ಹೋಟೆಲ್ ಸಿತಾರ
ಹೋಟೆಲ್ ಸಿತಾರ- ಪಾಲಕ್ಕಾಡ್!
ಸೂಪರ್ ಎಕಾನಮಿ ರೂಂ ಬುಕ್ ಮಾಡಿದ್ದೆ. ಅಂದರೆ ಅತಿ ಕಡಿಮೆ ಬೆಲೆಯ ರೂಂ!
ನಾಲಕ್ಕನೆಯಬಾರಿ ಈ ಹೋಟೆಲ್ಗೆ ಬರುತ್ತಿರುವುದು!
ಒಬ್ಬನೇ... ಮೂರನೆಯ ಮಹಡಿಯಲ್ಲಿ ರೂಂ.
ಭರ್ಜರಿ ಮಳೆ.
ಬರಗಾಲ ಡಿಕ್ಲೇರ್ ಆಗಿತ್ತು! ಜೊತೆಗೆ..., ಜೂನ್ ಮುಗಿದರೂ ಮಳೆ ಬಂದಿರಲಿಲ್ಲವಾದ್ದರಿಂದ..., ಮಳೆಯೇ ಬರುವುದಿಲ್ಲ ಅನ್ನುವ ಅತಿಯಾದ ನಂಬಿಕೆಯಿಂದ ಟೂ-ವೀಲರ್ನಲ್ಲಿಯೇ ಬಂದಿದ್ದೆ.
ಹಸನೂರು ಚೆಕ್ಪೋಸ್ಟ್ ದಾಟಿ ಬನ್ನಾರಿ ಹೇರ್ಪಿನ್ ಕರ್ವ್ಗಳಲ್ಲಿ ಗಾಡಿ ಓಡಿಸುವಾಗ ಶುರುವಾಯಿತು ಮಳೆ!
ಎಲ್ಲಿ ನಿಲ್ಲಿಸುವುದು?
ನನಗೇನೂ ಮಳೆಯಲ್ಲಿ ಗಾಡಿ ಓಡಿಸುವುದು ಹೊಸದಲ್ಲ! ಒಮ್ಮೆ ಒದ್ದೆಯಾದರೆ ಮುಗಿಯಿತು..., ತಲುಪಬೇಕಾದ ಜಾಗ ತಲುಪಿದಮೇಲೆಯೇ ನಿಲ್ಲಿಸುವುದು! ಮಧ್ಯದ ಟಿ-ಬ್ರೇಕ್ ಇದ್ದೇ ಇರುತ್ತೆ ಹೊರತು..., ಮಳೆ ಅನ್ನುವ ಕಾರಣಕ್ಕೆ ಎಲ್ಲೂ ನಿಂತುಕೊಳ್ಳುವುದಿಲ್ಲ!
ಆದರೂ ಇಷ್ಟು ಮಟ್ಟಿನ ಮಳೆಯಲ್ಲಿ ಇದೇ ಮೊದಲು! ಪಾಲಕ್ಕಾಡ್ವರೆಗೂ ಗ್ಯಾಪ್ಏ ಇಲ್ಲದಂತೆ!
ಹೋಟೆಲ್ ತಲುಪಿ ರಿಸಪ್ಷನ್ ಬಳಿ ಹೋದಾಗ ಪರಿಚಯದ ನಗು. ಒದ್ದೆಯಾದ ನನ್ನನ್ನು ಕಂಡು ಕೀ ತೆಗೆದುಕೊಟ್ಟು...,
“ಮೊದಲು ಫ್ರೆಶ್ಶಪ್ಪಾಗಿ ಬನ್ನಿ, ಫಾರ್ಮಾಲಿಟೀಸ್ ಆಮೇಲೆ ನೋಡ್ಕೋಳೋಣ!” ಎಂದರು.
“ಎಷ್ಟು ಹೊತ್ತಿಗೆ ಬರೋಕೆ ಹೇಳಿದ್ದಾರೆ?!” ಎಂದು ಕೇಳಿದೆ.
“ಎಂಟು ಗಂಟೆಗೆ...!” ಎಂದರು.
ಸಮಯವನ್ನು ನೊಡಿಕೊಂಡೆ. ಈಗ ಇನ್ನೂ ಐದು ಗಂಟೆ.
ಟಕಟಕನೆ ಮೆಟ್ಟಿಲು ಹತ್ತಿ..., ನನ್ನ ಎಂದಿನ ರೂಮಿನ ಬಾಗಿಲು ತೆಗೆದು ಒಳಬಂದೆ. ಬಾಗಿಲು ಹಾಕಿ, ಅಲ್ಲಿಯೇ ಒದ್ದೆ ಬಟ್ಟೆಯನ್ನು ಕಳಚಿ, ಬ್ಯಾಗ್ನಿಂದ(ವಾಟರ್ಪ್ರೂಫ್!) ಟವೆಲ್ ತೆಗೆದುಕೊಂಡು ಒದ್ದೆಬಟ್ಟೆಗಳೊಂದಿಗೆ ಬಾತ್ರೂಂ ಸೇರಿದೆ.
ಬಟ್ಟೆಗಳನ್ನು ಬಕೆಟ್ನಲ್ಲಿ ಹಾಕಿ, ಟವೆಲ್ ಹ್ಯಾಂಗರ್ಗೆ ಹಾಕಿ, ಶವರ್ಕೆಳಗೆ ನಿಂತೆ!
ಶವರ್ಬಾತ್ ನನಗೆ ತುಂಬಾ ಇಷ್ಟ! ಕಣ್ಣು ಮುಚ್ಚಿ ಶಿವನನ್ನು ಧ್ಯಾನಿಸುತ್ತಾ ನಿಂತುಬಿಡುತ್ತೇನೆ! ಗಂಗೆ ಧುಮುಕಿದಾಗ ಶಿರವೊಡ್ಡಿ ನಿಂತ ಶಿವನಂತೆಯೇ....!!
