ಮನಸ್ಸೂ ಹೆಣ್ಣೂ ನಿಮಿತ್ತವೂ ಬದುಕೂ- ಕಥೆ!

ಮನಸ್ಸೂ ಹೆಣ್ಣೂ ನಿಮಿತ್ತವೂ ಬದುಕೂ- ಕಥೆ!

ಮನಸ್ಸು ಒಂದು ಅದ್ಭುತ!

ಪ್ರತಿಕ್ಷಣದ ಬೆಳವಣಿಗೆ, ಚಿಂತನೆ, ಆತ್ಮವಿಮರ್ಶೆ, ಸರಿ ತಪ್ಪುಗಳ ವಿಶ್ಲೇಷಣೆ, ಗೊಂದಲಗಳು, ವ್ಯಕ್ತಿತ್ವದ ವಿಕಾಸ- ಅವನತಿಗಳು…,

ನಿರಂತರತೆ ಅನ್ನುವುದು ಬದುಕಿರುವವರೆಗೆ ನಮ್ಮ ಮನಸ್ಸಿನ ಸಹಜ ಗುಣ!

ಬದುಕಿಗೆ ಸಂಬಂಧಪಟ್ಟಂತೆ ನಾವು ತೆಗೆದುಕೊಂಡ ತೀರ್ಮಾನಗಳು- ನಿಶ್ಚಯಗಳನ್ನು ಹೊರತುಪಡಿಸಿ ಒಮ್ಮೆ ಇದ್ದ ಮನಸ್ಸು ಮತ್ತೊಮ್ಮೆ ಇರುವುದಿಲ್ಲ! ಅದೂ ಕೂಡ ನಮ್ಮ ಮನಸ್ಸಿನ ಮೇಲೆ ನಮಗಿರುವ ಹಿಡಿತವನ್ನು- ನಿಶ್ಚಯದಾರ್ಢ್ಯತೆಯನ್ನು ಅವಲಂಬಿಸಿ!

ಉಳಿದಂತೆ ಮನಸ್ಸು ಪ್ರತಿ ಕ್ಷಣ ಬದಲಾಗುತ್ತಲೇ ಇರುತ್ತದೆ!

ಕಾರಣ…, ಸಂದರ್ಭ!

ಒಮ್ಮೆ ಇದ್ದ ಸಂದರ್ಭ ಮತ್ತೊಮ್ಮೆ ಬರಬೇಕೆಂದಿಲ್ಲ! ಹಾಗೆಯೇ…,

ಮತ್ತೊಮ್ಮೆ ಮರುಕಳಿಸಿದರೂ ಮನಸ್ಸಿನ ಪ್ರತಿಕ್ರಿಯೆ ಒಂದೇ ಇರಬೇಕೆಂದೂ ಇಲ್ಲ!

ಮನಸ್ಸನ್ನು ನಿಶ್ಚಯಿಸುವುದು ಒಂದು ರೀತಿಯಲ್ಲಿ- ಅನುಭವಗಳು!

ನಮ್ಮ ಮನಸ್ಸು ಹೊರಗಿನವರಿಗೆ ಪ್ರಶ್ನಾತೀತ!

ನಮ್ಮ ಪೂರ್ತಿ ಬದುಕಿಗೆ ನಾವೇ ಹೊಣೆಗಾರರು ಹೊರತು ಯಾರನ್ನೂ ಕಾರಣ- ನೆಪ- ಹೇಳುವಂತೆ ಇಲ್ಲ!

ಆದರೂ ಕೆಲವೊಮ್ಮೆ ಹೊರಗಿನವರು- ಹೊರಗಿನವರೆಂದರೆ…, ನಮ್ಮೊಳಗಿದ್ದರೂ ನಮಗಿಂತ ಭಿನ್ನ ವ್ಯಕ್ತಿತ್ವ ಇರುವವರು…, ನಮ್ಮ ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸುತ್ತಾರೆಂದರೆ…, ಒಂದು ಹಂತದಲ್ಲಿ ಅದರಿಂದ ಹೊರಬಂದರೆ ಸಾಕು ಅನ್ನಿಸುವಷ್ಟು!

ಹಾಗೆಂದು ಅವರು ಸರಿಯಿಲ್ಲ- ಕೆಟ್ಟವರೆಂದೂ ಅರ್ಥವಲ್ಲ!

ಅವರ ವ್ಯಕ್ತಿತ್ವವೇ ಬೇರೆ- ನಮ್ಮ ವ್ಯಕ್ತಿತ್ವವೇ ಬೇರೆ!

