ಲಕ್ಷ್ಮಿಯೆಂದರೇ...!

   

*

ನಮಸ್ತೇ...,

ನಾನು ಲಕ್ಷ್ಮಿ- ಶಂಭುವಿನ ಲಕ್ಷ್ಮಿ! ನಿನ್ನೆ ಅವನಿಗೊಂದು ಪತ್ರ ಬರೆದಿದ್ದೆ! ಅವನ ಹೊರತು ಯಾರಿಗೂ ಅರ್ಥವೇ ಆಗಲಿಲ್ಲವೆನ್ನುವುದು ಅವನ ತಕರಾರು! ಅದರಲ್ಲೂ ಅವನ ಅಮ್ಮಂದಿರಿಗೆ- ಹೆತ್ತಮ್ಮನಿಗೂ ಹೆತ್ತಮ್ಮನಷ್ಟೇ ಅವ ಪ್ರೀತಿಸುವ ಇನ್ನೊಬ್ಬರು ಅಮ್ಮನಿಗೂ...!

ಸೋ..., ವಿವರಿಸಿ ಹೇಳಬೇಕಂತೆ- ನಾನೇ...!

ಪತ್ರವನ್ನು ಹಾಗೆಯೇ ಉಳಿಸಿ ವಿವರಣೆ ಬೇಕೆನ್ನಿಸಿದಲ್ಲಿ ಬ್ರಾಕೆಟ್‌ನಲ್ಲಿ ವಿವರಣೆ ಕೊಟ್ಟಿದ್ದೇನೆ!

*

*

ಹೇಗಿದ್ದೀಯ ಶಂಭು? ನಿನಗೇನು? ಪ್ರತಿ ಕ್ಷಣ ಸಂತೋಷದಿಂದ ಇರುವವನು! ಏನೇ ಘಟನೆಗಳು ನಡೆದರೂ..., ಮಾನಸಿಕ ಸಂಘರ್ಷಗಳು ಏನೇ ಇದ್ದರೂ- ನೀ ನೆಮ್ಮದಿಯಾಗಿರುತ್ತಿ! ಆ ಘಟನೆಗಳನ್ನೂ- ಸಂಘರ್ಷವನ್ನೂ ಎಂಜಾಯ್ ಮಾಡುತ್ತಿ! ಸೈಕಲಾಜಿಕಲ್ ಅನಾಲಿಸಿಸ್ ಮಾಡ್ತಿ! ಈಗಲೂ ಸಂತೋಷದಿಂದ ಇದ್ದೀಯ ಅನ್ನೋದು ಗೊತ್ತು...! ಆದರೂ ಕೆಲವೊಂದು ವಿಷಯಗಳನ್ನು ನಿನಗೆ ಹೇಳಬೇಕು ಅನ್ನಿಸುತ್ತಿದೆ! ಹೇಳಿಬಿಡುತ್ತೇನೆ!

ನಿನ್ನದೇ ಮಜವಾದ ಲೆಕ್ಕಾಚಾರವಿದೆಯಲ್ಲಾ...? ಆ ಲೆಕ್ಕಾಚಾರದ ಪ್ರಕಾರ..., ನಿನ್ನ ಪ್ರಿಯಾರಿಟಿ ಬದಲಾಗಬೇಕಾದ ಸಮಯವಾಯಿತು!!!

ಎಷ್ಟು ನಗು ಬಂತು ಗೊತ್ತಾ ಆ ಲೆಕ್ಕಾಚಾರ ನೋಡಿ...,

*

ಬದುಕುವುದು ಅರವತ್ತು ವರ್ಷವಂತೆ! ಮೊದಲ ಇಪ್ಪತ್ತು ವರ್ಷ ವಿದ್ಯಾಲಕ್ಷ್ಮಿಯಂತೆ..., ಎರಡನೇ ಇಪ್ಪತ್ತು ವರ್ಷ ಧೈರ್ಯಲಕ್ಷ್ಮಿಯಂತೆ..., ಮೂರನೇ ಇಪ್ಪತ್ತು ವರ್ಷ ಧನಲಕ್ಷ್ಮಿಯಂತೆ!!