ಐದು ನಿಮಿಷದ ನಂತರ ನಿಜವಾದ ಸ್ನಾನ!
ಸ್ನಾನವನ್ನು ಮುಗಿಸಿ ಟವೆಲ್ ತೆಗೆದುಕೊಳ್ಳುವಾಗ ನೋಡುತ್ತೇನೆ..., ಬಕೆಟ್ಗೆ ಹಾಕಿದ ನನ್ನ ಬಟ್ಟೆಗಳೂ ಇದೆ- ಹಿಂಡಿ ಇಟ್ಟಂತೆ!!
ಗೊಂದಲಗೊಂಡೆ! ಬಕೆಟ್ಗೆ ಹಾಕಿದ್ದು ನೆನಪಿದೆ, ಹಿಂಡಿದ್ದು ನೆನಪಿಲ್ಲ!
ತಲೆಯೊಳಗೆ ಸಣ್ಣ ಮರ್ಮರ..., ಇಷ್ಟುಬೇಗ?!
ಮೈ ಒರೆಸಿ ಬಟ್ಟೆಗಳೊಂದಿಗೆ ಹೊರಬಂದೆ. ಫ್ಯಾನ್ ಹಾಕಿ ಚೇರ್ ಮತ್ತು ಟೇಬಲ್ಗಳ ಮೇಲೆ ಬಟ್ಟೆಗಳನ್ನು ಹರಡುವ ಉದ್ದೇಶ! ನೋಡುತ್ತೇನೆ..., ಬಾಗಿಲಬಳಿ, ನೆಲದಮೇಲಿಟ್ಟಿದ್ದ ಬ್ಯಾಗ್ ಟೇಬಲ್ ಮೇಲಿದೆ!
ನಾನು ಹಾಕಬೇಕಾದ ಒಂದು ಜೊತೆ ಬಟ್ಟೆ ಮಂಚದ ಮೇಲಿದೆ!
ತಲೆಕೆಟ್ಟಿತು!
ಕೆಡಬಾರದು- ಇಷ್ಟು ಮಟ್ಟಿಗೆ ಅಲ್ಲವಾದರೂ ಇದೇ ಅನುಭವಕ್ಕಾಗಿಯೇ ತಾನೆ ಈ ಹೋಟೆಲ್ಗೆ ಬರುತ್ತಿರುವುದು?!
ಮೊದಲಸಾರಿ ಬಂದಾಗ ರಾತ್ರಿ ಲೈಟ್ ಆಫ್ ಮಾಡಿದರೆ ಸಾಕು- ಮತ್ತೊಬ್ಬರ ಉಸಿರಾಟದ ಶಬ್ದ ಕೇಳಿಸುತ್ತಿತ್ತು! ಥ್ರಿಲ್ ಅನ್ನಿಸಿದರೂ ಎರಡುದಿನವೂ ರಾತ್ರಿ ಪೂರ್ತಿ ಲೈಟ್ ಹಾಕಿಯೇ ಮಲಗಿದ್ದೆ!
ಎರಡನೇಸಾರಿ ಬಂದಾಗ ಇನ್ನೂ ಮಜವಾಗಿತ್ತು..., ಮಧ್ಯದಲ್ಲಿ ಗ್ಯಾಪ್ ಬರುವಂತೆ ಎರಡು ಗೋಡೆಗೆ ಒರಗಿಸಿ ಇಟ್ಟಿರುವ ಸಪರೇಟ್ ಮಂಚಗಳು. ಒಂದರಲ್ಲಿ ಬ್ಯಾಗ್, ಬಟ್ಟೆಗಳು, ತಂದ ಫುಡ್ ಎಲ್ಲವನ್ನೂ ಇಟ್ಟು ಇನ್ನೊಂದರಲ್ಲಿ ಮಲಗಿದ್ದೆ. ಲೈಟ್ ಆಫ್ ಮಾಡಿದರೆ ಸಾಕು ಆ ಮಂಚದಮೇಲೆ ಯಾರೋ ಮಲಗಿರುವಂತೆ ಫೀಲ್ ಆಗುತ್ತಿತ್ತು! ಲೈಟ್ ಆನ್ ಮಾಡಿದರೆ ಇಲ್ಲ! ಎಷ್ಟೇ ಹೆದರಬಾರದು, ಲೈಟ್ ಆಫ್ ಮಾಡಿಯೇ ಮಲಗಬೇಕು ಅಂದುಕೊಂಡರೂ ಆಗದೆ ಮೂರುದಿನವೂ ರಾತ್ರಿ ಪೂರ್ತಿ ಲೈಟ್ ಹಾಕಿಯೇ ಮಲಗಿದ್ದೆ!
ಮೂರನೆಯಸಾರಿ ಬಂದಾಗ ಲೈಟ್ ಆಫ್ ಮಾಡಿದರೆ ಸಾಕು ನಿಟ್ಟುಸಿರುಗಳು, ದೀರ್ಘನಿಶ್ವಾಸಗಳು, ಅಳುವಿನ ಶಬ್ದದ ಹೊರತು ಬೇರೇನೂ ಇರಲಿಲ್ಲ! ಲೈಟ್ ಹಾಕಿದರೆ ಶಬ್ದವಿಲ್ಲ! ಆಗ ಲೈಟ್ ಆಫ್ ಮಾಡಿ ಮಲಗುವ ಧೈರ್ಯವಿತ್ತಾದರೂ ಆ ಶಬ್ದಗಳಿಂದಾಗಿ ನಿದ್ದೆ ಬರುವುದಿಲ್ಲ ಅನ್ನಿಸಿ ಲೈಟ್ ಹಾಕಿಯೇ ಮಲಗಿದ್ದೆ- ಎರಡುದಿನವೂ!