ಅವರ ದೃಷ್ಟಿಕೋನವೇ ಬೇರೆ- ನಮ್ಮ ದೃಷ್ಟಿಕೋನವೇ ಬೇರೆ!

ಅಂದರೆ- ಪ್ರತಿಯೊಬ್ಬರ ಮನಸ್ಸು ಬೇರೆಬೇರೆಯೇ!

ಅವರವರ ಮನಸ್ಸನ್ನು ಇನ್ನೊಬ್ಬರಿಗೆ ಹೇರಲು ಹೋದಾಗ ಸೃಷ್ಟಿಯಾಗುತ್ತದೆ ಸಮಸ್ಯೆ!

ಅವರ ಪಾಡಿಗೆ ಅವರನ್ನು ಬಿಡದೇ ಇರುವುದೇ- ಬಂಧನ!

ಬಿಟ್ಟರೂ ಬಿಡಬಹುದಾಗಲಿ…, ಅವರನ್ನು ಅವರಂತೆಯೇ ಒಪ್ಪುವುದು ಅನ್ನುವುದು ಕಷ್ಟ-ಸಾಧ್ಯ!

ದತ್ತಾ…, ನೀನಿನ್ನೂ ಎಕ್ಸ್‌ಪ್ಲೋರ್ ಆಗಬೇಕುಕಣೋ!” ಎಂದಳು.

ಗೊಂದಲದಿಂದ ನೋಡಿದೆ. ಆತ್ಮೀಯವಾಗಿ ನನ್ನ ಕೈಯ್ಯನ್ನು ತನ್ನ ಕೈಗೆ ತೆಗೆದುಕೊಂಡು ತನ್ಮಯತೆಯಿಂದ ನನ್ನ ಕಣ್ಣನ್ನೇ ನೋಡಿದಳು.

ನನ್ನಂತಾ ಹೆಣ್ಣಿಗೆ ನೀನೊಂದು ಪರಿಹಾರ!” ಎಂದಳು.

ಹೆಂಗಸರೇ ಹೀಗೆ…, ಬರೀ ಒಗಟು!” ಎಂದೆ.

ಮುಗುಳುನಕ್ಕಳು. ಮತ್ತಷ್ಟು ಹತ್ತಿರಕ್ಕೆ ಸರಿದುಕುಳಿತಳು. ಎಟುಕಿಸಿ ತುಟಿಗೆ ತಾಗಿಯೂ ತಾಗದಂತಾ ಮುತ್ತೊಂದನ್ನು ಕೊಟ್ಟಳು. ನನ್ನ ಕಣ್ಣಿನಲ್ಲಿನ ಅಭದ್ರತೆಯನ್ನು ಕಂಡು ಕೂದಲನಡುವೆ ಬೆರಳಾಡಿಸಿ ತಲೆಯನ್ನು ತನ್ನೆದೆಗೆ ಒತ್ತಿಕೊಂಡಳು!

ಯಾಕೋ…, ವಿರಹವೊಂದಕ್ಕೆ ಮುನ್ನುಡಿ ಬರೆಯುತ್ತಿದ್ದಾಳೆ ಅನ್ನಿಸಿತು!

ನೆನಪಿದೆಯಾ ನಿನಗೆ? ಬದುಕಿನಮೇಲೆ ಆಸಕ್ತಿಯನ್ನೇ ಕಳೆದುಕೊಂಡು ಮನೆ ಬಿಟ್ಟು ಬಂದಿದ್ದೆ! ಆಕಸ್ಮಿಕವೋ- ವಿಧಿಯೋ…, ನೀನು ಸಿಕ್ಕಿದೆ! ಜೀವನ ಪ್ರೀತಿ ತುಂಬಿದೆ! ಈ ಪ್ರಪಂಚದಲ್ಲಿ ಯಾರೂ ಯಾರನ್ನೂ ನಂಬಿಲ್ಲ ಎಂದು ಹೇಳಿ…, ನಿನ್ನ ಹೊರತೂ ಬದುಕಬಲ್ಲೆನೆಂಬ ವಿಶ್ವಾಸ ಹುಟ್ಟಿಸಿದೆ! ಆಸರೆಯಾದೆ, ನೆರಳಾದೆ…!” ಅವಳು ಯಾವುದೋ ಗುಂಗಿನಲ್ಲಿದ್ದಳು!

