ಅಮ್ಮ ಮಗನ ಮುಗಿಯದ ಕಥೆ!
“ನಿನ್ನ ಅಮ್ಮ ಬಿಟ್ಟರೆ ನಿನ್ನನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಂಡಿರುವುದು ನಾನೇ ಅಂದುಕೊಳ್ಳುತ್ತೇನೆ!” ಎಂದ ಗೆಳೆಯ.
ಇವನ ಈ ಮಾತನ್ನು ಪೀಠಿಕೆಯಾಗಿ ತೆಗೆದುಕೊಂಡಿರುವುದಕ್ಕೂ, ಮುಂದೆ ನಾನು ಹೇಳಲಿರುವ ವಿಷಯಕ್ಕೂ ಏನು ಸಂಬಂಧವೋ ನನಗೆ ಗೊತ್ತಿಲ್ಲ!
ಹಾಗಯೇ ಈ ವಿಷಯವನ್ನು ಬೇರೆ ಹೇಗೆ ಹೇಳಬೇಕೋ ಅದೂ ಗೊತ್ತಿಲ್ಲ! ವಿಷಯವನ್ನು ಹೇಳಿ ಮುಗಿಸಿದ ಮೇಲೆ ಪೀಠಿಕೆಯನ್ನು ಕನೆಕ್ಟ್ ಮಾಡುವಂತೆ ಏನಾದರೂ ಹೊಳೆಯಬಹುದೇನೋ ನೋಡೋಣ!
೧
ಇಪ್ಪತ್ತನೆಯ ವಯಸ್ಸಿನಿಂದ ಮೂವತ್ತ ನಾಲ್ಕನೆಯ ವಯಸ್ಸಿನವರೆಗೆ ನನ್ನ ತೂಕ ಅರವತ್ತೆಂಟು ಕೆ.ಜಿ! ಆಚೆಯಿಲ್ಲ, ಈಚೆಯಿಲ್ಲ! ನಂತರ ಕೊರೋನ ಬಂತು! ಜೊತೆಗೆ- ಆಕ್ಸಿಡೆಂಟ್ ಆಗಿ ಕಾಲಿನ ಲಿಗಮೆಂಟ್ ಕಟ್ ಆಯ್ತು! ಆಪರೇಷನ್ ಆಯ್ತು! ಒಂದು- ಒಂದೂವರೆ ತಿಂಗಳಿಗೆ ನನ್ನ ತೂಕ ಎಪ್ಪತ್ತ ಆರು ಕೆ.ಜಿ ಆಯ್ತು- ಎಂಟು ಕೆ.ಜಿ ಜಾಸ್ತಿ!!!
ಡಾಕ್ಟರನ್ನು ಕೇಳಿದರೆ ಮುಂಚಿನಂತೆ ಚಾಮುಂಡಿ ಬೆಟ್ಟ ಹತ್ತಿ ಇಳಿಯುವಂತಾಗಲು ಮಿನಿಮಂ ಎರಡು ವರ್ಷವಾದರೂ ಬೇಕು ಅಂದರು!
ಆರನೆಯ ತಿಂಗಳಿಗೇ ನಾನು ಬೆಟ್ಟ ಹತ್ತೋದು ಶುರು ಮಾಡಿದೆ!
ವರ್ಷ ಐದಾರು ದಾಟಿದರೂ ನನ್ನ ತೂಕ ಎಪ್ಪತ್ತ ನಾಲ್ಕರಿಂದ ಕೆಳಗೆ ಇಳಿಯಲೇ ಇಲ್ಲ!
ಈಗ..., ಈ ಅಸಾಧ್ಯವಾದ ಬೇಸಗೆಯಲ್ಲಿ..., ಬೆಟ್ಟ ಹತ್ತಲು ಹೋಗಿ ಕಾಲು ಉಳುಕಿಸಿಕೊಂಡು ಹತ್ತು ಹದಿನೈದು ದಿನದ ರೆಸ್ಟ್ ನಂತರ ತೂಕ ಚೆಕ್ ಮಾಡಿದರೆ...., ಎಪ್ಪತ್ತು ಕೆ.ಜಿ ಆಗಿದ್ದೇನೆ!