ಈಸಾರಿ ಮಾತ್ರ ಮಸ್ತು ವೆಲ್ಕಂ ನಡೀತಿದೆ! ಇನ್ನೂ ಹಗಲಿನ ಬೆಳಕಿರುವುದರಿಂದ ಕಾಣಿಸುವುದಿಲ್ಲ, ಬೇರೆ ಅನುಭವವಾಗುವುದಿಲ್ಲ ಅನ್ನಿಸಿ ಬಟ್ಟೆಗಳನ್ನು ಒಣ ಹಾಕಿ, ಬೆಡ್ಮೇಲಿದ್ದ ಬಟ್ಟೆಗಳನ್ನೇ ಹಾಕಿಕೊಂಡು ಹೊರಬಂದೆ.
ರಿಸೆಪ್ಷನ್ನಲ್ಲಿ ಫಾರ್ಮಾಲಿಟೀಸ್ ಮುಗಿಸಿ ಸಮಯವನ್ನು ನೊಡಿಕೊಂಡೆ. ಐದೂಮುಕ್ಕಾಲು. ಇನ್ನೂ ಎರಡು ಗಂಟೆ ಸಮಯ ಇದೆ. ಪಾಲಕ್ಕಾಡ್ ಒಂದು ಸುತ್ತು ಹೊಡೆದು, ಏನಾದರೂ ತಿಂದು, ನೀರೋ ಜ್ಯೂಸೋ ತಂದು ರೂಮಲ್ಲಿಡಬೇಕೆಂದು ಹೊರಟೆ.
ವಿಚಿತ್ರ- ಇದುವರೆಗೆ ಮಳೆಯೇ ಬಂದಿಲ್ಲವೇನೋ ಅನ್ನುವಂತೆ ಆಕಾಶ ತಿಳಿಯಾಗಿತ್ತು!
ಈ ಹೋಟೆಲ್ಗೆ ಬರಲು ಶುರುಮಾಡಿದಮೇಲೆ ಎರಡು ವಿಷಯಗಳನ್ನು ಕಂಡುಕೊಂಡಿದ್ದೆ!
ಒಂದು:-
ಒಂದು ಬಾರಿಗೆ ಒಂದೇ ಅನುಭವ! ಎಷ್ಟು ದಿನ ಇದ್ದರೂ! ಅಂದರೆ..., ಮೊದಲಬಾರಿ ಬಂದಾಗ ಎರಡು ರಾತ್ರಿ ಇದ್ದೆ! ಮೊದಲರಾತ್ರಿ ಏನು ಅನುಭವವೋ ಅದೇ ಅನುಭವ ಎರಡನೆಯ ರಾತ್ರಿಯೂ- ಉಸಿರಾಟದ ಶಬ್ದ ಮಾತ್ರ!
ಎರಡನೇಬಾರಿ ಬಂದಾಗ ಪರೀಕ್ಷಿಸಲೆಂದೇ ಮೂರು ರಾತ್ರಿ ತಂಗಿದ್ದೆ! ಮೊದಲರಾತ್ರಿಯ ಅದೇ ಅನುಭವ ಎರಡು- ಮೂರನೆಯ ರಾತ್ರಿಗಳಲ್ಲೂ- ಪಕ್ಕದ ಮಂಚದಲ್ಲಿ ಯಾರೋ ಮಲಗಿರುವಂತೆ!
ಮೂರನೆಸಾರಿ ಬಂದಾಗಲೂ ಸೇಂ-ಟು-ಸೇಂ! ಎರಡು ರಾತ್ರಿ ತಂಗಿದ್ದೆ..., ಒಂದೇ ಅನುಭವ- ನಿಟ್ಟುಸಿರು, ದೀರ್ಘನಿಶ್ವಾಸ, ಅಳು....!
ಈಬಾರಿಯದ್ದು ಹೊಸದು! ಹಗಲಲ್ಲೇ ಹೀಗೆ..., ರಾತ್ರಿ ಏನಾಗುತ್ತದೋ ನೊಡಬೇಕು!
ಎರಡು:-
ನಾನು ಬಳಸುವ ಆ ರೂಂನಲ್ಲಿ ಯಾರೊಬ್ಬರೂ ಒಂದು ರಾತ್ರಿ ಪೂರ್ತಿ ಕಳೆದಿಲ್ಲವಂತೆ- ಹೆದರಿಕೆಯಿಂದ ರೂಂ ಬದಲಿಸುತ್ತಾರೆ ಅಥವಾ ಹೋಟೆಲನ್ನೇ ಬದಲಿಸುತ್ತಾರೆ!
ನಾನೊಬ್ಬನೇ ಪದೇ ಪದೇ ಅದೇ ರೂಂ ಬೇಕೆಂದು ಬುಕ್ ಮಾಡಿಸುವ ಹುಚ್ಚ!
*
ನೀರು, ಸವೆನಪ್, ಮೀಟಿಂಗ್ ಮುಗಿಸಿ ಬಂದಮೇಲೆ..., ರಾತ್ರಿಯೇನಾದರೂ ಹಸಿವಾದರೆ ತಿನ್ನಲು ಕೇಕ್ ತಂದೆ.
ರೂಂನಲ್ಲಿ ಬದಲಾವಣೆಗಳೇನೂ ಕಾಣಲಿಲ್ಲ!
ನನ್ನೊಂದಿಗೆ ಹೊರಗೆ ಸುತ್ತಾಡಲು ಬಂದಿತ್ತೇ?
