ನಾಯಿ- ಕಥೆ

ನಾಯಿ

ನಾಯಿ... ಶ್ವಾನ... ಬಾಲ ಅಲ್ಲಾಡಿಸುತ್ತಾ ನಡೆಯುತ್ತಿತ್ತು... ಎಲ್ಲೋ ಏನೋ ವಾಸನೆ ಸಿಕ್ಕಿದೆ... ಆತುರವಿದೆ... ವಾಸನೆಯ ಮೂಲ ಕಂಡುಬರುತ್ತಿಲ್ಲ... ಹುಡುಕಾಟ... ನನಗೂ ಗೊತ್ತು... ಏನೋ ಇದೆ... ವಾಸನೆ ಹಿಡಿದಿದ್ದು ನಾಯಿಯಾದರೂ ಅದಕ್ಕಿಂತ ಮುಂಚೆ ನಾನು ತಲುಪಬೇಕು... ಅದೇ ಮೊದಲು ನೋಡಲಿ... ವಾಸನೆಯ ಮೂಲ ಎಲ್ಲಿದೆ ಎಂದು ತಿಳಿದಮೇಲೆ ನಾಯಿಯನ್ನು ಓಡಿಸಿ ನಾನು ತಲುಪಬಹುದು....!! ಕಂಡು ಹಿಡಿದದ್ದು ಮನುಷ್ಯ ತಿನ್ನಲು ಯೋಗ್ಯವಾಗಿರುವಂತಹದ್ದಾದರೆ? ನಾಯಿಗೇನು? ಏನುಬೆಕಿದ್ದರೂ ತಿನ್ನಬಹುದು.. ನನಗೆ ಹಾಗೆಯೇ? ಮನುಷ್ಯ ನಾನು.. ಸ್ಟಾಂಡೇರ್ಡ್ ನೋಡಬೇಡವೇ? ಎಂಜಲಾದರೂ ಪರವಾಗಿಲ್ಲ.... ಮನುಷ್ಯ ತಿನ್ನುವುದೇ ಆಗಬೇಕು!

ಯಾಕೋ ನಾಯಿಯ ಆತುರ ಕಡಿಮೆಯಾಯಿತು...! ನನ್ನ ಹಿಂಬಾಲಿಸುವಿಕೆಯ ವಾಸನೆ ಸಿಕ್ಕಿತೇ? ನಿಜ!! ನನ್ನನ್ನೊಮ್ಮೆ ತಿರುಗಿ ನೋಡಿತು... ಇರು ನಿನಗೆ ಮಾಡುತ್ತೇನೆ ಎನ್ನುವಂತೆ... ಪಕ್ಕದಲ್ಲಿಯೇ ನೆರಳಿನಲ್ಲಿ ಮಲಗಿತು. ಏನೋ ಕಾರಣವಿದೆ ಇಲ್ಲದಿದ್ದರೆ ಹಾಗೆ ಮಾಡುವುದಿಲ್ಲ. ಯೋಚಿಸಿದೆ... ಹ್ಞಾ... ಮೊನ್ನೆಯ ಮೊನ್ನೆ.... ಇದೇ ನಾಯಿಯನ್ನು- ಅದರ ಜಾಡಿನಲ್ಲಿಯೇ ಹೋಗಿ ವಂಚಿಸಿ ಅದರ ಕಂಡು ಹಿಡಿತವನ್ನು- ಆಹಾರವನ್ನು ನಾನು ಕಬಳಿಸಿದ್ದೆ!! ಮೊನ್ನೆಯ ಮೊನ್ನೆ!! ಅಂದೇ ನನ್ನ ಕೊನೆಯ ಊಟವಾಗಿದ್ದು!!

ನೆನಪಿದೆ ದುಷ್ಟ ಶ್ವಾನಕ್ಕೆ!!!

ದುಷ್ಟ ಶ್ವಾನ!! ಛೆ!! ಅದೇಕೆ ದುಷ್ಟ?? ನಾನಲ್ಲವೆ ದುಷ್ಟ? ಅದರ ಆಹಾರವನ್ನು ವಂಚನೆಯಿಂದ ಪಡೆಯುವ ನಾನು?? ನಾಯಿಯ ಜಾಡಿಲ್ಲದಿದ್ದರೂ ಹುಡುಕಬಹುದಾಗಿದ್ದ ಆಹಾರವನ್ನು ಹುಡುಕಲು ಹೋಗಲಿಲ್ಲ...! ಅದಕ್ಕೇ ಬಿಟ್ಟುಕೊಟ್ಟೆ!! ಬಿ-ಟ್ಟು-ಕೊ-ಟ್ಟೆ.... ಅಲ್ಲಿಯೂ ನನ್ನ ಅಹಂಕಾರವೇ!!