ಹುಟ್ಟಿನಿಂದಲೇ ಮೂರೂ ಲಕ್ಷ್ಮಿಯರಿದ್ದರೂ..., ಪ್ರಮಾಣದ ಲೆಕ್ಕಾಚಾರದಲ್ಲಿ ಈ ವಿಭಜನೆಯಂತೆ- ನಿನ್ನ ತಲೆ!

(ಅವನ ಪ್ರಕಾರ ಅವನು ಬದುಕುವುದು ಅರವತ್ತೆಂದರೆ ಅರವತ್ತೇ ವರ್ಷವಂತೆ! ಮೊದಲ ಇಪ್ಪತ್ತು ವರ್ಷದಲ್ಲಿ ಅವನಿಗೆ ಹೆಚ್ಚಾಗಿ ಒಲಿಯುವುದು ವಿದ್ಯಾಲಕ್ಷ್ಮಿ- ಅಂದರೆ ಸರಸ್ವತಿ! ಎರಡನೇ ಇಪ್ಪತ್ತು ವರ್ಷದಲ್ಲಿ ಧೈರ್ಯಲಕ್ಷ್ಮಿ- ಅಂದರೆ ಪಾರ್ವತಿ! ಮೂರನೇ ಇಪ್ಪತ್ತು ವರ್ಷದಲ್ಲಿ ಧನ ಲಕ್ಷ್ಮಿಯಂತೆ- ಅಂದರೆ ಲಕ್ಷ್ಮಿ! ಹುಟ್ಟಿನಿಂದ ಮೂರೂ ಲಕ್ಷ್ಮಿಯರು ಇದ್ದರೂ..., ಪ್ರಮಾಣದ ಅನ್ವಯ ಹೀಗೆ ವಿಭಜಿಸಿಕೊಂಡಿದ್ದಾನೆ! ಸಂಪಾದನೆ ಮಾಡದೆ ಇರಲೊಂದು ನೆಪ!)

*

*

ಆದರೆ ಒಂದು ವಿಷಯವಂತೂ ನಿಜವೋ ಶಂಭು...! ಚಿಕ್ಕವಯಸ್ಸಿನಲ್ಲಿ ನಿನಗೇನಾದರೂ ಧನಲಕ್ಷ್ಮಿ ಹೆಚ್ಚಾಗಿ ಒಲಿದಿದ್ದರೆ ಅದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತಿತ್ತು- ನಿನ್ನ ವ್ಯಕ್ತಿತ್ವದ ಅನ್ವಯ!!

(ಖಂಡಿತಾ..., ಅವನ ಆಡಂಬರಕ್ಕೆ ಬಳಸಿಕೊಳ್ಳುತ್ತಿದ್ದನೇ ಹೊರತು ಪ್ರಪಂಚಕ್ಕೆ ಯಾವುದೇ ಉಪಯೋಗ ಇರುತ್ತಿರಲಿಲ್ಲ!)

*

*

ನೀನೂ ನಿನ್ನ ಸೈಕಾಲಜಿಯೂ! ಎಲ್ಲವೂ ನಿನಗೆ ಗೊತ್ತು..., ನಿನಗೇ ಗೊತ್ತು- ಅನ್ನಬೇಡ ಶಂಭು! ಕೆಲವೊಂದು ಸೂಕ್ಷ್ಮಗಳು ನಿನಗೆ ಅರ್ಥವಾಗುವುದಿಲ್ಲ! ಅರ್ಥವಾದರೂ ನಿನ್ನಿಂದ ಒಪ್ಪಿಕೊಳ್ಳಲಾಗುವುದಿಲ್ಲ! ನೀನು ಮಾತ್ರ ನಿನ್ನ ತತ್ತ್ವಗಳನ್ನು- ವಿಶ್ಲೇಷಣೆಗಳನ್ನು ಇನ್ನೊಬ್ಬರು ಒಪ್ಪಬೇಕು ಅನ್ನುತ್ತೀ..., ಇನ್ನೊಬ್ಬರಮೇಲೆ ಬಲವಂತದಿಂದ ಹೇರುತ್ತಿ!

