ಶಿವೋಹಂ!
ಶಿವೋಹಂ ! ೧ ಸಣ್ಣಸಣ್ಣ ಘಟನೆಗಳು ನನ್ನ ಮೇಲೆ ಬೀರುವ ಪ್ರಭಾವ ದೊಡ್ಡದೊಡ್ಡ ಘಟನೆಗಳು ಬೀರುವುದಿಲ್ಲ ! ಹಾಗೆಯೇ ಸಣ್ಣಸಣ್ಣ ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳುವಷ್ಟು ದೊಡ್ಡದೊಡ್ಡ ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ! ಈಗೊಂದು ಸಣ್ಣ ಸಮಸ್ಯೆ ತಲೆ ತಿನ್ನುತ್ತಿದೆ ! ದೇವರೆಂದರೆ ಏನು - ಯಾರು ? ೨ ಹುಟ್ಟಿದೂರಿಗೆ ಗೆಳೆಯರೊಂದಿಗೆ ಹೋಗಿದ್ದೆ . ಚಿಕ್ಕವನಿದ್ದಾಗ ನೋಡದ ತೋಟ - ಕಾಡು ಸುತ್ತಬೇಕೆಂಬ ಆಸೆ ! ಈಗಲೂ ಅಲ್ಲಿಯ ಜನ ಕಾಡಿನೊಳಕ್ಕೆ ಹೋಗಲು ಹೆದರುತ್ತಾರೆ ! ಏನೇನೋ ಕಲ್ಪನೆಗಳು , ಕಥೆಗಳು ಅದಕ್ಕೆ ಕಾರಣ ! ನೀವು ಬರದಿದ್ದರೂ ನಾನು ಹೋಗಿ ಬರುತ್ತೇನೆ ಅನ್ನುವ ನನ್ನ ಮಾತಿಗೆ ಕಟ್ಟುಬಿದ್ದು ಗೆಳೆಯರೂ ನನ್ನೊಂದಿಗೆ ಬಂದಿದ್ದರು . ನನ್ನ ಯಾವತ್ತಿನ ಗೊಂದಲ ಅದು… , ಯಾವ ಜಾಗದಲ್ಲಿ ಯಾವ ನಾಗರೀಕತೆ ಆಗಿ ಹೋಗಿದೆಯೋ ಯಾರಿಗೆ ಗೊತ್ತು - ಅನ್ನುವುದು ! ಎಷ್ಟು ದೂರ ಚಲಿಸಿದ್ದೆವು ಅನ್ನುವ ಅರಿವಿಲ್ಲ . ಕಾಡಿನ ದಟ್ಟತೆಯನ್ನು ಕಂಡು… , “ ನನಗೆ ಹೆದರಿಕೆಯಾಗುತ್ತಿದೆ ! ವಾಪಸ್ ಹೋಗೋಣ !” ಎಂದ ಒಬ್ಬ ಗೆಳೆಯ . “ ಇನ್ನೊಂದಷ್ಟು ದೂರ ಹೋಗಿ ನೋಡೋಣ !” ಎಂದೆ ನಾನು . “ ನೀನೇನೋ ಮಾಡಪ್ಪ ! ಸುಮ್ಮನೆ ಯಾಕೆ ಇಲ್ಲದ ರಿಸ್ಕು ! ನಾವು ವಾಪಸ್ ಹೋಗ್ತೀವಿ !” ಎಂದ ಮತ್ತೊಬ್ಬ ಗೆಳೆಯ . ಅವರು ಮರಳಿದರೆ ನಾನೂ ಅವರೊಂದಿಗೆ ಮರಳುತ್ತೇನೆನ್ನುವ ನಂಬಿಕೆ ಅವರಿಗೆ ! “ ಸರಿ… , ನೀವು ಹೋಗಿರಿ… , ನಾನು ಬರ್ತೀನಿ !” ಎಂದೆ . ...