ಅದನ್ನು ನೋಡಿದ ಅಮ್ಮ ಎದೆಯಮೇಲೆ ಕೈಯಿಟ್ಟು ಹೇಳಿದರು...,
“ಅಯ್ಯೋ ಸಾಕು ಇನ್ನು ತೂಕ ಕಡಿಮೆಯಾಗಬೇಡ! ಚೆನ್ನಾಗಿ ತಿಂದು ದಪ್ಪ ಆಗು!” ಅಂತ.
ಕೆಲವೊಮ್ಮೆ ಅಮ್ಮ ಭಾರಿ ಆಡೋದು!
ಅಪ್ಪ ಮರಣಿಸುವ ಮುಂಚೆ ಒಮ್ಮೆ ಅಪ್ಪನಿಗೆ ಹೇಳಿದ್ದೆ...,
“ನಿಮ್ಮ ಬದುಕಿನ ಘಟನೆಗಳನ್ನು, ನೆನಪುಗಳನ್ನು ಬರೆದುಕೊಡಿ ನನಗೆ ಉಪಯೋಗಕ್ಕೆ ಬರಬಹುದು!” ಎಂದು.
ಅಪ್ಪ ಅದಕ್ಕೆ ಏನೂ ಉತ್ತರ ಹೇಳಿರಲಿಲ್ಲ. ಅಪ್ಪನ ಮರಣದ ನಂತರ ಅಮ್ಮ ಅಪ್ಪನ ಡೈರಿಗಳನ್ನು ಓದುವಾಗ ಅಪ್ಪ ಬರೆದಿದ್ದರಂತೆ...,
“ಮಗ ನನ್ನ ನೆನಪುಗಳನ್ನ ಬರೆದುಕೊಡಿ ಅಂದಿದ್ದ..., ಆದರೆ ನನ್ನ ನೆನಪುಗಳು, ನನ್ನ ಇತಿಹಾಸ ನನ್ನೊಂದಿಗೇ ಮುಗಿದು ಹೋಗಲಿ ಎಂದು ತೀರ್ಮಾನಿಸಿದ್ದೇನೆ!” ಎಂದು.
ಇದನ್ನು ಓದಿಯೇ ಇರಬೇಕು ಅಮ್ಮ ಒಮ್ಮೆ ಹೇಳಿದ್ದು...,
“ನಾನೊಬ್ಬಳು ಇದ್ದೆ ಅನ್ನುವ ನೆನಪೂ ಉಳಿಸದಂತೆ ಮುಗಿದು ಹೋಗುತ್ತೇನೆ!” ಎಂದು.
ಏನಂದುಕೊಂಡಿದ್ದಾರೆ ಇಬ್ಬರೂ? ಅಪ್ಪ ಹೇಳದಿದ್ದರೆ ನನಗೇನೂ ಗೊತ್ತಾಗುವುದಿಲ್ಲವೆಂದೋ? ಹುಡುಕಲೇ ಆಗುವುದಿಲ್ಲವೆಂದೋ?
ಅಮ್ಮ ಹಾಗೇ ಮುಗಿದು ಹೋಗಬೇಕಿದ್ದರೆ ನಾನೆನ್ನುವ ನಾನು ಹುಟ್ಟಲೇ ಬಾರದಿತ್ತು!! ಹುಟ್ಟಿದರೂ ಕಥೆಗಾರನಾಗಬಾರದಿತ್ತು!
ಏನು ಮಾಡುವುದು?
ಅವರಿಬ್ಬರ ದುರಾದೃಷ್ಟ!!!
ಪ್ರಪಂಚದ ಕಣ್ಣಿಗೆ ಬೀಳಬಾರದು ಅನ್ನುವ ಅವರ ಆಸೆಯನ್ನು ನಾನು ನೆರವೇರಿಸಲಾರೆ! ಬದಲಿಗೆ...,
ಅವರಿಬ್ಬರ ಬದುಕನ್ನು ದಾಖಲಿಸಿದವ ಅನ್ನುವ ದೊಡ್ಡಸ್ತಿಕೆಗಾಗಿ ಶ್ರಮಿಸುತ್ತೇನೆ!
ಕಥೆ ಅವರದೇ ಎಂದು ಪ್ರಪಂಚಕ್ಕೆ ತಿಳಿಯಬೇಕಾಗಿಲ್ಲ! ಆದರೆ ಅವರ ಆ ಪ್ರೇಮ ಇತಿಹಾಸವಾಗಬೇಕು!!