ಕೇಳು..., ಪ್ರಿಯಾರಿಟಿ- ನಮ್ಮ ಬದುಕನ್ನು ನಿರ್ಧರಿಸುವುದು ಈ ಪ್ರಿಯಾರಿಟಿಗಳೇ!

ವೈಯುಕ್ತಿಕಕ್ಕೋ..., ಸಂಬಂಧಗಳಿಗೋ..., ಕನಸುಗಳಿಗೋ..., ನಿನ್ನ ಪ್ರಿಯಾರಿಟಿ ಯಾವುದಕ್ಕೆ ಅನ್ನುವುದೇ ನಿನ್ನ ಬದುಕು!

*

ಇದನ್ನ ನಿನ್ನ ಲೆಕ್ಕಾಚಾರಕ್ಕೇ ಅನ್ವಯಿಸೋಣ...!

ಮೊದಲ ಇಪ್ಪತ್ತು ವರ್ಷ ವೈಯುಕ್ತಿಕ! ಎರಡನೇ ಇಪ್ಪತ್ತು ವರ್ಷ ಸಂಬಂಧಗಳು! ಇನ್ನು ಮೂರನೇ ಇಪ್ಪತ್ತು??

ನಾನೇನು ಹೇಳುತ್ತಿದ್ದೇನೆ ಅನ್ನುವುದು ಅರ್ಥವಾಯಿತು ತಾನೆ?

(ಮೊದಲ ಇಪ್ಪತ್ತು ವರ್ಷ ಅವನ ಪ್ರಿಯಾರಿಟಿ ಅವನೇ ಆಗಿದ್ದ! ನಂತರದ- ಅಂದರೆ ಇದುವರೆಗಿನ ಇಪ್ಪತ್ತು ವರ್ಷ ಅವನ ಪ್ರಿಯಾರಿಟಿ ಸಂಬಂಧಗಳಿಗೆ! ಇನ್ನುಮುಂದಿನ ಪ್ರಿಯಾರಿಟಿ ಯಾವುದಕ್ಕೆ ಇರಬೇಕು ಅನ್ನುವುದು ಪ್ರಶ್ನೆ- ಅಂದರೆ ಗುರಿಯಕಡೆ, ಸಂಪಾದನೆಯ ಕಡೆ ಗಮನ ಹರಿಸು ಅಂತ! ಸಾಕು ಸಂಬಂಧಗಳಿಗೆ- ಬೆಲೆ ಕೊಟ್ಟಿದ್ದು ಅಂತ! ಯಾಕೆ? ಯಾಕೆಂದರೆ.... ಮುಂದಿನ ವಿವರಣೆ)

*

*

ಯೋಚಿಸಿ ನೋಡು..., ನಿನಗೆ ಅವರೆಂದರೆ ಅಸಾಧ್ಯ ಗೌರವ- ಇಷ್ಟ! ನಿನಗೆ ಅವರನ್ನು ಭೇಟಿಯಾಗಬೇಕು! ಹೊರಡುತ್ತೀ...! ಅವರು ಅಲ್ಲಿ ಇರುವುದಿಲ್ಲ! ಕಾಲ್ ಮಾಡುತ್ತಿ! “ನಾನಲ್ಲಿ ಇಲ್ಲ!” ಎಂದು ಹೇಳುತ್ತಾರೆಯೇ ಹೊರತು- "ಎಲ್ಲಿ" ಇದ್ದಾರೆಂದು ಹೇಳುವುದಿಲ್ಲ!

ಅರ್ಥವೇನು? ನಿನಗೇಕೆ ಅರ್ಥವಾಗುವುದಿಲ್ಲ?

ಅರ್ಥವಾದರೂ ನಿನ್ನ ಈಗೋ- ಅಹಂ- ಒಪ್ಪುವುದಿಲ್ಲ!

-ನ್ನ-ನ್ನು ಅವರು ಕಡೆಗಣಿಸುತ್ತಾರ? ಅನ್ನುತ್ತಿ!