ಇದನ್ನೆಲ್ಲಾ ಯಾಕೆ ಹೇಳುತ್ತಿದ್ದಾಳೋ ಊಹಿಸಬಲ್ಲೆ!

ನಿರ್ಧಾರವನ್ನು ಹೇಳು!” ಎಂದೆ.

ನಿನ್ನ ಮಾತಿಗೆ ಬೆಲೆ ಕೊಡುತ್ತೇನೆ!” ಎಂದಳು.

ಇದು ನಿಜಕ್ಕೂ ನನ್ನ ಗೆಲುವು! ಆದರೆ…,

ನನ್ನ ಮೌನ ಅವಳಿಗೆ ಅರ್ಥವಾಯಿತು!

ನಿನ್ನ ಪರಿಚಯವಾದಂದಿನಿಂದ ಇಂದಿನವರೆಗೆ ಎರಡು ವರ್ಷಗಳ ಕಾಲ ಬೇಕಾಯಿತು ನನಗೆ ಗಂಡನೊಂದಿಗೆ- ಮನೆಯವರೊಂದಿಗೆ ಹೊಂದಿಕೊಳ್ಳಲು! ನೀನೇ ಕಾರಣವಾಗಿ ಗಂಡನಿಗೆ ಹತ್ತಿರವಾಗಿದ್ದೇನೆ! ಈಗ…, ನೀನೇ ಹೇಳುವಂತೆ, ನೀನೇ ಕಾರಣವಾಗಿ ದೂರವಾಗುತ್ತೇನೆ ಅನ್ನಿಸುತ್ತಿದೆ! ನನಗೆ ನೀನೇ ಬೇಕೆಂಬ ಆಸೆ…! ಆದರೆ ನೀನೋ…, ಅಲೆಮಾರಿ!” ಎಂದಳು.

ಹಲವು ಸಾರಿ ಹೇಳಿದ್ದಾಳೆ. ಎಲ್ಲಾ ಬಿಟ್ಟು ಬಂದುಬಿಡುತ್ತೇನೆ- ನೋಡಿಕೋ…, ಎಂದು.

ಮಾತು ಕೊಡಲಾರೆ! ಮತ್ತೆ ಹೇಗೆ?

ನನ್ನ ಜೀವನ ನನಗೇ ಒಂದು ಒಗಟು!

ಪೂರ್ತಿಯಾಗಿ ನನ್ನ ಜೀವನದಿಂದ ಹೊರಡುತ್ತಿದ್ದಾಳೆ! ಅದೊಂದು ನೋವು! ಆದರೆ ದುಃಖವಲ್ಲ!

ಅದಕ್ಕೇ ಹೇಳಿದ್ದು! ನೀನು ಎಕ್ಸ್‌ಪ್ಲೋರ್ ಆಗಬೇಕು! ನನ್ನಂತಾ ಹಲವರಿಗೆ ಆಸರೆಯಾಗಬೇಕು!” ಎಂದಳು.

ನಿನ್ನ ತಲೆ! ನೀನೊಂದು ಆಕಸ್ಮಿಕ! ಎಲ್ಲರೂ ಹಾಗೆಯೇ?”

ಅದ್ಭುತವಾದ ಒಂದು ನಗು ನಕ್ಕಳು! ಆ ನಗುವಿನಿಂದಲೇ ನಾನವಳನ್ನು ರಬ್ಬರ್‌ಬ್ಯಾಂಡ್ ಬಾಯಿ ಎಂದು ಕರೆಯುವುದು!

ದತ್ತಾ! ನಿನ್ನಂತೆಯೇ ನನಗೂ ಗೊತ್ತು! ನಿನ್ನ ಬದುಕಿನಲ್ಲಿ ಪರ್ಮನೆಂಟಾಗಿ ಉಳಿಯುವಂತಾ ಹೆಣ್ಣು ಇನ್ನೂ ಹುಟ್ಟಿಲ್ಲ! ಹಾಗೆಂದು ನೀನು ಏಕಾಂಗಿಯಾಗಿಯೂ ಇರಲಾರೆ! ಒಬ್ಬರಾದ ನಂತರ ಒಬ್ಬರಂತೆ ಹೆಣ್ಣಿನ ಸಾನ್ನಿಧ್ಯವಂತೂ ನಿನ್ನ ಬದುಕಿನಲ್ಲಿರುತ್ತದೆ! ನೀನೇ ಬೇಡ ಅಂದುಕೊಂಡರೂ- ಅದು ವಿಧಿ ನಿಯಮ!” ಎಂದಳು.