ಇತಿಹಾಸವಾಗಲಿರುವ ಆ ಪ್ರೇಮದ ಸಂಪೂರ್ಣ ಸಾರ ಇಷ್ಟೇ...,
“ಆಸ್ಪತ್ರೆಗೆ ಹೊರಡುವಾಗ ಅಪ್ಪ ಕೇಳಿದ್ದರು ನೀನು ಬರಲ್ವಾ ಅಂತ! ನಾನೂ ಬರಬೇಕಿತ್ತು! ಕೊನೆಯ ಕ್ಷಣಗಳು ಅವರೊಂದಿಗೆ ಇರಬೇಕಿತ್ತು!” ಎಂದು ಅಮ್ಮ ಪದೇ ಪದೇ ಹೇಳುತ್ತಿದ್ದರು.
ಕೊರೋನಾದ ಪೀಕ್ ಟೈಂ! ಅಕ್ಕನ ಮೂರು ಮತ್ತು ಐದು ವರ್ಷದ ಇಬ್ಬರು ಹೆಣ್ಣು ಮಕ್ಕಳು ಮನೆಯಲ್ಲಿದ್ದರು.
ಅಮ್ಮನಿಗೆ ನಾನೇ ಹೇಳಿದ್ದು...,
“ನೀವು ಮಕ್ಕಳೊಂದಿಗೆ ಮನೆಯಲ್ಲಿರಿ..., ಗೆಳೆಯನಿದ್ದಾನಲ್ಲ? ನಾವಿಬ್ಬರು ಅಪ್ಪನೊಂದಿಗೆ ಹೋಗಿ ಬರುತ್ತೇವೆ” ಎಂದು.
ಅಪ್ಪ ವಾಪಸ್ ಬರುವುದಿಲ್ಲ ಅನ್ನುವ ಅರಿವು ನಮಗೆಲ್ಲಿತ್ತು?
ಜೊತೆಗೆ..., ಗೆಳೆಯ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವ ಇರುವವನಾದ್ದರಿಂದ ಅವನ ಕಾಂಟಾಕ್ಟ್ನಲ್ಲಿ ಯಾವುದಾದರೂ ಆಸ್ಪತ್ರೆಯಲ್ಲಿ ಅಪ್ಪನ ಚೆಕಪ್ ಮಾಡಬಹುದು, ಅಗತ್ಯವಾದರೆ ಅಡ್ಮಿಟ್ ಮಾಡಬಹುದು ಅನ್ನುವ ಯೋಚನೆ ನನ್ನದು. ಆದರೆ ಕೊರೋನ ಸಮಯವಾದ್ದರಿಂದ ಯಾವ ಆಸ್ಪತ್ರೆಯಲ್ಲೂ ಬೆಡ್ ಇಲ್ಲ, ಅಡ್ಮಿಟ್ ಮಾಡಲು ಹಿಂಜರಿಕೆ!
ಗೆಳೆಯ ಹೊರಗೆ ಬೆಡ್ಗಾಗಿ ಹುಡುಕಾಟ ನಡೆಸುವಾಗ ನಾನು ಅಪ್ಪನೊಂದಿಗೆ ಆಂಬ್ಯುಲೆನ್ಸ್ನಲ್ಲಿ.... ವಿಧಿ ನಿಯಮ ಹಾಗಿತ್ತು.
ಅಪ್ಪನ ಮರಣ ಸಮಯದಲ್ಲಿ ಮಗ ಮಾತ್ರ ಇರಬೇಕೆಂದು!
ಜೊತೆಗೆ..., ಅಮ್ಮ ಇಲ್ಲದಿರಲು ಕಾರಣವೂ ವಿಧಿನಿಯಮವೇ!
ನನಗೆ ನೆನಪುದಿಸಿದಾಗಿನಿಂದ..., ಅಪ್ಪ ಅಮ್ಮ ಅಪರೂಪಕ್ಕಾದರೂ..., ಒಂದು ವಾರಕ್ಕಿಂತ ಹೆಚ್ಚು ಸಮಯ ಬೇರೆ ಬೇರೆ ಇದ್ದದ್ದು ನಾನು ನೋಡಿಲ್ಲ! ಯಾವಾಗಲೂ ಒಟ್ಟಿಗೆ. ಜಗಳವಂತೂ ನೋಡೇ ಇಲ್ಲ.
ಅಭಿಪ್ರಾಯ ವ್ಯತ್ಯಾಸ ಇರಲಿಲ್ಲವಾ?
