ಅವನೂ ಆತ್ಮಹತ್ಯೆಯೂ!
* “ ಒಂದು ವಿಷಯ ಯಾವತ್ತಿಗೂ ನೆನಪಿಟ್ಟುಕೋ ...., ಸುಖ - ದುಃಖಗಳಿರಲಿ ..., ನಾವೇ ಶಾಶ್ವತವಲ್ಲದ ಈ ಬದುಕಿನಲ್ಲಿ ..., ಬಾಂಧವ್ಯಕ್ಕೆ ಸಮಯ ಕೊಡಲಾಗದಷ್ಟು ಬ್ಯುಸಿಯಾದ ಬದುಕು - ಬದುಕಲ್ಲ !” ಎಂದ . ಅವನ ಮುಖವನ್ನೇ ನೋಡಿದೆ . ಮಾತನಾಡಲು ಏನೂ ಇರಲಿಲ್ಲ . ಅವನೇ ..., “ ನನಗೆ ಸಮಯ ಕೊಡಲು ನಿನ್ನಿಂದ ಸಾಧ್ಯವಾಗುತ್ತಿಲ್ಲ ಅನ್ನುವ ಕಾರಣಕ್ಕೆ ಇದನ್ನು ಹೇಳುತ್ತಿಲ್ಲವೇ ..., ಪದೇ ಪದೇ ನಿನಗಾಗಿ ತಪಿಸುವ ನನ್ನನ್ನು ನೀನು ಬ್ಯುಸಿಯಾಗು ಅಂದೆಯಲ್ಲಾ ...? ಅದಕ್ಕೆ ಹೇಳಿದೆ !” ಎಂದ . ನನ್ನದು ಅದೇ ಮೌನ ! ಮತ್ತೆ ಅವನೇ ..., “ ಏನಂದುಕೊಂಡಿದ್ದೀಯ ? ನಿನಗಾಗಿ ತಪಿಸುತ್ತಿರುವುದು ಬೇರೆ ಕೆಲಸವಿಲ್ಲದ್ದರಿಂದ ಅಂತಾನ ? ಅಥವಾ ನಿನ್ನಿಂದ ಏನಾದರೂ ನಿರೀಕ್ಷೆ ಇಟ್ಟುಕೊಂಡು ಅಂತಾನ ?” ನನ್ನ ಕಣ್ಣು ತುಂಬಿತು . ಏನೆಂದು ಉತ್ತರಿಸಲಿ ? ಮೊದಲು ನನ್ನ ಅರಿವಿಲ್ಲದೆ ..., ನಂತರ ಅರಿವಿನೊಂದಿಗೆ ಅವನನ್ನು ಇಗ್ನೋರ್ ಮಾಡುತ್ತಿದ್ದೇನೆ - ಎಂದೇ ? ಯಾಕೆ ? * ರುದ್ರನನ್ನು ಪರಿಚಯವಾಗುವಾಗ ನನ್ನ ಗಂಡ ಸತ್ತು ಎರಡು ವರ್ಷವಾಗಿತ್ತು . ಎರಡನೇ ವರ್ಷದ ದುಃಖಾಚರಣೆಗಾಗಿ ಬಾರ್‌ಗೆ ಹೋಗಿದ್ದೆ . ಒಬ್ಬಳೇ ..., ಆ ಟೇಬಲ್ ನನಗೊಬ್ಬಳಿಗೆ ಮೀಸಲು . ಹೊಟ್ಟೆ ತುಂಬಾ ಕುಡಿದು ಮನೆಗೆ ಹೋಗಿ ಮಲಗಿಬಿಡುವುದು ಉದ್ದೇಶ . ಒಂದು ಕೈಯ್ಯಲ್ಲಿ ಬಿಯರ್ ಬಾಟಲ್ , ಮತ್ತೊಂದು ಕೈಯ್ಯಲ್ಲಿ ಮೊಬೈಲ್ ...! ಗಂಡನೊಂದಿಗಿನ ಅದ್ಭುತ ಕ್ಷಣಗಳ ಫೋಟೋಗಳು ..., ...