಡಿ ನಿಶ್ಚಯಿಸಿದ್ದೀ..., ಶುರು ಮಾಡಿದ್ದೀ..., ಈ ಉಪದೇಶ ನಿನ್ನ ನಿಶ್ಚಯಕ್ಕೆ ನನ್ನ ಅನುಮತಿ!

ಇನ್ನು ನಿನಗೆ ವಿಶ್ರಾಂತಿಯಿಲ್ಲ!!

ಸಂಬಂಧಗಳ ವಿಷಯ ಅನ್ನುತ್ತೀಯ?

ನೀನೇ ಹೇಳುವಂತೆ..., ಕೆಲವೊಮ್ಮೆ ನಮ್ಮ ನಿಷ್ಠುರತೆ ಇನ್ನೊಬ್ಬರಿಗೆ ಒಳಿತು ಮಾಡುವ ಹಾಗಿದ್ದರೆ ನಾವು ನಿಷ್ಠುರರಾಗಿಯೇ ಇದ್ದುಬಿಡೋದು ಒಳ್ಳೆಯದು!

ಸಾಧಿಸುವವರೆಗೆ ನೀನೂ ಪ್ರಪಂಚದ ಕಣ್ಣಿಗೆ ಬೀಳಬೇಡ!!

ಆಲ್‌ದಿ ಬೆಸ್ಟ್ ಶಂಭು!

ನಿನ್ನ ಬಿಟ್ಟಿರಬಾರದ, ಬಿಟ್ಟಿರಲಾಗದ, ಬಿಟ್ಟಿರದ- ಲಕ್ಷ್ಮಿ!

Comments

  1. ಅರೆ ಇದೆಂತ ಉಪದೇಶ ಒಂದು 🔱ಅರ್ಥ ವಾಗಿಲ್ವೆ..ಅಂದರೆ ಒಂದು ವ್ಯಕ್ತಿಯ ಬಗ್ಗೆ ಪೂರ್ತಿ ಅವಗಾಹವಿಲ್ಲದೆ ತಾನು ಮಗ ಮತ್ತು ತಾಯಿಯನ್ನು ಅರ್ಥಮಾಡಿಕೊಂಡ ಸಂಶಯಾಸ್ಪದ ಭೋದನೆ ಜೊತೆಗೆ ಬಿಡಲಾರದೆ ಇರಲಾರದೇ ಶoಭುವನ್ನಆಂಟಿಕೊಂಡಿರುವ ಲಕ್ಹ್ಮೀ ಬೋಧನೆ ಪಾಪ ಲಕ್ಹ್ಮೀಗೆ ಶoಭು ಸಂಶಯಕ್ಕೆ ಆಸ್ಪದ ಕೊಡದೆ ಮನವರಿಕೆ ಮಾಡಬೇಕಿತ್ತು 🤦ಕೆಟ್ಟವನ ಮತ್ತು ಒಳ್ಳೆಯವನ ಅಂತ ನಿರ್ಣಯಿಸಲಾಗದ ಲಕ್ಹ್ಮೀ. ಇಷ್ಟಕ್ಕೂ ಇನ್ನು 20 ವರ್ಷಗಳಲ್ಲಿ ಕನಸುಗಳ ಸಾಧನೆ ಎಶ್ಟುರ್ಷಗಳು ಬುದುಕು ತನಗಾಗಿ ಅನುಭವಿಸಿದು ಯಾವಾಗ ಒಳ್ಳೆ ಶಂಭು ಲಕ್ಷ್ಮಿ ಯ ಕತೆ ಇಬ್ಬರು ಒಂದಾಗಿ ಬದುಕು ಕಟ್ಟಿಕೊಳ್ಳದೆ ದೂರ ಇದ್ದು ಏನು ಮಾಡೋದು ಇಬ್ಬರು ಒಂದಾಗಿ ಸಾಧನೆ ಮಾಡಿದ್ದರೆ ಚಂದ ಇರುತ್ತಿತ್ತು ಜೊತೆಗೆ ಬದುಕು ಖುಷಿ ಯಾಗಿರುತ್ತಿತ್ತು ಅದು ಆಗಲಿ ಮೊದಲು ಆ ಲಕ್ಹ್ಮಗು ಶoಭುವಿಗೂ ನೀವೇ ಹೇಳಿ ಒಂದಾಗಿ ಬದುಕು ಕಟ್ಟಿಕೊಂಡ ಕತೆಯನ್ನು ಅವರ ಸುಂದರ ಬದುಕಿನ ಮಜಲುಗಳ ಬಗ್ಗೆ ಬರೆಯಿರಿ ಏನಿದ್ದರೂ ಸ್ವಲ್ಪ ಗೊಂದಲ ಗಳ ಚರ್ಚೆ ಎಲ್ಲರಿಗೂ ಅರ್ಥ ವಾಗುವ ರೀತಿ ಬರೆಯಿರಿ ಸರ್ ನಿಮ್ಮ ಶೈಲಿ ಸಾಹಿತ್ಯದಲ್ಲಿ ವಿಶೇಷವೇ ತುಂಬಾ ವಿಶೇಷ ವಾದರೆ ಅರ್ಥ ಮಾಡಿಕೊಳ್ಳುವ ಸಹಜತೆ ಇರುವುದಿಲ್ಲ ವಲ್ಲ ಸ್ವಲ್ಪ ಎಲ್ಲರಿಗೂ ಅರ್ಥ ವಾಗುವ ಹಾಗೆ ಬರೆಯಿರಿ ಬರೀತಾ ಯಿರಿ ಅಷ್ಟೇ.. 🙏

    ReplyDelete

Post a Comment

Popular posts from this blog

ಹಾರರ್ ಥೀಂ

ಕಡಲು ಬೆಟ್ಟ ಮತ್ತು ನಾನು!

ದಾರಿಯಲ್ಲಿ ಸಿಕ್ಕವಳು!