ಇತ್ತು... ಕೆಲವೊಂದು ವಿಷಯದಲ್ಲಿ ಅಪ್ಪ ಉತ್ತರ ಅಮ್ಮ ದಕ್ಷಿಣ!
ಆದರೆ ಅವರ ಅದ್ಭುತ ಹೊಂದಾಣಿಕೆ....!
ನನಗಂತೂ ತುಂಬಾ ಮಜ ಅನ್ನಿಸುತ್ತಿದ್ದ ವಿಷಯ..., ಯಾವುದೇ ಫಂಕ್ಷನ್ ಇರಲಿ, ಜನಸಂದಣಿ ಎಷ್ಟೇ ಇರಲಿ..., ಯಾರು ಎಲ್ಲಾದರೂ ಹೇಗಾದರೂ ಇರಲಿ..., ಅಪ್ಪ ಅಮ್ಮ ಒಟ್ಟಿಗೇ ಇರುತ್ತಿದ್ದರು! ಒಟ್ಟಿಗೇ ಮಲಗುತ್ತಿದ್ದರು! ಅಪ್ಪನ ಹೆಗಲಮೇಲೆ ತಲೆಯಿಟ್ಟು ಮಲಗುತ್ತಿದ್ದ ಅಮ್ಮನನ್ನು ನೋಡುವುದೇ ಚಂದ! ಎಲ್ಲರೂ ಕಾಣುವಂತೆ ಮಲಗಬೇಕಾಗಿ ಬಂದರೂ ಅವರು ಹಾಗೆಯೇ...!
ಇದೆಲ್ಲಾ ಯಾಕೆ ಹೇಳಿದೆನೆಂದರೆ..., ಇಬ್ಬರೂ 'ಒಂದಾದ' ಮೇಲೆ ಒಂದು ಕ್ಷಣವೂ ಬಿಟ್ಟಿರದಿದ್ದ ಅವರು..., ಅಪ್ಪನ ಮರಣದ ದಿನವೂ ಒಟ್ಟಿಗೇ ಇದ್ದರು- ಮರಣಿಸುವ ಆ ಕ್ಷಣದ ಹೊರತು!
ಮರಣಿಸುವ ಆ ಕ್ಷಣ ಒಟ್ಟಿಗೆ ಇರಲಿಲ್ಲವಲ್ಲಾ- ಅನ್ನುವುದು ಅಮ್ಮನ ಕೊರತೆ!
ಒಂದು ವೇಳೆ ಅಮ್ಮ ಆ ಕ್ಷಣ ಅಪ್ಪನೊಂದಿಗಿದ್ದು ಅಪ್ಪನ ಮರಣದ ಆ ಕೊನೆಯ ಕ್ಷಣದ ಒದ್ದಾಟವನ್ನು ಕಂಡು ಅಮ್ಮನ ಹೃದಯವೂ ನಿಂತು ಹೋಗಿದ್ದರೆ?
ನನಗೆ ಯಾರು?
ಒಟ್ಟಿಗೆ ಇದ್ದಿದ್ದರೆ ಖಂಡಿತಾ ನಿಂತು ಹೋಗುತ್ತಿತ್ತು ಅನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ! ಅಮ್ಮನಿಗೂ ಅದೇ ಬೇಕಿತ್ತೇನೋ...!
ಅದಕ್ಕೇ ದೇವರು ಆ ಕ್ಷಣ ಅಮ್ಮನನ್ನು ಅಪ್ಪನಿಂದ ದೂರ ಇಟ್ಟರು- ನನಗಾಗಿ!
ದೇವರಿಗೆ ಗೊತ್ತು ಅಮ್ಮನೂ ಇಲ್ಲದಿದ್ದರೆ ನನ್ನ ಬದುಕು ನಡೆಯುವುದಿಲ್ಲವೆಂದು!
ನೆನಪಾಗಿ ಅಪ್ಪ ಇಲ್ಲದಿದ್ದ ಕ್ಷಣ ಯಾವುದು?
೩
ಹೇಳಬೇಕೆಂದಿದ್ದ ವಿಷಯ ಇಷ್ಟೇ!
ಇನ್ನು ಪೀಠಿಕೆಯ ವಿಷಯಕ್ಕೆ ಹೋಗೋಣ!
