ನೂರು
ನೂರು ! ಇದೊಂದು ಹುಚ್ಚು ನನಗೆ ! ಒಬ್ಬನೇ ದ್ವಿಚಕ್ರ ವಾಹನದಲ್ಲಿ - ಸುತ್ತಾಟ ! ಎರಡು ಮೂರು ದಿನಗಳಿಗೆಂದು ಹೊರಟು ವಾರದ ನಂತರ ಬಂದದ್ದೂ ಇದೆ ! ಅದುವರೆಗೆ ಅಪ್ಪ ಅಮ್ಮನ ಎದೆಯಲ್ಲಿ ಬೆಂಕಿ ! ನಾ ಕಾಲ್ ಮಾಡುವುದಿಲ್ಲ ! ಅವರೇ ಮಾಡಬೇಕು ! ಕೆಲವೊಮ್ಮೆ ಪಾಪ ಅವರು ಮಾಡುವಾಗಲೂ ನಾಟ್‌ರೀಚಬಲ್ ಬರುತ್ತದೆ ! ಇನ್ನು ಟೂರ್ ಹೊರಡುವುದೋ ....? ನವೆಂಬರ್ ಡಿಸೆಂಬರ್‌ನ ಚಳಿಯಲ್ಲಿ ! ಅದೊಂದು ಅಹಂಕಾರ - ಯಾವ ಚಳಿಮಳೆಬಿಸಿಲಾದರೂ ನನ್ನ ದೇಹ ತಡೆದುಕೊಳ್ಳುತ್ತದೆಂದು ! ಸುಮಾರು ವರ್ಷದಿಂದ ಪಾಲಿಸಿಕೊಂಡು ಬಂದ ವ್ರತ ಅದು - ಮುಂಜಾನೆಯ ವ್ಯಾಯಾಮ ಮತ್ತು ದಿನಕ್ಕೆರಡುಸಾರಿ ತಣ್ಣೀರ ಸ್ನಾನ - ಮೃತ್ಯುಂಜಯ ಮಂತ್ರದೊಂದಿಗೆ ! ಗಾಡಿಯಲ್ಲಿ ಸುತ್ತಾಡುವಾಗಲೇ ಸಾವು ನಿನಗೆ - ಎಂದು ಹಲವರು ಈಗಾಗಲೇ ಹೇಳಿ ಆಗಿದೆ ! ಆದರೂ ನಾ ಸುತ್ತಾಡದೆ ಇರಲಾರೆ ! “ ಜೋಪಾನವೋ ...!” ಎಂದು ಅಮ್ಮ ಎದೆಯಮೇಲೆ ಕೈಯ್ಯಿಟ್ಟು ಹೇಳುವಾಗ ..., “ ನಿಜಕ್ಕೂ ಅತೀಂದ್ರಿಯ ಶಕ್ತಿಗಳು ಇವೆಯೇ ..!?” ಅನ್ನುವ ಚಿಂತೆ ಮನದಲ್ಲಿ ! ಅಮ್ಮನ ಮಾತು ಕಿವಿಗೆಬಿತ್ತು - ಮಿದುಳಿಗೆ ತಲುಪಲಿಲ್ಲ ! ಹೊರಟೆ ! * ಲಕ್ಷ್ಯ - ಕೊಲ್ಲೂರು ! ಅದೇನೋ .... ಮೂಕಾಂಬಿಕೆಯೊಂದಿಗೆ ಬಾರಿ ನಂಟು ನನಗೆ ! ಆಗಾಗ ನಮ್ಮ ಮಧ್ಯೆ ಜಗಳವಾಗುತ್ತಿರುತ್ತದೆ ! ನಾನೂರು ಕಿಲೋಮೀಟರ್ ದೂರ ಕ್ರಮಿಸಿ ಬಂದಿರುತ್ತೇನೆ ! ನಾನು ತಲುಪುವ ಸಮಯಕ್ಕೆ ಸರಿಯಾಗಿ ಬಾಗಿಲು ಹಾಕಿದರೆ ಹೇಗಾಗಬೇಡ ! ...