(ಇದು ಅವನಿಗಾದ ಒಂದು ಅನುಭವ..., ಅವನಿಗೆ ತುಂಬಾ ಇಷ್ಟವಾದ ವ್ಯಕ್ತಿಯೊಬ್ಬರಿದ್ದರು. ಅವರನ್ನು ಭೇಟಿಯಾಗಬೇಕೆಂದು ಅವನು ಅವರ ಮನೆಗೆ ಹೋದ. ಆದರೆ ಅವರು ಅಲ್ಲಿ ಇರಲಿಲ್ಲ. ಕಾಲ್ ಮಾಡಿದ. “ನಾನು ಅಲ್ಲಿ ಇಲ್ಲ” ಅಂದರೇ ಹೊರತು ಎಲ್ಲಿ ಇದ್ದಾರೆಂದು ಹೇಳಲಿಲ್ಲ! ಯಾಕೆ ಹೇಳಲಿಲ್ಲ? ಅವರಿಗೆ ಇವನನ್ನು ನೋಡುವುದು ಬೇಕಿರಲಿಲ್ಲ- ಆ ಸಮಯದಲ್ಲಿ ಅವರ ಪ್ರಿಯಾರಿಟಿ ಅವನಲ್ಲ! ಅರ್ಥ ಮಾಡಿಕೋ ಅಂತ)

*

*

ಮುನ್ನೂರು ನಾನೂರು ಕಿಲೋಮೀಟರ್ ಪ್ರಯಾಣ ಮಾಡಿ ಒಬ್ಬರನ್ನು ಭೇಟಿಯಾಗಲು ಹೋಗುತ್ತಿ! ಅವರು ಮನೆಗೆ ಕರೆಯುವುದಿಲ್ಲ! ಅವರು ಹೇಳಿದ ಸ್ಥಳಕ್ಕೆ ಹೋಗುತ್ತಿ! ಅವರದೇ ಊರು..., ಅವರಿಗಾಗಿಯೇ ಹೋಗಿದ್ದಿ..., ಪರ್ಟಿಕ್ಯುಲರ್ ಸಮಯವನ್ನೂ ಹೇಳಿರುತ್ತೀ..., ಆದರೂ ಅವರು ನಿನ್ನನ್ನು ಗಂಟೆಗಟ್ಟಲೆ ಕಾಯಿಸುತ್ತಾರೆ!

ಅರ್ಥವೇನು? ನಿನಗೇಕೆ ಅರ್ಥವಾಗುವುದಿಲ್ಲ?

ಅರ್ಥವಾದರೂ ನಿನ್ನ ಈಗೋ- ಅಹಂ- ಒಪ್ಪುವುದಿಲ್ಲ!!

-ನ್ನ-ನ್ನು ಅವರು ಕಡೆಗಣಿಸುತ್ತಾರ? ಅನ್ನುತ್ತಿ!

(ಇದು ಮತ್ತೊಂದು ಉದಾಹರಣೆ! ಅವನು ತುಂಬಾ ಅಭಿಮಾನಿಸುವ ಒಬ್ಬರನ್ನು ನೋಡಲು ಹೋಗಿದ್ದಾನೆ. ಮುಂಚೆಯೇ- ಇಂತಾ ದಿನ ಇಂತಾ ಸಮಯದಲ್ಲಿ ಬರುತ್ತಿದ್ದೇನೆ ಎಂದು ಹೇಳಿಯೇ ಹೋಗಿದ್ದಾನೆ. ಆದರೆ ಅವರು ವಿನಾಕಾರಣ ಅವನನ್ನು ಗಂಟೆಗಟ್ಟಲೆ ಕಾಯಿಸಿದ್ದಾರೆ. ಆದರೂ ಅವನು ಅದನ್ನು ಒಪ್ಪಲು ತಯಾರಿಲ್ಲ! ಅವರಮೇಲೆ ಅವನಿಗಿರುವ ಅಭಿಮಾನಕ್ಕೆ ಅವರು ಹಾಗೆ ಮಾಡುವುದಿಲ್ಲ- ಬರಲಾಗದ ಬೇರೆ ಕಾರಣವಿರಬಹುದು ಅನ್ನುತ್ತಾನೆ! ಅವರ ಪ್ರಿಯಾರಿಟಿ ಅವನಲ್ಲ ಅನ್ನುವುದು ಒಪ್ಪು ಅಂತ!)