ಏಳೂ ಮುಕ್ಕಾಲಿಗೆ ಸರಿಯಾಗಿ ರೂಂಗೆ ಬೀಗ ಹಾಕಿ ಹೊರಟೆ. ರಿಸೆಪ್ಷನಿಸ್ಟ್ ನಕ್ಕರು...,
“ಅಪ್ಪ ಕಾಲ್ ಮಾಡಿದ್ದರು! ಕಥೆಗಾರ ಅಂತ ಗೊತ್ತಾದಮೇಲೆ ನಿಮ್ಮ ಬಗ್ಗೆ ತುಂಬಾ ಕುತೂಹಲ ಇದೆ! ಜೊತೆಗೆ ಅದೇ ರೂಮಲ್ಲಿ ನಾಲ್ಕನೇಸಾರಿ ಉಳಿದಿರೋದು ನೋಡಿ ಮೆಚ್ಚುಗೆಯೂ!” ಎಂದು ಹೇಳಿ ತನ್ನ ಮೊಬೈಲ್ ತೆಗೆದು...,
“ಲೊಕೇಷನ್ ಕಳಿಸಿದೀನಿ ನೋಡಿ! ಅವರ ನಂಬರನ್ನೂ ಕಳಿಸಿದೀನಿ, ಅಲ್ಲಿ ಹೋಗಿ ಮನೆ ಗೊತ್ತಾಗದಿದ್ದರೆ ಅವರಿಗೇ ಕಾಲ್ ಮಾಡಿ!” ಎಂದರು.
ಮ್ಯಾಪ್ನಲ್ಲಿ..., ಕಾರಲ್ಲಾದರೆ ಹದಿಮೂರು ನಿಮಿಷ, ಟೂವೀಲರ್ ಆದರೆ ಹತ್ತು ನಿಮಿಷ, ಕಾಲ್ನಡಿಗೆಯಾದರೆ ಮೂವತ್ತು ನಿಮಿಷ ಎಂದು ತೋರಿಸಿತು! ಗಾಡಿ ಹತ್ತಿ..., ಮೊಬೈಲನ್ನು..., ಹ್ಯಾಂಡಲ್ನಲ್ಲಿ ಫಿಕ್ಸ್ ಮಾಡಿದ್ದ ಮೊಬೈಲ್ಸ್ಟಾಂಡ್ಗೆ ಸಿಕ್ಕಿಸಿ, ಗಾಡಿ ಸ್ಟಾರ್ಟ್ ಮಾಡಿದೆ.
ಹಿಂದಿನ ಸೀಟಿನಲ್ಲಿ ಕುಳಿತು ಹೆಗಲಮೇಲೆ ಕೈಯಿಡುವಂತೆ- ನನ್ನ ಎರಡೂ ತೋಳುಗಳ ಮೇಲೆ ಯಾರೋ ಕೈಯಿಟ್ಟಂತೆ ಸ್ಪಷ್ಟ ಅನುಭವ!
ಹೊರಟೆ!!
*
ಮನೆ ಗುರುತಿಸುವುದು ಕಷ್ಟವಾಗಲಿಲ್ಲ. ಹಳೆಯಕಾಲದ "ತರವಾಡು" ಅಂದಿದ್ದರು. ಸುತ್ತಮುತ್ತ ಬೇರೆ ಮನೆಗಳಿದ್ದರೂ ತರವಾಡು ಅನ್ನಿಸುವ ಮನೆ ಇದೊಂದೇ!
ತೊಂಬತ್ತುವರ್ಷದ ವೃದ್ಧ! ಈಸೀಚೇರ್ನಲ್ಲಿ ಕುಳಿತು ಮೊಬೈಲ್ ಸ್ಕ್ರೋಲ್ ಮಾಡುತ್ತಿದ್ದರು!
“ನಮಸ್ತೇ!” ಎಂದೆ.
ನನ್ನೆಡೆಗೆ ಇಣುಕಿದರು. ಕಣ್ಣಿನಲ್ಲಿ ಯಾರು ಅನ್ನುವ ಭಾವ!
“ನಾನು (ನನ್ನ ಹೆಸರು ಹೇಳಿ) ನಿಮ್ಮ ಮಗ ಕಳಿಸಿದರು!” ಎಂದೆ.
“ಬಾ..., ಬಾ...!” ಎಂದು ಕರೆದು ಈಸಿಚೇರ್ನಿಂದ ಈಸಿಯಾಗಿ ಎದ್ದುನಿಂತರು!
“ಏಳಬೇಡಿ!” ಅನ್ನುವಷ್ಟರಲ್ಲಿ ನನ್ನ ಬಳಿಗೆ ಬಂದು ನಿಂತಿದ್ದರು!
ನನ್ನ ಮುಖವನ್ನೇ ಸೂಕ್ಷ್ಮವಾಗಿ ನೋಡಿ...,
“ಹುಂ...., ಕಥೆಗಾರನ ಎಲ್ಲಾ ಲಕ್ಷಣಗಳೂ ಇದೆ!” ಎಂದರು.
“ಕಥೆಗಾರರಿಗೂ ಪ್ರತ್ಯೇಕ ಲಕ್ಷಣಗಳಿರುತ್ತದೆಯೇ?” ಎಂದು ಕೇಳಿದೆ.
“ಹೂಂ..., ನನ್ನಂತಾ ವೃದ್ಧರಿಗೆ ಮಾತ್ರ ಗೊತ್ತಾಗುವ ಲಕ್ಷಣಗಳು!” ಎಂದು ಹೇಳಿ..., ತೀರಾ ಪರಿಚಿತನಂತೆ- ನನ್ನ ಕೈ ಹಿಡಿದು ಮನೆಯೊಳಕ್ಕೆ ಕರೆದುಕೊಂಡು ಹೋದರು.
ವಿಶಾಲವಾದ ಹಾಲ್. ಎರಡುಕಡೆ ಮೆತ್ತನೆಯ ಸೋಫಾಗಳು, ಒಂದುಕಡೆ ಕುರ್ಚಿಗಳು. ಮಧ್ಯದಲ್ಲಿ ಟೀಪಾಯ್..., ಅದರಮೇಲೆ ಎರಡು ಲೋಟದಲ್ಲಿ ಜ್ಯೂಸ್- ಬಣ್ಣವನ್ನು ನೋಡಿದರೆ ಗ್ರೇಪ್ ಇರಬೇಕು... ಕೆಲವು ಪತ್ರಿಕೆಗಳು!
