ಹೀಗೊಂದು ಕಥೆ!

ಬೆಳಗ್ಗೆ ನಾಲ್ಕೂವರೆ. ಮನೆಯಿಂದ ಗಾಡಿಯಲ್ಲಿ ಬೆಟ್ಟದ ತಪ್ಪಲಿಗೆ ಹೋಗ್ತಿದ್ದೆ. ಸ್ಟೆಪ್ ಹತ್ತಲು. ಎಂದಿನಂತೆ ಸುಮಾರು ಹತ್ತಿಪ್ಪತ್ತು ನಾಯಿಗಳು. ಗಾಡಿ ಸ್ಪೀಡ್ ಇದ್ದರೆ ಅಟ್ಟಿಸುತ್ತದೆ. ಸ್ಲೋ ಮಾಡಿದರೆ, ನಿಲ್ಲಿಸಿದರೆ- ಓಡಿ ಹೋಗುತ್ತವೆ! ಒಂದು ತಿರುವಿನ ಬಳಿ ತಲುಪಿದಾಗ ಒಬ್ಬರು ಹೆಂಗಸು. ಪಾಪ ನಾಯಿಗಳನ್ನು ಕಂಡು ಹೆದರಿ ನಿಂತಿದ್ದಾರೆ. ಕಲ್ಲುಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಅವರನ್ನು ದಾಟಿ ಹೋದೆ. ತಿರುವು ತಿರುಗಿ ನಿಂತೆ. ಎರಡುನಿಮಿಷವಾದರೂ ಅವರು ಕಾಣಿಸಲಿಲ್ಲ. ಮನಸ್ಸು ತಡೆಯದೆ ವಾಪಸ್ ಬಂದೆ. ನಾಯಿಗಳು ಕಚ್ಚುತ್ತವೋ ಇಲ್ಲವೋ..., ಹೆದರಿಕೆಯಾಗುವುದು ನಿಜ. ನನಗಾದರೆ ಗೊತ್ತು..., ಪ್ರಾಕ್ಟೀಸ್ ಆಗಿದೆ- ಕಚ್ಚುವುದಿಲ್ಲ! ಅವರು ನಾಯಿಗಳನ್ನು ದಾಟಲಾಗದೆ ಚಡಪಡಿಸುತ್ತಿದ್ದಾರೆ. ಯಾರಿಗೋ ಫೋನ್ ಮಾಡುತ್ತಿದ್ದಾರೆ- ಧೈರ್ಯಕ್ಕೆ ಇರಬಹುದು! ನಾನು ಹೋಗಿ ನಾಯಿಗಳಿಗೂ ಅವರಿಗೂ ಅಡ್ಡ ನಿಂತೆ. ಹೆದರಿಕೆಯಿಂದಲೇ ಹೇಗೋ ದಾಟಿ ಹೋದರು. ಅವರು ತಿರುವು ತಿರುಗುವುದನ್ನೇ ಕಾಯುತ್ತಿದ್ದು ನಾನೂ ಹೊರಟೆ. ನಿಧಾನಕ್ಕೆ ಅವರನ್ನು ದಾಟಿ ಹೋಗುವಾಗ ಅವರು ಫೋನ್‌ನಲ್ಲಿ ಹೇಳುತ್ತಿರುವುದು ಕೇಳಿಸಿತು.

“ನಾಯಿಗಳನ್ನ ಹೇಗೋ ಸಂಭಾಳಿಸಬಹುದು ಮನುಷ್ಯರನ್ನ ಕಷ್ಟ! ಅವ್ನು ಹಾಗೆ ಬಂದು ನಿಂತಾಗ ಜೀವ ಹೋದಂಗಾಯ್ತು! ಹಿಂದೆ ಯಾರೋ ಬಂದ್ರು ಅನ್ಸುತ್ತೆ ಹಾಗೇ ನಿಂತಿದ್ದ-” ಎಂದು ಹೇಳಿ ನನ್ನನ್ನು ಗಮನಿಸಿ...,

“ಯಾಕೋ ಫಾಲೋ ಮಾಡ್ತಿದಾನೆ ಅನ್ನಿಸ್ತಿದೆ- ಹೆದರಿಕೆಯಾಗುತ್ತಿದೆ!” ಎಂದರು.

ಸಾರ್ಥಕವಾಯಿತು ಜೀವನ! ನಿಂತು ವಿವರಿಸಬೇಕು ಅನ್ನಿಸಲಿಲ್ಲ! ಪ್ರಪಂಚದಬಗ್ಗೆ ನನ್ನ ಅಭಿಪ್ರಾಯವೇ ಅವರದ್ದೂ...! ಅಭಿಮಾನವೆನ್ನಿಸಿತು! ಅವರಕಡೆ ನುಗ್ಗುವಂತೆ ಮಾಡಿ ಹೆದರಿಸಿ ಹಾಗೇ ಹೊರಟು ಹೋದೆ!

Comments

Popular posts from this blog

ಇನ್ನೂರು!

ಹಾರರ್ ಥೀಂ

ದಾರಿಯಲ್ಲಿ ಸಿಕ್ಕವಳು!