ಮೋಸಗಾರ!
ಮೋಸಗಾರ!
೧
ಅವಳೆಂದರೆ ನನ್ನ ಸಂತೋಷ! ಅವಳು ನನ್ನ ಚಂದ! ಅವಳ ಸಾನ್ನಿಧ್ಯ ನನ್ನ ನೆಮ್ಮದಿ! ಅವಳು ಹತ್ತಿರವಿದ್ದಾಗ ನನ್ನೊಳಗೊಂದು ಕಂಪನ! ಅವಳ ಅಪ್ಪುಗೆ ನನಗೆ ಸ್ವರ್ಗ! ಅವಳ ಸೌಂಧ್ಯರ್ಯ ನನ್ನ ಆನಂದ! ಅವಳ ಮುಗ್ಧತೆ ನನ್ನ ತಪಸ್ಸು! ಅವಳ ಹೃದಯ ನನಗೆ ಜೀವನ ಪ್ರೀತಿ! ಅವಳಿಗಾಗಿ ತಪಿಸಿದೆ! ಅವಳ ಅರಿವಿಲ್ಲದೆ ಅವಳಿಗಾಗಿ ಶ್ರಮಿಸಿದೆ! ಎಲ್ಲಿ ಅವಳಿಗಾಗಿಯೇ ನಾನು ಅವಳಿರಬಹುದಾದ ಸಮಯದಲ್ಲಿ ಹೋಗುತ್ತಿದ್ದೇನೆಂದು ತಿಳಿದು…, ಬರದವಳಾಗುತ್ತಾಳೋ ಎಂದು ಹೆದರಿದೆ! ಅವಳಿಗೆ ತಿಳಿಯದು- ಒಂದು ಕ್ಷಣದ ಅವಳ ಸಾನ್ನಿಧ್ಯಕ್ಕಾಗಿಯೇ ನನ್ನ ಪ್ರಯತ್ನವೆಂದು! ಹೃದಯದಿಂದ ಅವಳನ್ನು ನಾನು ಭಾವಿಸಿದೆ! ಅವಳೊಂದಿಗಿನ ನಾನು ನಿಜ!
ಅವಳ ಹತ್ತಿರಕ್ಕೆ ನಾನು ಹೋಗಿಬಿಟ್ಟರೇ ಅನ್ನುವ ಹೆದರಿಕೆಯಿಂದ ಅವಳು ಮತ್ತೊಬ್ಬರನ್ನು ನಮ್ಮ ನಡುವೆ ತಂದರೂ…, ಅವಳಿಗಾಗಿಯೇ ನಾನು ಬಂದೆ ಅನ್ನುವ ಅರಿವೇನಾದರೂ ಮೂಡಿ ನಾನಿರುವಾಗ ಉಳಿದವರಿಗಾಗಿಯೂ ಬರದಷ್ಟು ದೂರ ಅವಳು ಹೋಗಿಬಿಟ್ಟರೇ…, ಅನ್ನುವ ಹೆದರಿಕೆಯಲ್ಲಿಯೇ…, ಅವಳಿಗಾಗಿ ಅನ್ನುವ ಅರಿವು ಅವಳಿಗೆ ಇಲ್ಲದಂತೆ…, ಅವಳಿರುವಲ್ಲಿ ಕ್ಷಣ ಕಳೆಯುತ್ತೇನೆ!
ಹೆದರಿಕೆ! ಅವಳಿಲ್ಲದ ಕಲ್ಪನೆಯೇ ಹೆದರಿಕೆ!
ಯಾಕೆಂದರೆ…,
ಅವಳಿಗೆ ನಾನು…, ಮೋಸಗಾರ!
೨
“ನಾನೊಬ್ಬ ಸೈಕೋ!” ಎಂದೆ.
ಸರಿ ಅನ್ನುವಂತೆ ತಲೆಯಾಡಿಸಿದಳು!
“ನನ್ನೊಂದಿಗೆ ಸೇರುವುದು ನಿನಗೆ ಕಳಂಕ ತರಬಹುದು!” ಎಂದೆ.
ಮುಗುಳುನಕ್ಕಳು!