ನಮ್ಮ ಜೀವನದಲ್ಲಿ ಯಾರೊಬ್ಬರೂ ಯಾರೊಬ್ಬರನ್ನೂ "ಪರಿಪೂರ್ಣವಾಗಿ" ಅರ್ಥಮಾಡಿಕೊಳ್ಳುವುದು ಅನ್ನುವುದು ಇಲ್ಲ!
ಪ್ರತಿದಿನದ ಅನುಭವಗಳೇ ನಮ್ಮ ವ್ಕಕ್ತಿತ್ವಕ್ಕೆ ಕಾರಣವಾದ್ದರಿಂದ ಕೆಲವೊಂದು ಸಂದರ್ಭಗಳು ಎದುರಾದ ಹೊರತು ನಮಗೇ ನಮ್ಮ ವ್ಯಕ್ತಿತ್ವದ ಅರಿವಿರುವುದಿಲ್ಲ!
ಸ್ವಲ್ಪವಾದರೂ..., ಅನ್ನುವುದಕ್ಕಿಂತ ಗೆಳೆಯನಿಗೆ ಅರ್ಥವಾದಷ್ಟು ನಾನು ಯಾರಿಗೂ ಅರ್ಥವಾಗಿಲ್ಲ ಅನ್ನುವುದು ನಿಜ! ಅದು ನನ್ನ ಅವನ ವರ್ಷವರ್ಷಗಳ ಒಡನಾಟದ ಫಲಿತಾಂಶ.
ಇನ್ನು ಅಮ್ಮ..., ಅಮ್ಮನಿಗೆ ನಾನು ಅರ್ಥವಾಗುವುದು- ಅನ್ನುವ ಕಾನ್ಸೆಪ್ಟ್ಏ ಇಲ್ಲ!!
ನಾವು ಬೆಳೆಸಿಕೊಂಡ ನಮ್ಮ ವ್ಯಕ್ತಿತ್ವ ಏನೇ ಇರಬಹುದು..., ಆದರೆ ನಮ್ಮ ಸಹಜ ಗುಣವೆಂದು ಒಂದು ಇದೆ!
ಅದೇ ನಮ್ಮ ಹುಟ್ಟು ಗುಣ!
ನನ್ನ ಹುಟ್ಟು ಗುಣದ ಮೂಲ ಅಪ್ಪ ಅಮ್ಮನೇ ಎಂದಿರುವಾಗ ಅವರಿಗಲ್ಲದೆ ನಾನು ಯಾರಿಗೆ ಅರ್ಥವಾಗುವುದು?!
ಅಪ್ಪ ಅಷ್ಟು ಸುಲಭದಲ್ಲಿ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಅರ್ಥವಾದವರು ಯಾರೂ ಅಷ್ಟು ಸುಲಭದಲ್ಲಿ ಅಪ್ಪನಿಂದ ದೂರ ಹೋಗುತ್ತಿರಲಿಲ್ಲ!
ಹಾಗೆಯೇ ನಾನೂ! ಯಾರೆಂದರೆ ಯಾರಿಗೂ ಒಂದು ಪರ್ಸೆಂಟ್ ಕೂಡ ಅರ್ಥವಾಗದವ! ಅರ್ಥಮಾಡಿಸಲು ಶ್ರಮಿಸಿದಷ್ಟೂ ಅಪಾರ್ಥವೇ ಆಗಿ ಯಾರೂ ಉಳಿಯುವುದೂ ಇಲ್ಲ!
ಇದು ನನ್ನ ವರ್ತನೆ ಅಥವಾ ವ್ಯಕ್ತಿತ್ವದ ವಿಷಯವಾದರೆ..., ನನ್ನ ಹುಟ್ಟು ಗುಣವಾದ ಪ್ರೇಮ ತಾಕಿದ ಯಾರೂ ನನ್ನನ್ನು ಬಿಟ್ಟು ಹೋಗುವುದಿಲ್ಲ- ಹೋಗಿಲ್ಲ!
ಆದರೆ ಅದು ಅಷ್ಟು ಸುಲಭವಾಗಿ ಯಾರಿಗೂ ತಾಕುವುದೂ ಇಲ್ಲ! ತಾಕಿಯೂ ಉಳಿಯದೇ ಹೋದರೆ ಅರ್ಥ..., ಅವರಿಗೆ ಅದರ ಹೊರತು ಬೇರೆ ಏನೋ ಬೇಕು ಅನ್ನುವುದು- ಲೆಕ್ಕಾಚಾರದ ಜೀವನ!! ಅದು ನನ್ನಲ್ಲಿ ಇಲ್ಲ!