“ಕೂರು!” ಎಂದು ಹೇಳಿ ಸೋಫಾ ತೋರಿಸಿದರು. ಎದುರಿನ ಸೋಫಾದಲ್ಲಿ ಅವರು ಕುಳಿತು ಮತ್ತೊಮ್ಮೆ ನನ್ನ ಮುಖವನ್ನೇ ನೋಡಿದರು.
ನನ್ನ ಪಕ್ಕದಲ್ಲಿ ಯಾರೋ ಕುಳಿತ ಸ್ಪಷ್ಟ ಅನುಭವ!
“ಹೋಟೆಲ್ ಸಿತಾರಾ-ದ ಹಿಸ್ಟರಿಯಬಗ್ಗೆ ಕೇಳಿದೆಯಂತೆ?” ಎಂದರು.
“ಹೌದು! ಮೊದಲಸಾರಿ ಬಂದಾಗಲೇ ವಿಚಾರಿಸಿದೆ. ನಿಮ್ಮನ್ನೇ ಕೇಳಬೇಕು ಅಂದರು. ನೀವು ಅಮೇರಿಕಾದಲ್ಲಿದ್ದೀರ ಎಂದೂ ಹೇಳಿದರು!” ಎಂದೆ.
“ಪಾಲಕ್ಕಾಡ್ಗೂ ನಿನಗೂ ಏನು ಸಂಬಂಧ?” ಎಂದು ಕೇಳಿದರು.
“ನನ್ನ ಹೆಂಡತಿಯ ಊರು!” ಎಂದೆ. ನನ್ನನ್ನೇ ದಿಟ್ಟಿಸಿ...,
“ಪ್ರಬುದ್ಧ ಅಂದುಕೊಂಡಿದ್ದೇನೆ- ನಿರಾಸೆ ಮಾಡಬೇಡ!” ಎಂದರು.
ಅರ್ಥವಾಯಿತು! ಹೆಚ್ಚು ಪ್ರಶ್ನೆಗಳಿಗೆ ಎಡೆಯಿಲ್ಲದೆ ವಿಷಯಗಳನ್ನು ಹೇಳು ಅನ್ನುತ್ತಿದ್ದಾರೆ!!
“ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿ- ಸಧ್ಯಕ್ಕೆ ಮೈಸೂರಿನಲ್ಲಿ ವಾಸ! ಆದರೆ ನನ್ನ ತಂದೆಯ ಊರು- ತರವಾಡಿರುವುದು ತ್ರಿಶ್ಶೂರ್ನಲ್ಲಿ! ಅಪ್ಪ ಅಮ್ಮ ಕರ್ನಾಟಕದಲ್ಲಿ ಸೆಟಲ್ ಆದವರು. ಅಮ್ಮನ ಊರು ಪಾಲಕ್ಕಾಡ್! ಅವರ ತಮ್ಮನ ಮಗಳೊಂದಿಗೆ ನನ್ನ ಮದುವೆಯಾಯಿತು. ಆದರೆ ಅವಳಿಗೆ ನನ್ನೊಂದಿಗೆ ಮೈಸೂರಿನಲ್ಲಿ ಬದುಕಲಾಗುವುದಿಲ್ಲ ಅನ್ನುವ ಕಾರಣಕ್ಕೆ ಡಿವೋರ್ಸ್ ಆಯಿತು! ಆ ವಿಷಯಕ್ಕೆ ಫ್ಯಾಮಿಲಿ ಕೋರ್ಟ್ಗೆ ಬಂದಾಗ ಮೊದಲಸಾರಿ ನಿಮ್ಮ ಹೋಟೆಲ್ನಲ್ಲಿ ರೂಂ ಬುಕ್ ಮಾಡಿದ್ದೆ! ರಾತ್ರಿ ಆ ರೂಮಲ್ಲಿ ಯಾರೋ ಇದ್ದಂತೆ ಭಾಸವಾಯಿತು!” ಅನ್ನುವಲ್ಲಿ ಅವರು ಕೇಳಿದರು...,
“ಹೆದರಿಕೆಯಾಗಲಿಲ್ಲವೇ?”
“ಆಯಿತು! ಆದರೆ ಈ ರೀತಿಯ ವಿಷಯಗಳು ನನಗೆ ಥ್ರಿಲ್ ನೀಡುತ್ತದೆ. ಹೆದರಿಕೆಯಾದರೂ ಪದೇ ಪದೇ ಆ ಹೆದರಿಕೆಗೆ ಒಳಗಾಗಬೇಕು ಅಂದುಕೊಳ್ಳುತ್ತೇನೆ- ಹೆದರಿಕೆಯಿಂದ ಹೊರಬರಲು!” ಎಂದೆ.
ಮೆಚ್ಚುಗೆಯಿಂದ ನೋಡಿದರು. ಮುಂದುವರೆಸು ಅನ್ನುವಂತೆ ಸಂಜ್ಞೆ ಮಾಡಿದರು.
“ಆ ಅನುಭವಗಳಿಗೆ ಕಾರಣಗಳೇನು ಎಂದು ಹುಡುಕುತ್ತೇನೆ! ಮನಸ್ಸಿನ ವಿಭ್ರಾಂತಿಯೋ, ನಿಜವಾದ ಅನುಭವವೋ ಕಂಡುಕೊಳ್ಳಲು ಶ್ರಮಿಸುತ್ತೇನೆ! ಆ ಶ್ರಮದ ಒಂದು ಭಾಗ- ಆ ಸ್ಥಳದ ಬಗ್ಗೆ ತಿಳಿದುಕೊಳ್ಳುವುದು!” ಎಂದು ನಿಲ್ಲಿಸಿ ಅವರ ಕಣ್ಣುಗಳನ್ನೇ ನೇರವಾಗಿ ದಿಟ್ಟಿಸಿದೆ!