“ಚಿಕ್ಕಂದಿನಿಂದ ಬೆಳೆಸಿಕೊಂಡು ಬಂದ ವ್ಯಕ್ತಿತ್ವ! ಅಷ್ಟು ಸುಲಭದಲ್ಲಿ ನಿನಗೆ ಅರ್ಥವಾಗುವುದಿಲ್ಲ! ಸ್ವಲ್ಪ ಸಮಯವನ್ನು ಕೊಡು…, ನಿಧಾನವಾಗಿ ನನ್ನವ್ಯಕ್ತಿತ್ವದೊಂದಿಗೆ ನನ್ನದೇ ಆದ ಪ್ರಪಂಚವನ್ನು ನಿನಗೆ ಪರಿಚಯಿಸುತ್ತೇನೆ!” ಎಂದೆ.
“ಎಷ್ಟು ಸಮಯಬೇಕು?”
“ಎರಡು ವರ್ಷ!”
“ಸರಿ!” ಎಂದಳು
“ಅಷ್ಟು ಸುಲಭದಲ್ಲಿ ಸರಿ ಅನ್ನಲಾಗದು ಪುಟ್ಟ! ಸಡನ್ ಆಗಿ ನಾನು ನಿನ್ನೊಂದಿಗೆ ವರ್ತಿಸುವ ರೀತಿಗೆ ನನ್ನೊಂದಿಗೆ ಜಗಳಕ್ಕೆ ಬರಬಾರದು! ಹಾಗೇಕೆ ವರ್ತಿಸಿದೆ ಅನ್ನುವ ಕಾರಣವಿದೆಯಲ್ಲಾ…, ಅದೇ ನನ್ನ ವ್ಯಕ್ತಿತ್ವ! ಆ ವ್ಯಕ್ತಿತ್ವವನ್ನು ಅರ್ಥಮಾಡಿಸುವುದು ಅಷ್ಟು ಸುಲಭವಲ್ಲ! ನನಗೆ ನನ್ನದೇ ಆದ ಸರಿಗಳಿದೆ, ಮಾನದಂಡಗಳಿದೆ! ನಿನ್ನ ಊಹೆಗೂ ನಿಲುಕದ ವ್ಯಕ್ತಿತ್ವ…, ಉಳಿದವರೊಂದಿಗಿನ ನಿನ್ನ ಪ್ರಪಂಚವೇ ಒಂದು ತೂಕವಾದರೆ ನಾನೊಬ್ಬ ಅನ್ನುವ ಪ್ರಪಂಚವೇ ಒಂದು ತೂಕ!”
“ಯಾಕೆ ಇಷ್ಟೊಂದು ಹೇಳ್ತಿದೀಯ?”
“ಅನುಭವ! ಅದರಿಂದ ಹೆದರಿಕೆ!”
“ನಾನು ಅಷ್ಟು ಬೇಗ ಬಿಟ್ಟು ಹೋಗುವವಳಲ್ಲ!”
ಸರಿಯಾಗಿ ಆರು ತಿಂಗಳಿಗೆ…, ನನ್ನಿಂದ ದೂರ…, ಬಹುದೂರಕ್ಕೆ ಹೊರಟುಹೋದಳು!
ಕಾರಣ…, ಎರಡು ವರ್ಷದಲ್ಲಿ ಅವಳ ಅರಿವಿಗೆ ತರುತ್ತೇನೆ ಎಂದು ಹೇಳಿದ ನನ್ನ ಬದುಕನ್ನು ತನ್ನದೇ ರೀತಿಯಲ್ಲಿ ಕ್ಷಿಪ್ರವಾಗಿ ಅರಿಯುವ ಅವಳ ಆತುರ! ಅವಳ ಊಹೆಗೂ ಎಟುಕದ ನನ್ನ ವ್ಯಕ್ತಿತ್ವ! ಇಬ್ಬರೂ ಒಟ್ಟಿಗೆ ಇರಬಹುದಾದ ಸಂದರ್ಭ ಬಂದರೆ ತಲುಪಬಹುದಾದ ಅವಸ್ತೆಯ ಅರಿವು!