ಅಮ್ಮ....,
ಕೆಲವೊಂದು ಕಥೆಗಳು ನನಗೆ ಹೇಗೆ ಹೊಳೆಯುತ್ತಿದ್ದವು..., ಕೆಲವೊಂದು ಸಮಸ್ಯಗಳಿಗೆ ಪರಿಹಾರ ಹೇಗೆ ದೊರಕುತ್ತಿತ್ತು..., ತತ್ತ್ವ ಚಿಂತನೆಯಾದರೂ, ಪ್ರೇಮಾನುಭೂತಿಯಾದರೂ ನನಗೆ ಹೇಗೆ ಅರಿವಿಗೆ ಎಟುಕುತ್ತಿತ್ತು..., ನಾನು ಹೇಗೆ ಅದನ್ನು ಅನುಭಾವಿಸುವಂತಾಗುತ್ತಿದ್ದೆ ಅನ್ನುವುದಕ್ಕೆಲ್ಲಾ ಉತ್ತರ- ಅಮ್ಮ!
ಅಮ್ಮ ನಾನು..., ಪ್ರಪಂಚಕ್ಕೆ ಅರ್ಥವಾಗಿದ್ದೇವೆಯೇ- ಅನ್ನುವುದು ಪ್ರಶ್ನೆಯೇ ಹೊರತು...,
ಅಮ್ಮನಿಗೆ ನಾನು ನನಗೆ ಅಮ್ಮ ಅರ್ಥವಾಗಿದ್ದೇವೆಯೇ- ಅನ್ನುವುದು ಪ್ರಸಕ್ತಿಯೇ ಅಲ್ಲ!
ಅಮ್ಮ ಮಗನ ಕಥೆ ಬರೆದ್ರಾoತಾ national emblemಊ.. ಅಮ್ಮ ಅಪ್ಪನ ಪ್ರೇಮದ ಕಥೆ ತಿಳಿಯ ಬಯಸಿದ ಮಗ.. ಅದರ ಇತಿಹಾಸದ ಮೇಲೆ ತನ್ನ ಬೇರುಗಳನ್ನು ಇನ್ನಷ್ಟು ಭದ್ರಗೊಳಿಸಿಕೊಳ್ಳಬಯಸಿದ ಮಗ, ಮತ್ತೆ ತಾನು ಓರ್va ಕಥೆಗಾರನಾದರಿಂದ ಅದನ್ನು ದಾಖಲಿಸುವ ವಿಷಯ ಬಂದಾಗ ಸೌಭಾಗ್ಯ ಅನ್ನಿಸಬೇಕಿತ್ತು.. ದೌರ್ಭಾಗ್ಯ ಯಾಕನ್ನಿಸಿತ್ತು.. ಯಾವ ಮಕ್ಕಳು ತಮ್ಮ ತಂದೆಯರ ಪ್ರೇಮದ ಕಥೆ ಬರೆದಿಲ್ಲ, ಬರಿಲಾರರು. ಅವರ ಪ್ರೇಮ ಕಥೆ ಅವರಿಂದಲೇ ತಿಳಿಯಲಿ, ನಿಮ್ಮಿಂದ ಬರೆಯಲ್ಪಡಲಿ.
ReplyDeleteಗೆಳೆಯ ಅರ್ಥಮಾಡಿಕೊಂಡಿಲ್ಲ ಬಿಡಿ ಅರ್ಥಮಾಡಿಕೊಂಡಿದ್ದರೆ ಅದರ ಕಥೆನೇ ಬೇರೆ ಇರುತ್ತಿತ್ತು ಅರ್ಥ ಆಗಿಯೂ ಅರ್ಥ ಆಗದಂತೆ ನಟನೆಮಾಡುವ ಗೆಳಯರು ಇದ್ದರು ಒಂದೇ ಇಲ್ಲದಿದ್ದರೂ ಒಂದೇ. ಅಪ್ಪ ಅಮ್ಮನ ಪ್ರೇಮ ಇತಿಹಾಸವಾಗಲಿ ಪ್ರೇಮವೇ ಜೀವಂತ ಸಾಕ್ಷಿ ಒಳ್ಳೆಯ ಬದುಕಿಗೆ..ಮಗನಿಗೂ ಅದು ಸ್ಪೂರ್ತಿ ನೀಡುತ್ತದೆ..
ReplyDelete