“ಹುಂ......” ಎಂದು ಸೋಫಾಗೆ ಒರಗಿ ಕುಳಿತು ಕಣ್ಣು ಮುಚ್ಚಿದರು.
“ಅರವತ್ತೈದು ವರ್ಷ ಮುಂಚೆ ಅದೊಂದು ಮೈದಾನವಾಗಿತ್ತು. ನಮಗೆ ಸೇರಿದ- ಸುಮಾರು ಹತ್ತು ಏಕರೆ ವಿಸ್ತೀರ್ಣದ ಮೈದಾನ. ಅದೇ..., ಈಗ ಹೋಟೆಲ್ ಸಿತಾರ ಇರುವ ಜಾಗ! ಅದರ ಒಂದು ಮೂಲೆಯಲ್ಲಿ ಒಂದು ಕೊಳವಿತ್ತು. ಊರಿನ ಹೆಚ್ಚು ಜನ ಈಜು ಕಲಿತಿರುವುದು ಆ ಕೊಳದಲ್ಲೇ- ಆಗ! ಜಾತಿ ಮತ ಭೇದವೇನೂ ಇಲ್ಲದೆ! ಒಮ್ಮೆ ಸಿತಾರ ಅನ್ನುವ ಯುವತಿ ಈಜು ಕಲಿಯುತ್ತಿದ್ದಾಗ ಆಯತಪ್ಪಿ ಮುಳುಗಿ ಹೋದಳು!” ಎಂದು ದೀರ್ಘವಾದ ನಿಟ್ಟುಸಿರಿಟ್ಟು...,
“ಅವಳನ್ನು ಕಾಪಾಡಲು ಹಾರಿದ ಯುವಕನೂ ಅವಳೊಂದಿಗೆ ಮುಳುಗಿ ಇಬ್ಬರೂ ಸತ್ತು ಹೋದರು!” ಎಂದರು.
ಗೊಂದಲದಿಂದ ಅವರನ್ನು ನೋಡಿದೆ.
“ವರ್ಷಗಳು ಕಳೆದಂತೆ ಆ ಜಾಗದಲ್ಲಿ ಅಸಹಜವಾದ ಏನೇನೋ ಘಟನೆಗಳು ನಡೆಯತೊಡಗಿತು. ಊರವರು ಆ ಕೊಳದ ಬಳಿ ಹೋಗುವುದು ನಿಲ್ಲಿಸಿದರು. ನಾನಂತೂ ಹೋಗುವಂತೆಯೇ ಇರಲಿಲ್ಲ!” ಎಂದು ನಿಲ್ಲಿಸಿ..., ಪುನಃ...,
“ಅಮೇರಿಕಾಗೆ ಹೋದೆ! ಅಲ್ಲಿಂದ ಕಳಿಸಿದ ಹಣದಲ್ಲಿ ಈ ಹೋಟೆಲ್ ಕಟ್ಟಿದೆವು!” ಎಂದರು.
ಮೌನ. ಅವರನ್ನು ಅವರ ನೆನಪಿಗೆ ಬಿಟ್ಟು ನಾನೂ ಮೌನನಾದೆ. ಅಷ್ಟರಲ್ಲಿ ಮನೆಯ ಒಳಗಿನಿಂದ ಯಾರೋ ಬಂದರು.
“ನನ್ನ ಸೊಸೆ!” ಎಂದರು. ಎದ್ದು ನಿಂತು...,
“ನಮಸ್ತೇ...!” ಎಂದೆ.
ಅವರು ಮುಗುಳುನಕ್ಕು- ವೃದ್ಧನ ಮುಖ ನೋಡಿದರು. ವೃದ್ಧ ನನ್ನ ಮುಖ ನೋಡಿ...,
“ಏನು ಊಟ ಮಾಡುತ್ತೀಯ?” ಎಂದು ಕೇಳಿದರು.
“ನನ್ನದಾಯಿತು. ಪಾಲಕ್ಕಾಡ್ ತಲುಪಿದಾಗಲೇ ಮುಗಿಸಿದೆ- ಈಗ ಏನೂ ಬೇಡ!” ಎಂದೆ.
ವೃದ್ಧ ಆಕೆಯ ಮುಖ ನೋಡಿದರು. ಅವರು ಹೊರಟು ಹೋದರು.
“ಜ್ಯೂಸ್ ಕುಡಿ!” ಎಂದು ಹೇಳಿ, ಅವರು ಒಂದು ಲೋಟ ಎತ್ತಿಕೊಂಡರು.
ನಾನು ಮತ್ತೊಂದು ಲೋಟ ಎತ್ತಿಕೊಂಡೆ.
“ಹೋಟೆಲ್ ಕಟ್ಟಿದಮೇಲೆ ಬ್ಯುಸಿನೆಸ್ ಚೆನ್ನಾಗಿಯೇ ಇತ್ತು- ಈಗಲೂ ಇದೆ ಅಂದುಕೋ..., ಆದರೆ ಆ ಒಂದು ಕೋಣೆ ಮಾತ್ರ ಮಿಸ್ಟರಿಯಾಗಿ ಉಳಿದುಬಿಡ್ತು! ನಾನಂತೂ ಆ ಹೋಟೆಲ್ಕಡೆ ಹೆಜ್ಜೆ ಹಾಕುವ ಹಾಗೆಯೇ ಇಲ್ಲ! ಯಾರೋ ಬಲವಾಗಿ ಹಿಡಿದು ನಿಲ್ಲಿಸುವಂತೆ ಅನ್ನಿಸುತ್ತಿತ್ತು! ಮನೆಯಲ್ಲಿದ್ದಾಗ ಕೆಲವೊಮ್ಮೆ - ಯಾರೋ ಎಳೆಯುವಂತೆ ಅನ್ನಿಸುತ್ತಿತ್ತು! ಅದಕ್ಕೇ ನಾನು ಅಮೆರಿಕಾಗೆ ಹೋಗಿದ್ದು!” ಎಂದರು.