ದೂರ ಹೋಗಲು ಅದೊಂದು ಕಾರಣವೇ ಆಗಲಾರದೆನ್ನುವ ನನ್ನ ಊಹೆ ತಪ್ಪಿತು! ಹಾಗೆಂದು ನನಗೂ ಅದೇನು ಮುಖ್ಯವಾಗಿರಲಿಲ್ಲ! ಒಂದಂತೂ ನನ್ನ ಮನಸ್ಸಿಗೆ ನಾನೇ ಪ್ರಮಾಣವಾಗಿ ಹೇಳಬಲ್ಲೆ…, ಅವಳು ನನ್ನ ಪವಿತ್ರ ಪ್ರೇಮ! ಅವಳಿಗೆ ಮುತ್ತುಕೊಟ್ಟಿದ್ದರೆ…, ಅವಳ ದೇಹದ ಸೌಂಧರ್ಯಕ್ಕೆ ಸ್ಪಂದಿಸಿದ್ದರೆ…, ಅದೊಂದು ಉನ್ಮಾದದ ಹಂತವೇ ಹೊರತು- ದೈಹಿಕ ಸುಖಕ್ಕಾಗಿನ ಪ್ರಯತ್ನವಲ್ಲ! ಆದರೆ ಅದು ಅವಳಿಗೆ ನಮ್ಮ ಸಂಬಂಧ ಉಳಿಯುವುದಕ್ಕಿಂತ ದೊಡ್ಡ ವಿಷಯವೇ ಆಯಿತು! ಅದನ್ನು ನಾನು ಅರಿಯಲಾರದೇ ಹೋದೆ! ಪ್ರಯತ್ನಪೂರ್ವಕವಾಗಿ ನಾನು ಹಿಂದಕ್ಕೆ ಸರಿಯಬೇಕಿತ್ತು! ಆದರೆ…, ಆ ಕ್ಷಣದ ನನ್ನ ವ್ಯಕ್ತಿತ್ವ…!!
ಎರಡು ವರ್ಷವೆನ್ನುವ ಕಾಲಮಾನದಲ್ಲಿ ಸರಿ ಹೋಗುತ್ತಿದ್ದೆನೋ ಏನೋ…!
ಜೊತೆಗೆ…, ಯಾವುದನ್ನೇ ಆದರೂ ವಿಶ್ಲೇಷಿಸಿ ಒಂದು ತೀರ್ಮಾನಕ್ಕೆ ಬರಲು ಅವಳ ಮಾನದಂಡಕ್ಕೂ ನನ್ನ ಮಾನದಂಡಕ್ಕೂ ಇದ್ದ ಅಜಗಜಾಂತರ ವ್ಯತ್ಯಾಸ! ನನ್ನ ವಿವರಣೆಗಳೋ ರೀತಿಗಳೋ ಸರಿತಪ್ಪುಗಳೋ ಅವಳ ಅಳತೆಗೋಲಿನಲ್ಲಿ ಅತಿ ಧಾರುಣವಾಗಿ ಕೆಟ್ಟದ್ದಾಗಿದ್ದವು- ಮೊದಲೇ ಹೇಳಿದ್ದರೂ ಅದು ಅವಳ ಮನಸ್ಸಿನಲ್ಲೇ ಇರಲಿಲ್ಲ!
ಅವಳಿಗೆ ನಾನೊಬ್ಬ…, ಮೋಸಗಾರ!
೩
“ಸುಳ್ಳು ಹೇಳಬೇಡ! ನೀನು ಬರೆದ ಆ ಕಥೆಯಲ್ಲಿ ನಾನಿಲ್ಲ- ಅದು ಅವಳು!” ಎಂದಳು.
ಉಸಿರು ಸಿಕ್ಕಿಕೊಂಡಿತು! ಒಂದುಕ್ಷಣ ಗಂಟಲು ಉಬ್ಬಿತು! ವಿವರಣೆ ನೀಡಲಿಲ್ಲ! ಅವಳ ವಾದವೂ ಸರಿಯೇ…!
ಕಥೆಯೊಂದನ್ನು ಬರೆದೆ! ಅದರಲ್ಲಿ ಶೃಂಗಾರವಿದೆ, ಭಾವಾನುಭೂತಿಯಿದೆ, ಮನಸ್ಸಿಗೆ ತಾಗುವ ಮಾತುಗಳಿದೆ!