ನಾನೇನೂ ಮಾತನಾಡಲಿಲ್ಲ. ಅವಳೇ…,

ನಾನೂ ಮೊದಲನೆಯವಳಲ್ಲ ಅನ್ನುವುದರಲ್ಲಿ ಉತ್ತರವಿದೆ!” ಎಂದು ಹೇಳಿ ತುಂಟತನದಿಂದ ನನ್ನ ಕಣ್ಣುಗಳನ್ನೇ ದಿಟ್ಟಿಸಿದಳು.

ಎಲ್ಲಾ ಹೆಣ್ಣೂ ನಿನ್ನಂತೆಯೇ ನನ್ನನ್ನು ಒಳಗೊಳ್ಳಬೇಕೆಂದೇನೂ ಇಲ್ಲವಲ್ಲಾ…?” ಎಂದೆ.

ಅದರ ಅಗತ್ಯವೂ ಇಲ್ಲ! ಅರ್ಥವಾಗುತ್ತೀಯೋ ಇಲ್ಲವೋ…, “ತಾಗುತ್ತೀಯ!”” ಎಂದಳು.

ಅವಳೊಂದು ಅದ್ಭುತ ಪ್ರೇಮಿ! ನಾನೋ…, ಸ್ಪಂದನೆ!

ಇದು ವಿದಾಯ! ಇನ್ನು ಭೇಟಿಯಾಗುತ್ತೇವೋ ಇಲ್ಲವೋ…, ಒಂದು ಹಂತದವರೆಗೆ ಪೂರ್ತಿಯಾಗಿ ಆವರಿಸಿಕೊಂಡೆ. ನಂತರ…, ಅವಳು- ಅವಳ ಗಂಡ, ಮಕ್ಕಳು, ಕುಟುಂಬವನ್ನು ಆವರಿಸುವಂತೆ ಮಾಡಿ…,

ನೋವೇ…! ಆದರೂ ಏನೋ ಸಾರ್ಥಕತೆ!

ಅವಳು ಹೇಳದಿದ್ದರೂ ವಾಸ್ತವ ನನಗೆ ಗೊತ್ತು!

ಇದೊಂದು ಗೊಂದಲ ನನಗೆ…, ನನ್ನ ಬದುಕು!

ಸರಿಯೋ ತಪ್ಪೋ…, ಅದರ ಪಾಡಿಗೆ ಬಿಟ್ಟಿದ್ದೇನೆ!

ಅದೇನು ಮಾಯವೋ ಏನೋ…, ಹೆಣ್ಣು ನನಗೆ ಅರ್ಥವಾಗುತ್ತಾಳೆ! ಪ್ರತಿ ಹೆಣ್ಣಿನ ಹೃದಯದೊಂದಿಗೆ ನನ್ನ ಹೃದಯ ಸ್ಪಂದಿಸುತ್ತದೆ! ಸ್ಪಂದನೆ ಬೇರೆ…, ವರ್ತನೆ ಬೇರೆ…, ವ್ಯಕ್ತಿತ್ವವೇ ಬೇರೆ ಅನ್ನುವ ಅರಿವು ಬರುವಷ್ಟರಲ್ಲಿ ಅದೆಷ್ಟು ಜನ ಬಂದು ಹೋದರು!

ಯಾವುದೇ ನಿರೀಕ್ಷೆ ಇಲ್ಲದ್ದರಿಂದಲೋ…, ನಾನಾಗಿ ಕೆಣಕಿ ಹೋಗದೇ ಇರುವುದರಿಂದಲೋ…, ಅಥವಾ…, ಅವರ ಪರ್ಸನಲ್ ಮ್ಯಾಟರ್ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದರಿಂದಲೋ…, ಹೆಣ್ಣು ನನಗೆ ಅಂಟಿಕೊಳ್ಳುತ್ತಾಳೆ!

ಯಾವಾಗ ಇವನನ್ನು ನಂಬಬಹುದು ಅನ್ನುವ ವಿಶ್ವಾಸ ಹುಟ್ಟುತ್ತದೋ…, ಸಂಬಂಧ ಗಾಢವಾಗುತ್ತದೆ!

