ಸಿಗರೇಟು- ಕಥೆ

ಸಿಗರೇಟು

"ಓಯ್" ಎನ್ನುವ ಧನಿ ಕೇಳಿ ತಿರುಗಿದೆ. ಹುಡುಗನೊಬ್ಬ ನನ್ನಬಳಿಗೇ ಬರುತ್ತಿದ್ದ! ಅವನ ಮುಗುಳುನಗು ನನ್ನನ್ನು ಆಕರ್ಷಿಸಿತು! ಏನು ಅನ್ನುವಂತೆ ನೋಡಿದೆ. ಸಮೀಪಕ್ಕೆ ಬಂದ. ಅವನ ನಗುವಿನಿಂದಾಗಿ ಗೊಂದಲಗೊಂಡೆ! ತೀರಾ ಸಮೀಪಕ್ಕೆ ಬಂದು ನನ್ನ ಮುಖದ ಬಳಿಗೆ ಬಾಗಿದ! ಒಂದು ಕ್ಷಣಾರ್ಧ ಚಂಚಲಗೊಂಡರೂ ಅವನನ್ನು ಹಿಂದಕ್ಕೆ ತಳ್ಳಿ ಏನು ಅನ್ನುವಂತೆ ನೋಡಿದೆ. ವಿಚಿತ್ರ- ಕೋಪ ಬರಲಿಲ್ಲ ನನಗೆ!

ಮುಗುಳುನಗು ಅರಳುನಗುವಾಯಿತು!

ಸೋ.... ನೀವು ಸ್ಮೋಕರ್!” ಎಂದ!

ಆಶ್ಚರ್ಯವಾಯಿತು! ಮುತ್ತುಕೊಡಲು ಬಂನೆಂದುಕೊಂಡರೆ ದ್ರೋಹಿ ಬಾಯಿಯ ವಾಸನೆ ನೋಡಲು ಬಂದಿದ್ದಾನೆ! ಅವನು ಹೇಳಿದ್ದು ನಿಜವೇ ಆದರೂ ಮುಖ ಸಿಂಡರಿಸಿದೆ.

ಒಂದು ಸಿಗರೇಟು ಕೊಡುತ್ತೀರ?” ಎಂದ.

ಹಿಂಜರಿಕೆಯಿಂದಲೇ ಹ್ಯಾಂಡ್ ಬ್ಯಾಗಿನಿಂದ ಸಿಗರೇಟು ತೆಗೆದು ಕೊಟ್ಟೆ...!

ಲೈಟರ್....?” ಎಂದ. ಕೊಟ್ಟೆ.

ನೀವು ಹಚ್ಚಿಕೊಳ್ಳುವುದಿಲ್ಲವೇ...?” ಎಂದ.

ಸುತ್ತಲೂ ನೋಡಿದೆ. ಪಬ್ಲಿಕ್ಕಿನಲ್ಲಿ- ಅದರಲ್ಲೂ ನನ್ನದೇ ಆದ ಗುಂಪಿನ ಮಧ್ಯೆಯಲ್ಲದೆ ಸಿಗರೇಟು ಸೇದುವವಳಲ್ಲ! ನನ್ನ ಸಂಶಯವನ್ನು ನೋಡಿ,

... ಪ್ರೈವೇಟಾಗಿ ಸೇದುತ್ತೀರ... ಅಥವಾ ಸೇದುವವರ ಮಧ್ಯೆ ಮಾತ್ರ ಸೇದುತ್ತೀರ! ಗುಡ್.... ಅಕ್ಕಪಕ್ಕದವರು ಬದುಕಿಕೊಳ್ಳಲಿ...!”

ನಾನೂ ಸಿಗರೇಟು ತೆಗೆಯಲು ಹೋದೆ. ತಡೆದ...,

ಬೇಡಿ... ನೀವೇ ಸರಿಯಿರುವಾಗ ಯಾಕೆ ತಪ್ಪಾಗುತ್ತೀರ? ಸುಮ್ಮನೆ ನನ್ನನ್ನೇ ನೋಡುತ್ತಿರಿ....” ಎಂದ!

ಅವನನ್ನೇ ನೋಡಿದೆ. ಒಂದೊಂದೇ ಪಫ್ ಎಳೆದು ಹೊಗೆಯನ್ನು ಪೂರ್ತಿಯಾಗಿ ಒಳಕ್ಕೆ ಸೇರಿಸಿ ಮೂಗು ಬಾಯಿಗಳಮೂಲಕ ಹೊರಕ್ಕೆ ಬಿಡುತ್ತಿದ್ದ! ಅದರಲ್ಲೇನು ಆಶ್ಚರ್ಯ? ನಾನೂ ಮಾಡುವವಳೇ....! ಅವನು ನನ್ನ ಮುಖವನ್ನು ನೋಡಿ, 'ಏನು' ಎನ್ನುವಂತೆ ಹುಬ್ಬು ಕುಣಿಸಿದ. ನಂತರ ಬಗ್ಗಿ ತನ್ನ ಕಾಲುಗಳನ್ನು ನೋಡಿದ! ನಾನೂ ನೋಡಿದೆ. ಆಶ್ಚರ್ಯ....!

ಅವನು ಮೊದಲಬಾರಿ ಹೊಗೆ ಎಳೆದು ಬಿಟ್ಟಾಗ ಅವನ ಎರಡೂ ಕಾಲಿನ ಹೆಬ್ಬೆರಳು ಕಪ್ಪಾಯಿತು- ಇದ್ದಿಲಿನಿಂತೆ! ಒಂದೊಂದು ಬಾರಿ ಹೊಗೆಯನ್ನು ಎಳೆದು ಬಿಟ್ಟಾಗಲೂ.... ಅವನ ಹೆಬ್ಬೆಟ್ಟಿನಿಂದ ಪಾದ, ಕಾಲುಗಳು, ತೊಡೆಗಳು, ಸೊಂಟ... ಹಾಗೆಯೇ ಮೇಲಕ್ಕೆ ಕಪ್ಪಾಗುತ್ತಾ ಹೋಯಿತು....! ಸಿಗರೇಟು ಮುಗಿಯುವ ಸಮಯಕ್ಕೆ ಸರಿಯಾಗಿ..... ಅವನು ಪೂರ್ತಿಯಾಗಿ ಕಪ್ಪಗಾಗಿದ್ದ... ನಂತರ ನೋಡು ನೋಡುತ್ತಿದ್ದಂತೆಯೇ... ಬೂದಿಯಾಗಿ... ಉದುರಿ ಹೋದ!!

ತಟ್ಟನೆ ಎಚ್ಚರವಾಯಿತು... ಗಾಬರಿಯಿಂದ ಸುತ್ತಲೂ ನೋಡಿದೆ. ವಾಸ್ತವದ ಅರಿವಾಗಲು ಎರಡು ನಿಮಿಷ ಬೇಕಾಯಿತು! ಕನಸಿನಲ್ಲಿ ಕಂಡ ಸಿಗರೇಟು ಸೇದುತ್ತಿದ್ದ ಹುಡುಗ ನಾನೇ... ಹುಡುಗಿ... ಎಲ್ಲೋ ನೋಡಿದ ನೆನಪು... ಯೋಚಿಸಿದೆ... ಯೋಚಿಸಿದೆ.... ಸಂಶಯವಾಗಿ ಎದ್ದು ದೇವರ ಕೋಣೆಗೆ ಹೋದೆ....

ನಗುತ್ತಾ ನನ್ನನ್ನೇ ನೋಡುತ್ತಿರುವ- ದೇವಿ!!

Comments