ಎರಡು ಕ್ಷಣದ ಮೌನದ ನಂತರ ನಾನು ನನ್ನ ಮನದಲ್ಲಿನ ಗೊಂದಲವನ್ನು ಕೇಳಿದೆ...,
“ಹೋಟೆಲ್ಗೆ ಸಿತಾರ ಅಂತ ಯಾಕೆ ಹೆಸರಿಟ್ಟಿರಿ? ಕೇವಲ- ಸಿತಾರ ಅನ್ನುವ ಹುಡುಗಿ ಸತ್ತ ಜಾಗ ಅಂತಾನ?”
ದೀರ್ಘವಾದ ನಿಟ್ಟುಸಿರು- ಮೌನ! ಅವರು ಮನೆಯ ಒಳಕ್ಕೊಮ್ಮೆ ಇಣುಕಿ ನೋಡಿ..., ನನ್ನ ಕಣ್ಣನ್ನೇ ದಿಟ್ಟಿಸಿ ನೋಡಿ ಹೇಳಿದರು...,
“ಸಿತಾರ ನನ್ನ ಪ್ರೇಯಸಿಯಾಗಿದ್ದಳು!”
ಚಡಪಡಿಕೆಯಿಂದ ಒದ್ದಾಡಿಹೋದೆ! ಇಲ್ಲ..., ಬೇರೆ ಏನೋ ರಹಸ್ಯವಿದೆ!
ಎದ್ದು ಆಚೆಈಚೆ ಹೆಜ್ಜೆಹಾಕಿದೆ. ಅವರು ನನ್ನನ್ನೇ ನೋಡುತ್ತಿದ್ದರು.
“ಅವರೊಂದಿಗೆ ಸತ್ತ ಗಂಡಸು ಯಾರು?” ಕೇಳಿದೆ.
“ಊರವರೆಲ್ಲ ಅವರನ್ನು ಪ್ರೇಮಿಗಳು ಅನ್ನುತ್ತಿದ್ದರು!” ಎಂದರು.
ಸುಳ್ಳು! ಅವರ ಧ್ವನಿಯಲ್ಲಿನ ನಡುಕ..., ಅವರೆಡೆಗಿನ ನನ್ನ ನೋಟವನ್ನು ರೂಕ್ಷವನ್ನಾಗಿಸಿತು!!!
ಅವರಿಗೆ ಅರ್ಥವಾಯಿತು...!
“ನಾನು ಅಂದುಕೊಂಡಿದ್ದಕ್ಕಿಂತ ಪ್ರಬುದ್ಧ ನೀನು! ನಿನಗೆ ಹೇಳಬಹುದು! ನನ್ನೊಂದಿಗೇ ಮುಗಿದು ಹೋಗಬಹುದಾಗಿದ್ದ ರಹಸ್ಯವನ್ನು!” ಎಂದು ನಿಲ್ಲಿಸಿ ನನ್ನನ್ನೇ ದಿಟ್ಟಿಸಿ ನೋಡಿ ಹೇಳಿದರು...,
“ನಾವಿಬ್ಬರೂ ಪ್ರೇಮಿಸುತ್ತಿದ್ದ ವಿಷಯ ಯಾರೆಂದರೆ ಯಾರಿಗೂ ತಿಳಿದಿರಲಿಲ್ಲ. ಅವಳನ್ನು ಪರಿಚಯವಾಗುವಾಗ ಅವಳಿಗೆ ಹದಿನೇಳು ವರ್ಷ ವಯಸ್ಸು. ಅವಳ ಅಪ್ಪ, ಅಮ್ಮ, ಅಣ್ಣ ಅನ್ನುವ ಸಂತುಷ್ಟ ಕುಟುಂಬ. ಅಣ್ಣ ಗಲ್ಫ್ನಲ್ಲಿದ್ದ!” ಅವರಿಗೆ ಮಾತನಾಡಲು ಕಷ್ಟವಾಗುತ್ತಿರುವಂತೆ ಅನ್ನಿಸಿತು.
ಮತ್ತೊಮ್ಮೆ ಮನೆಯೊಳಕ್ಕೆ ನೋಡಿ ತಗ್ಗಿದ ಧ್ವನಿಯಲ್ಲಿ ಮುಂದುವರೆಸಿದರು...,
“ನಾನು ಪ್ರೇಮಿಸುತ್ತಿದ್ದ ಅವಳು ಮತ್ತೊಬ್ಬನೊಂದಿಗೆ ತಿರುಗಾಡುವಾಗ ನನಗೆ ಹೇಗನ್ನಿಸಬೇಡ?”
ಅವರನ್ನೇ ದಿಟ್ಟಿಸಿದೆ. ಅವರ ಕಣ್ಣಿನಲ್ಲಿ ಅಪರಾಧಿಭಾವ ಸ್ಪಷ್ಟವಾಗಿ ಕಾಣಿಸಿತು!
ಅವರ ಮುಂದಕ್ಕೆ ಬಂದು ನಿಂತು ಬಾಗಿ ಅವರ ಕಣ್ಣುಗಳನ್ನೇ ನೋಡುತ್ತಾ..., ಅವರಿಗೆ ಮಾತ್ರ ಕೇಳಿಸುವಂತೆ ಸ್ಪಷ್ಟವಾಗಿ ಕೇಳಿದೆ...,
“ನಿಮ್ಮ ಪ್ರೇಮಿಯನ್ನೂ ಅವರ ಅಣ್ಣನನ್ನೂ ಕೊಂದಿದ್ದು ನೀವು ಅಂತ..., ನಿಮ್ಮ ಪ್ರೇಮಿಗೆ ಗೊತ್ತಾಗಿರಬಹುದಾದ ಅವಕಾಶವಿದೆಯೇ?”