ಕೆಲವರ ಭೇಟಿಯೇ ಆಗಿರುವುದಿಲ್ಲ! ಕೆಲವರು ಸಿಗುತ್ತಾರೆ! ಕೆಲವರು ಅಂಟಿಕೊಳ್ಳುವುದಿಲ್ಲ- ಅವರ ಯಾವುದೋ ವಾಂಛೆಗೆ ನಾನೊಂದು ಪರಿಹಾರ ಅನ್ನುವಂತೆ ಇದ್ದುಬಿಡುತ್ತಾರೆ! ಕೆಲವರು ಪರಿಪೂರ್ಣವಾಗಿ ತೆರೆದುಕೊಳ್ಳುತ್ತಾರೆ! ಕೆಲವರು ತಮಗೆ ಏನು ಹೇಳಿದರೆ ನೆಮ್ಮದಿಯೋ ಅದನ್ನು ಮಾತ್ರ ಹೇಳುತ್ತಾರೆ! ಕೆಲವರು ಬಂಧಿಸಿಕೊಳ್ಳಲು ಶ್ರಮಿಸಿ ನಿಷ್ಠುರವಾಗಿ ದೂರವಾಗುತ್ತಾರೆ!

ಕೆಲವರಿಗೆ ನಾನು ಸಮಸ್ಯೆ! ಕೆಲವರಿಗೆ ನಾನು ಪರಿಹಾರ! ಕೆಲವರಂತೂ ತಮ್ಮ ಭ್ರಮೆಗೆ ನನ್ನನ್ನು ಕಾರಣನನ್ನಾಗಿ ಮಾಡಿ ನನ್ನನ್ನು ರಿಗ್ರೆಟ್‌ ಮಾಡುವಂತೆ ಸಂದರ್ಭ ಉಂಟುಮಾಡಿಸಿ ಹೊರಟು ಹೋಗುತ್ತಾರೆ!

ಯಾವುದರಬಗ್ಗೆಯೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ!

ಹಾಗೆಂದು ಪ್ರೇಮವಿಲ್ಲವೇ…?

ತುಂಬಿದ ಪ್ರೇಮ!

ನಿರೀಕ್ಷೆಗಳಿಲ್ಲವಷ್ಟೆ!

ಹೀಗೆಯೇ ಎಷ್ಟುದಿನ?

ಈ ರೀತಿಯ ಸಮಸ್ಯೆ…, ಗೊಂದಲಗಳುಂಟಾದಾಗ ಯಾವುದಾದರೂ ನಿಮಿತ್ತಗಳು ನಡೆದು ಸರಿಯೋ ತಪ್ಪೋ…, ಯಾವುದೋ ಒಂದು ದಾರಿಯಲ್ಲಿ ಜೀವನ ಸಾಗುವಂತೆ ಮಾಡುತ್ತದೆ!

ನನ್ನೊಬ್ಬನ ಜೀವನ ನನಗೆ ಹೊರೆಯಲ್ಲ! ಯಾವುದೇ ಕಟ್ಟುಪಾಡುಗಳಿಲ್ಲ! ಓದುವುದು, ಊರುಸುತ್ತುವುದು, ನನ್ನಪಾಡಿಗೆ ನಾನು ಇದ್ದುಬಿಡುವುದು- ಇದು ಜೀವನ!

ಬದುಕೆಂಬ ಪಯಣದಲ್ಲಿ ದಾರಿಹೋಕರನೇಕರು ಬಂದು- ಹೋಗುತ್ತಾರೆ!

ಜ್ಞಾನಿಗಳು, ಅಜ್ಞಾನಿಗಳು, ಹಿರಿಯರು, ಕಿರಿಯರು…, ಎಲ್ಲರೊಂದಿಗೆ ಒಡನಾಡುತ್ತೇನೆ!

ನನಗೇನು ಲಾಭ? ಅವರಿಗೇನು ಲಾಭ?

ನಾನಂತೂ ಯೋಚಿಸುವುದಿಲ್ಲ!

ಒಂದು ಕನಸು ಯಾವತ್ತೂ ಕಾಡುತ್ತದೆ!