ಒಂದೊಂದೂ ಒಂದೊಂದು ಕಡೆಯಿಂದ ತೆಗೆದುಕೊಂಡದ್ದಾಗಿರಬಹುದು ಅಥವಾ ಒಂದು ಘಟನೆಗೆ ಉಳಿದದ್ದು ನನ್ನ ಕಲ್ಪನೆಯಾಗಿರಬಹುದೆನ್ನುವ ಆಲೋಚನೆ ಯಾರಿಗೂ ಬರುವುದಿಲ್ಲ! ಕಥೆಗಾರನ ವೈಯಕ್ತಿಕ ಅನುಭವ, ಕಥೆಗಾರ ಕಂಡದ್ದು, ಕೇಳಿದ್ದು, ಊಹಿಸಿದ್ದು, ಎಲ್ಲವೂ ಅವನ ಕಥೆಯಲ್ಲಿ ಬರುತ್ತದೆನ್ನುವ ಅರಿವು ಯಾರಿಗೂ ಇರುವುದಿಲ್ಲ! ಯಾರೊಂದಿಗೆ ಮಾತುಕತೆಯಾಗಿರುತ್ತದೋ ಅವರು ಹೇಳುತ್ತಾರೆ…, ಆರೀತಿಯ ಶೃಂಗಾರ ನನ್ನೊಂದಿಗೆ ಆಗಿಲ್ಲ- ಆದ್ದರಿಂದ ಆ ಕಥೆಯಲ್ಲಿ ನಾನಿಲ್ಲ! ಭಾವಾನುಭೂತಿಗೆ ಒಳಗಾದವರು ಹೇಳುತ್ತಾರೆ…, ಆ ರೀತಿಯ ಮಾತುಕತೆ ನನ್ನೊಂದಿಗೆ ನಡೆದಿಲ್ಲ- ಆದ್ದರಿಂದ ಆ ಕಥೆಯಲ್ಲಿ ನಾನಿಲ್ಲ! ಶೃಂಗಾರ ನಡೆದವರು ಹೇಳುತ್ತಾರೆ…, ಆ ರೀತಿಯ ಭಾವಾನುಭೂತಿ ನನ್ನೊಂದಿಗೆ ನಡೆದಿಲ್ಲ- ಆದ್ದರಿಂದ ಆ ಕಥೆಯಲ್ಲಿ ನಾನಿಲ್ಲ!
ಈಗ ಇದನ್ನು ಓದಿದವರು ಹೇಳುತ್ತಾರೆ…, ಅಂದರೆ ನಿನ್ನ ಬದುಕಿನಲ್ಲಿ ಮೂರು ಜನರಿದ್ದಾರೆ!
ಒಬ್ಬರಲ್ಲಿ ಹಲವರನ್ನು ಹಲವರಲ್ಲಿ ಒಬ್ಬರನ್ನು ತುಂಬಿಸುವವನೇ ನಿಜವಾದ ಕಥೆಗಾರ!
ನಿಜದರಿವು ಕಥೆಗಾರನ ಹೊರತು ಅವನು ಬರೆದಿರಬಹುದಾದ ವ್ಯಕ್ತಿಗೂ ಕೂಡ ಇರುವುದಿಲ್ಲ!
ಕಥೆಗಳಲ್ಲಿ ಕಥೆಗಾರನನ್ನೂ ಕಥೆಗಾರನ ಬದುಕಿಗೆ ಸಂಬಂಧಪಟ್ಟವರನ್ನೂ ಹುಡುಕುವುದು ಸಾಮಾನ್ಯವೇ ಆದರೂ…, ಅವನಿಗಿಂತಲೂ ಸ್ಪಷ್ಟವಾಗಿ ಅದನ್ನು ನಿರ್ಧರಿಸುವುದೂ ಅವರೇ ಅನ್ನುವಲ್ಲಿ ಕಥೆಗಾರನ ಗೆಲುವಿದೆ!
ಹಾಗೆ ನಿರ್ಧರಿಸಿದ ಅವಳ ವಿಷಯದಲ್ಲಿ ನಾನೊಬ್ಬ- ಮೋಸಗಾರ!
೪
ಕೊನೆಯದಾಗಿ…,
ನನ್ನ ಬದುಕಿನಲ್ಲಿ ಯಾವೊಂದು ಹೆಣ್ಣೂ ಉಳಿಯುವುದಿಲ್ಲ ಅನ್ನುವುದು ಎಷ್ಟು ನಿಜವೋ…, ಅದಕ್ಕೆ ಕಾರಣವಾದ…,
ನನ್ನ ಬದುಕಿಗೆ ಸಂಬಂಧಪಟ್ಟ ಪ್ರತಿ ಹೆಣ್ಣೂ ನನಗೆ ಒಂದೊಂದು ಪ್ರಪಂಚ!!!
ಪ್ರತಿ ಹೆಣ್ಣಿಗೂ ನಾನೊಬ್ಬ…,
ಮೋಸಗಾರ!
Comments
Post a Comment