ಮನಸ್ಸಿನಲ್ಲಿ ಆನಂದ! ನಿಜ.. ಆನಂದ! ಊಟ ಮಾಡದಿದ್ದರೂ ಪರವಾಗಿಲ್ಲ ಬಿಟ್ಟು ಕೊಡುವುದರಲ್ಲಿನ ಆನಂದ!

ನನ್ನ ದಿಕ್ಕು ತಪ್ಪಿದ್ದು ನೋಡಿ ನಾಯಿ ಬೊಗಳಿತು! ಆಕಡೆ ಎಲ್ಲಿ ಹೋಗುತ್ತೀಯ ಈಕಡೆ ಬಾ ಅನ್ನುವಂತೆ! ಅದನ್ನೇ ನೋಡಿದೆ... ಹಿಂಬಾಲಿಸು ಅನ್ನುವಂತೆ ನಡೆಯಿತು!! ನಾನು ಹಿಂಬಾಲಿಸಲಿಲ್ಲ... ಬರಲೇ ಬೇಕು ಅನ್ನುವಂತೆ ಬೊಗಳಿತು!! ಹಿಂಬಾಲಿಸಿದೆ!! ತಿರುತಿರುಗಿ ನೋಡುತ್ತಾ ಮುಂದಕ್ಕೆ ನಡೆಯಿತು!! ಆಶ್ಚರ್ಯವಾಯಿತು... ಅದೂ ಕೂಡ ನನ್ನಂತೆಯೇ ಯೋಚಿಸಿತೆ?? ಪಾ-ಪ ಮನುಷ್ಯ ಎಂದು??

ದೂರದಲ್ಲಿ ಒಂದು ಸಮಾರಂಭ ನಡೆಯುತ್ತಿತ್ತು.... ಆತುರದಲ್ಲಿ ಅಲ್ಲಿಗೆ ಹೋ-ದೆ-ವು!!

ತಿಂದು ಮುಗಿಸುವವರು ತಂದು ಎಸೆಯುವ ಎಲೆಗಾಗಿ ಕಾಯುತ್ತಾ ನಿಂತೆವು! ಆಗ....

ಮೊದಲ ಏಟು ತಲೆಗೆ! ನನ್ನ ತಲೆಗೆ- ನಾಯಿ ಇದ್ದರೂ ಚಿಂತೆಯಿಲ್ಲ- ಊಟವನ್ನೇ ನೋಡುತ್ತಿದ್ದ ನನ್ನನ್ನು ಓಡಿಸಲು ಯಾರೋ ಕಲ್ಲು ಎಸೆದರು. ಮನುಷ್ಯ ನಾನು!! ನನ್ನನ್ನೇ ಓಡಿಸಿದರೇ...!? ನಾನೇನು ಮಾಡಿದ್ದೆ?

ಒಂದು ಕ್ಷಣ...!! ನನ್ನನ್ನು ಹೊಡೆದವನ ನೇರಕ್ಕೆ ನುಗ್ಗಿದ ನಾಯಿ - ಶ್ವಾನ- ಅವನನ್ನು ಕಚ್ಚಿ, ನನ್ನಕಡೆ ನೋಡಿ ಓಡು ಎನ್ನುವಂತೆ ಬೊಗಳಿ- ಓಡಿತು!

ಓಡಿದೆ... ಅವರೇನೂ ಮಾಡಲಾಗದ ಜಾಗಕ್ಕೆ ತಲುಪಿದಾಗ ಕುಸಿದು ಕುಳಿತೆ! ಬಾಲ ಆಡಿಸುತ್ತಾ ಸಮೀಪಕ್ಕೆ ಬಂತು ನಾಯಿ! ಅದರ ತಲೆಯನ್ನು ಕೃತಜ್ಞತೆಯಿಂದ ನೇವರಿಸಿದೆ! ನನ್ನ ಕಣ್ಣಿನಲ್ಲಿ ಹಸಿವನ್ನು ಕಂಡೋ ಏನೋ.... ವಾಸನೆಗಾಗಿ ಹುಡುಕುತ್ತಿತ್ತು! ಸ್ವಲ್ಪ ದೂರ ಹೋಗಿ, ಏನೋ ವಾಸನೆ ಸಿಕ್ಕಿದಂತೆ- ಬಾ ಅನ್ನುವಂತೆ ನನ್ನನ್ನು ನೋಡಿ ಬೊಗಳಿ- ಆ ಕಡೆಗೆ ಹೆಜ್ಜೆ ಹಾಕಿತು!!

ಯಜಮಾನನ ಹಿಂದೆ ಬಾಲ ಅಲ್ಲಾಡಿಸುತ್ತಾ ಹೋಗುವ ವಿಧೇಯ ನಾಯಿಯಂತೆ ಹಿಂಬಾಲಿಸಿದೆ!!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!