ಕತ್ತಲು! ಕತ್ತಲಿನಲ್ಲೊಂದು ಗಂಡು ಆಕಾರ! ಆಕಾರದಿಂದ- ಅದು ನಾನು! ಕುಳಿತಿದ್ದೇನೆ! ನಿಧಾನವಾಗಿ ಎಲ್ಲಿಂದಲೋ ಟಾರ್ಚ್‌ನಿಂದ ಹೊರಟ ಬೆಳಕು ನನ್ನ ಕಾಲಿನಿಂದ ಶುರುವಾಗಿ ಮುಖದಕಡೆಗೆ ಚಲಿಸುತ್ತದೆ. ನಿರ್ವಿಕಾರಚಿತ್ತನಾಗಿ ಕುಳಿತಿದ್ದೇನೆ! ನಿಧಾನವಾಗಿ ನನ್ನ ಹಿಂದೆ ಹೆಣ್ಣು ನೆರಳೊಂದು ಪ್ರತ್ಯಕ್ಷವಾಗುತ್ತದೆ. ಸೀರೆ ಉಟ್ಟ ಹೆಣ್ಣಿನ ನೆರಳು. ಹಿಂದೆಯಾದರೂ ಪೂರ್ತಿಯಾಗಿ ಕಾಣುವಂತೆ- ನನ್ನ ಎಡಗಡೆ ನಿಂತು ನನ್ನ ಎಡ ಹೆಗಲಮೇಲೆ ಅವಳ ಬಲಗೈಯನ್ನು ಇಟ್ಟಿದ್ದಾಳೆ!

ತಿರುಗಿ ಅವಳ ಮುಖವನ್ನು ನೋಡುತ್ತೇನೆ. ಮೊದಲೇ ನೆರಳವಳು! ಜೊತೆಗೆ ನನ್ನ ಮುಖದಮೇಲೆ ಟಾರ್ಚ್‌ಲೈಟ್!

ನನ್ನ ಕಿವಿಯಕಡೆಗೆ ಬಾಗಿ- ಆಗ ಅವಳ ಕೂದಲು ಹಾರಾಡುವುದು ನೋಡಬೇಕು…, ನದಿನೀರು ಹರಿದಂತೆ- ನೆರಳೇ ಎಷ್ಟು ಚಂದ!-

ಯಾವೊಂದು ಹೆಣ್ಣು- ನಿನ್ನ ಬದುಕಿನಲ್ಲಿ ಶಾಶ್ವತವಾಗಿ ನಿಲ್ಲಲಾರಳು! ಹಾಗೆಂದು ಹೆಣ್ಣಿಲ್ಲದ ಬಾಳಲ್ಲ ನಿನ್ನದು! ಎಷ್ಟು ಹುಡುಕಿಯೂ ಪ್ರಯೋಜನವಿಲ್ಲ! ಆಯ್ಕೆಯ ಅಧಿಕಾರವಂತೂ ನಿನಗೆ ಇಲ್ಲವೇ ಇಲ್ಲ! ಅದೇನಿದ್ದರೂ ಹೆಣ್ಣಿನ ಹಕ್ಕು!” ಎಂದು ಹೇಳಿ ಮೊದಲಿನಂತೆ ನಿಂತಳು. ನಿಧಾನವಾಗಿ ಅದೃಶ್ಯವಾದಳು. ಮುಖದಿಂದ ಟಾರ್ಚ್‌ಲೈಟ್ ಕೆಳಕ್ಕೆ ಚಲಿಸಿ ಮಾಯವಾಯಿತು! ನನ್ನ ಆಕಾರವೂ ಮಾಯವಾಯಿತು! ಕತ್ತಲು ಮಾತ್ರ ಉಳಿಯಿತು!

ಒಮ್ಮೆಯೋ ಎರಡುಬಾರಿಯೋ ಕಂಡರೆ…,

ಬರಿ ಕನಸು!” ಎಂದು ಸುಮ್ಮನೆ ಇದ್ದುಬಿಡಬಹುದು!

ಆದರಿದು ನಿರಂತರ…, ನೆನಪುದಿಸಿದಾಗಿನಿಂದ…, ಬುದ್ಧಿಯುದಿಸಿದಾಗಿನಿಂದ…!

ಮೊದಲೆರಡುದಿನ ಮುಗುಳುನಗು! ನಂತರ ಹಾಯ್…!

ಕನಸಿನ ಪ್ರಭಾವದಿಂದ ಹೊರಬರಬೇಕಿತ್ತು! ಅದು ಸುಳ್ಳೆಂದು ಸಾಬೀತುಪಡಿಸುವ ಪ್ರಯತ್ನವನ್ನು ಮಾಡಿನೋಡೋಣವೆಂಬ ಹುಂಬತನ!

ಜೊತೆಗೆ…,

ನನ್ನ ಜೀವನ ರೀತಿಗೊಂದು ಬೇಲಿಹಾಕಿ- ಒಬ್ಬಳೇ ಹೆಣ್ಣು ಯಾಕೆ ನೆಲೆನಿಲ್ಲಲಾರಳು ಎಂದು ಪರೀಕ್ಷಿಸುವ ತವಕ!