ದೀರ್ಘವಾದ ನಿಟ್ಟುಸಿರಿನೊಂದಿಗೆ ಹೇಳಿದರು...,
“ಇಲ್ಲ! ಯಾವ ಕಾರಣಕ್ಕೂ ಗೊತ್ತಾಗಿರುವುದಿಲ್ಲ! ಕಾರಣ, ಅವಳನ್ನು ನಾನು ನೇರವಾಗಿ ಕೊಂದಿಲ್ಲ! ಕೊಳದಲ್ಲಿ ಮುಳುಗುತ್ತಿದ್ದ ಅವಳೆಡೆಗೆ ಹೋಗಲಾಗದಂತೆ ಅವಳ ಅಣ್ಣನನ್ನು ಕೊಳದಿಂದ ದೂರಕ್ಕೆ ಎಳೆದುಕೊಂಡು ಹೋಗಿದ್ದಷ್ಟೇ ನಾನು ಮಾಡಿದ್ದು!” ಎಂದು ಹೇಳಿ ದಯನೀಯವಾಗಿ ನನ್ನ ಮುಖವನ್ನೇ ನೋಡಿ...,
“ನಂತರ ಅವನನ್ನು ಮುಳುಗಿಸಿದ್ದು ನಾನು! ಆದರೆ ಮುಳುಗಿಸುವಾಗ ಅದು ಅವಳ ಅಣ್ಣ ಅನ್ನುವ ಅರಿವು ನನಗಿರಲಿಲ್ಲ!! ನಂತರವೇ ಗೊತ್ತಾಗಿದ್ದು! ಗಲ್ಫ್ನಿಂದ ಬಂದ ಅಣ್ಣನೊಂದಿಗೆ ಅವಳು ತಿರುಗಾಡುತ್ತಿದ್ದುದ್ದೆಂದು! ವಿಷಯಗಳನ್ನು ತಿಳಿಸಲು ಇಂದಿನಂತೆ ಅಂದು ಮೊಬೈಲ್ಫೋನ್ ಇರಲಿಲ್ಲವಲ್ಲ!” ಎಂದರು.
“ಹಾ..., ಈ ನಿಜ ಅವರು ಅರಿತಿರಲಿಲ್ಲ ಅನ್ನುವುದಕ್ಕೆ ಸಾಕ್ಷಿ- ನೀವು ಇಷ್ಟು ದೀರ್ಘಕಾಲ ಬದುಕಿರುವುದು! ನಾಳೆಗೆ ನೀವಿರುವುದಿಲ್ಲ!” ಎಂದೆ.
ಗೊಂದಲದಿಂದ ನನ್ನ ಮುಖವನ್ನು ನೋಡಿದರು.
“ಈಗ ಅವರು ನನ್ನೊಂದಿಗೆ ಇದ್ದಾರೆ!” ಎಂದೆ.
*
ಮರಳಿ ಬರುವಾಗ ಹಿಂದೆ ಯಾರೂ ಕೂತ ಅನುಭವವಾಗಲಿಲ್ಲ- ರಾತ್ರಿ ಅಸಹಜವಾಗಿ ಏನೂ ನಡೆಯಲಿಲ್ಲ. ನೆಮ್ಮದಿಯಾಗಿ ನಿದ್ದೆ ಮಾಡಿದೆ.
ಮಾರನೆದಿನ ಮೈಸೂರಿಗೆ ಮರಳುವಾಗ ಅವರ ಮಗನಿಂದ ಕಾಲ್ ಬಂತು.
“ಸರ್..., ಅಪ್ಪ ತೀರಿಕೊಂಡರು! ರಾತ್ರಿ ಮಲಗಿದವರು ಬೆಳಗ್ಗೆ ಏಳಲಿಲ್ಲ!” ಎಂದರು.
ನಾನು..., ಆಕೆಯೊಂದಿಗೆ ಸತ್ತ ಅಣ್ಣನ ಮರುಹುಟ್ಟಾಗಿರಬಹುದೇ- ಅನ್ನುವ ಕೆಟ್ಟ ಕುತೂಹಲವೊಂದು ತಲೆಯಲ್ಲಿ ಸುಳಿಯಿತು!
ತಲೆ ಕೊಡವಿ ಹೊರಟುಬಂದೆ!!!
ಮತ್ತೂ ಎರಡುಮೂರುಬಾರಿ ಆ ಹೋಟೆಲ್ಗೆ ಹೋದೆನಾದರೂ ಯಾವುದೇ ರೀತಿಯ ಅಸಹಜ ಪ್ರಕ್ರಿಯೆಗಳು ನಡೆಯಲಿಲ್ಲ- ಯಾರಿಗೂ!!!
****
ಅದ್ಭುತ ಕಥೆ.. ಸೀತಾರಾಗು ಮರುಜನ್ಮಸಿಕ್ಕಿತು.. ಭಗ್ನ ಪ್ರೇಮಿಯ ಒಂದು ಮಿಸ್ ಅಂಡರ್ ಸ್ಟಾಂಡ್ ಇಷ್ಟೆಲ್ಲ ಮಾಡಿಸಿತು ಪಾಪ.. ಆ ಮುದುಕ ಎರಡು ಪ್ರಾಣಗಳನ್ನು ಬಲಿ ಪಡೆದುಕೊಂಡ.. ಆದರೆ ಲೇಟಾಗಿ ಸಿಕ್ಕಿತು ಅವರಿಗೆ ಶಿಕ್ಷೆ... ಎಷ್ಟೋ ವರ್ಷ್ಗಳ ಇಕ್ಕಟ್ಟು ನಿಮ್ಮಿಂದ ಪರಿಹಾರ ಆಯಿತು. ಅಪ್ಪಟ ಕಥೆಗಾರರ ಕಥೆ ಇದು ಸೂಪರ್ ಸರ್ 👌👌
ReplyDelete