ಆ ಸಮಯದಲ್ಲಿ ಹೀಗೊಂದು ಮುಗ್ಧೆಯ ಪ್ರವೇಶ!

ಇಷ್ಟುದಿನದ ಜೀವನಾನುಭವದಿಂದ ನನ್ನ ಬದುಕು ಯಾವುದೋ ಒಂದು ರೀತಿಯಲ್ಲಿ ರೂಪುಗೊಂಡಿತ್ತು! ಮೊದಲು ಅದನ್ನವಳಿಗೆ ಪರಿಚಯ ಮಾಡಿಸಬೇಕು! ನಂತರ ಅವಳನ್ನೇ ಕೇಂದ್ರವಾಗಿಟ್ಟುಕೊಂಡು ಅದರಿಂದ ಹೊರಬರಬೇಕು ಅನ್ನುವ ಚಿಂತೆ- ಆಸೆ!

ಅವಳಿಗೂ ಅವಳೇ ನನ್ನ ಸರ್ವಸ್ವವಾಗುವ ತವಕ!

ಅದೊಂದು ಆನಂದ! ಅವಳ ಮುಗ್ಧತೆ! ತೆರೆದ ಮನಸ್ಸು! ಬೇರೆ ಯಾವ ಹೆಣ್ಣಿನಲ್ಲೂ ಇಲ್ಲದ ಒಂದು ಕಂಪನ! ಮನಸ್ಸಿಗೆ ಮಾತ್ರವಲ್ಲ- ದೇಹಕ್ಕೂ ಒಂದು ಅನುಭೂತಿ ವೈಬ್ರೇಟ್ ಆಗುತ್ತದೆನ್ನುವ ಅರಿವು!

ಎಷ್ಟೇ ಬೆಳೆದ ದೇಹವಾದರೂ ಮುಗ್ಧ ಸೌಂಧರ್ಯವೊಂದಿದೆಯಲ್ಲಾ…?

ಅನುಭವಿಸಿಯೇ ಅರಿಯಬೇಕು!

ಆದರೊಂದು ತೊಡಕು! ನನ್ನನ್ನು ಪರಿಚಯ ಮಾಡಿಸುವುದು ಅನ್ನುವುದರಲ್ಲಿ!

ನನ್ನನ್ನು ನಾನು ಪರಿಚಯ ಮಾಡಿಸುವುದು ಅನ್ನುವ ನನ್ನ ಕಾನ್ಸೆಪ್ಟ್ ಅವಳಿಗೆ ತಲುಪಿದ್ದು- ನನ್ನ ಜೀವನದಲ್ಲಿ ನಡೆದ ಪ್ರತಿ ಘಟನೆಗಳೊಂದಿಗೆ ಸರ್ವವನ್ನೂ ಅವಳಿಗೆ ತಿಳಿಸುವುದು- ಅನ್ನುವಂತೆ!

ಅದಕ್ಕೆ ನಾನು ತಯಾರಿದ್ದರೂ ಅದನ್ನು ಅರಗಿಸಿಕೊಳ್ಳುವ ಸಾಮರ್ಥ್ಯವನ್ನು ಅವಳಲ್ಲಿ ರೂಪಿಸಬೇಕಿತ್ತು!

ಅವಳಿಗೋ ಆತುರ!

ನನ್ನ ಬಗ್ಗೆ ನನ್ನ ಮನಸ್ಸಿನಬಗ್ಗೆ ಆದಷ್ಟೂ ವಿವರಣೆ ನೀಡಿದರೂ ಒಂದುಘಟ್ಟದಲ್ಲಿ ಭಾರೀ ತಳಮಳಕ್ಕೆ ಒಳಗಾದೆ!

ನನ್ನ ಬದುಕಿಗೆ ಸಂಬಂಧಪಟ್ಟವರಬಗ್ಗೆ- ವೈಯುಕ್ತಿಕವಾಗಿ ಒಬ್ಬೊಬ್ಬರಬಗ್ಗೆಯೂ ಹೇಳುವುದು ಅನ್ನುವಲ್ಲಿ ನನಗೆ ಗೊಂದಲವೇರ್ಪಟ್ಟಿತು!

ಒಬ್ಬರು ನನ್ನಮೇಲಿಟ್ಟ ನಂಬಿಕೆ- ವಿಶ್ವಾಸವನ್ನು ಇನ್ನೊಬ್ಬರಿಗೆ ಹೇಳಬಹುದೇ ಅನ್ನುವುದು! ಅದು ನನ್ನೊಳಗಿನ ತಳಮಳ! ಕೊನೆಗೆ ಹೇಳುವುದಿಲ್ಲವೆಂಬ ತೀರ್ಮಾನ!

ಹೆಣ್ಣು ಹೃದಯ!

ನಾನು ನಿನ್ನ ಮನಸ್ಸು- ಆತ್ಮಸಾಕ್ಷಿ ಎಂದೆಲ್ಲಾ ಹೇಳಿದೆ? ಯಾಕೆ ಬೇರೆ ಹೆಣ್ಣಿನಬಗ್ಗೆ ಹೇಳುವುದಿಲ್ಲ?” ಎಂದು ಕೇಳಿದಳು.

ಒಂದೇ ಪ್ರಶ್ನೆ…! ಏನು ಹೇಳಲಿ?

ಪ್ರತಿ ಹೆಣ್ಣಿನೊಂದಿಗಿನ 'ನನ್ನನ್ನು' ಹೇಳಿದೆ…, ಆದರೆ ಅವಳಿಗೆ 'ಯಾವ ಯಾವ' ಹೆಣ್ಣಿನೊಂದಿಗೆ ಅನ್ನುವುದೇ ಬೇಕು!

ಅದು ಹೇಳಲಾಗದು!

ಪ್ರತಿಯೊಬ್ಬರ ಬದುಕಿಗೆ ನೆಮ್ಮದಿಯಾಗಬೇಕು ಅಂದುಕೊಂಡವನು! ಮೊದಲಬಾರಿ ಒಬ್ಬಳಲ್ಲಿ ನನ್ನ ನೆಮ್ಮದಿ ಕಾಣಬೇಕು ಅಂದುಕೊಂಡೆ! ಪರಿಣಾಮ…,

ಅತಿ ಧಾರುಣವಾಗಿ ದೂರ ಹೋದಳು!

ನನ್ನ- ಅವಳ ವಿಷಯದಲ್ಲಿ…, ಅವಳಿಗೆ ತಪ್ಪು ಅನ್ನಿಸಿದ್ದು ನನಗೆ ತಪ್ಪೇ ಅಲ್ಲ ಅನ್ನುವಲ್ಲಿ- ಆ ಧಾರುಣತೆಯಿದೆ!

ಉಳಿದ ಎಲ್ಲರ ನೆಮ್ಮದಿ ಇವಳೊಬ್ಬಳ ದುಃಖವಾಗಿ ಮಾರ್ಪಾಟು ಹೊಂದಿದ್ದು…, ನನ್ನ ಬದುಕಿನ ವಿರೋಧಾಭಾಸ!

ಅವಳಿಗಾಗಿ ಉಳಿದ ಎಲ್ಲರಿಂದ ನಿಧಾನವಾಗಿಯಾದರೂ ದೂರಬಂದು…, ಈಗ ಅವಳೂ ಇಲ್ಲ- ಯಾರೂ ಇಲ್ಲ!

ಇದೇ ವಿಧಿನಿಯಮವೇನೋ…!

ನಿಮಿತ್ತವೊಂದು ನನ್ನ ಬದುಕನ್ನು ನಿರ್ಧರಿಸುತ್ತದೆ ಅಂದುಕೊಂಡಿದ್ದು ಇದೇ ಏನೋ?

ಅವಳನ್ನು ತಪ್ಪು ಹೇಳುವುದಿಲ್ಲ! ಅವಳ ರೀತಿಯಲ್ಲಿ ಅವಳು ಸರಿಯೇ…! ಬೇರೆ ಯಾರಿಗಿಂತಲೂ ತೆರೆದ ಮನಸ್ಸಿನಿಂದ…, ಪರಿಪೂರ್ಣವಾಗಿ ತನ್ನನ್ನೇ ಅರ್ಪಿಸಿಕೊಂಡವಳು!

ಪ್ರೇಮದ ಪರ್ಯಾಯ ಅವಳು! ಆದರೆ….!

ಅವಳೆಂಬ ನಿಮಿತ್ತ ನಿರ್ಧರಿಸಿದ್ದು ಏನು?

ಯಾರೂ ಇಲ್ಲದ ಬಾಳು ನನ್ನದೆಂದೋ…?

ಆದರೆ…, ಕನಸ್ಸಿನ ಪ್ರಕಾರವಾದರೆ….,

ಹೆಣ್ಣಿಲ್ಲದ ಬಾಳಲ್ಲ ನನ್ನದು!?

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!