*

*

ಶಂಭೂ..., ಕೇಳು..., ನನಗೆ ನಿನ್ನಬಗ್ಗೆ ಒಂದು ಡೌಟ್ ಬಂದಿದೆ ಅಂದುಕೋ..., ಅದಕ್ಕೆ ಯಾವುದೇ ಆಧಾರವಿರುವುದಿಲ್ಲ- ಡೌಟ್ ಬಂದಿದೆ ಅಷ್ಟೆ! ಒಂದೋ ನಾನು ಮೌನವಾಗುತ್ತೇನೆ! ಇಲ್ಲಾ..., ನಿನ್ನನ್ನು ಪ್ರಶ್ನೆ ಮಾಡುತ್ತೇನೆ! ಆ ಪ್ರಶ್ನೆಗೆ ನನ್ನಲ್ಲಿ ನನ್ನದೇ ಆದ ಉತ್ತರವೊಂದು ಸಿದ್ಧವಿರುತ್ತದೆ! ನೀನು ಹೇಳುವ ಉತ್ತರ ಅದಕ್ಕೆ ವ್ಯತಿರಿಕ್ತವಾಗಿದ್ದರೆ ನಾನು ಡಿಸ್ಟರ್ಬ್ ಆಗುತ್ತೇನೆ! ನಿನ್ನನ್ನು ಕ್ರಾಸ್ ಮಾಡಲು ಶುರುಮಾಡುತ್ತೇನೆ! ತಿರುತಿರುಗಿ ಪ್ರಶ್ನೆಗಳನ್ನು ಕೇಳುತ್ತೇನೆ- ಕೇಳುತ್ತಲೇ ಇರುತ್ತೇನೆ! ಸಾಕ್ಷಿಗಳಿಗಾಗಿ ನಿನ್ನ ಫಾಲೋ ಮಾಡುತ್ತೇನೆ..., ಹೇಗಾದರೂ ಸರಿ ನನ್ನ ಡೌಟ್ ನಿಜ ಎಂದು ಸಾಬೀತು ಮಾಡಲು ಪ್ರಯತ್ನಿಸುತ್ತೇನೆ- ಪ್ರಯತ್ನಿಸುತ್ತಲೇ ಇರುತ್ತೇನೆ!

ಹಾಗೆ ಮಾಡಲು ಶುರು ಮಾಡಿದ ದಿನ- ನೀನು ನನ್ನನ್ನು ದೂರ ಇಡುವುದು ಒಳ್ಳೆಯದು! ಇದು ಮುಗಿಯದ ಕಥೆ! ನನ್ನ ಮೌನವನ್ನು ಕಂಡು ಗೊಂದಲಗೊಂಡು ಕಾರಣ ಕೇಳುವುದಾಗಲಿ..., ನನ್ನ ಪ್ರಶ್ನೆಗಳಿಗೆ ವಿವರಣೆ ಕೊಟ್ಟು ನಿನ್ನ ನಿಜಾಯಿತಿಯನ್ನು ಸಾಬೀತುಪಡಿಸಲು ಶ್ರಮಿಸುವುದಾಗಲಿ..., ವ್ಯರ್ಥ!

(ಇದು ಸಂಶಯ ರೋಗದ ಬಗ್ಗೆ ಅವನಿಗೆ ತಿಳಿ ಹೇಳಿದ್ದು! ಅಂತವರನ್ನು- ನಿಜ ಏನು ಎಂದು ನಂಬಿಸುವುದು ಕಷ್ಟ ಅಂತ! ಅವರನ್ನು ದೂರ ಇಡುವುದು ಒಳ್ಳೆಯದು ಅಂತ)

*

*

ಗಮನಿಸಿದ್ದೀಯ? ಒಬ್ಬರಿಗೆ ನಿನ್ನ ಮೇಲೆ ಆಸಕ್ತಿಯಿದ್ದಾಗ..., ಅವರು..., ನಿನ್ನ ಮತ್ತು ಅವರ ಮಧ್ಯೆ ಒಂದು ರೊಟೇಷನ್ ಸೃಷ್ಟಿಸುತ್ತಾರೆ! ಅಂದರೆ..., ಭೇಟಿಯಾಗುವುದಾಗಲಿ, ಕಾಲ್, ಮೆಸೇಜ್‌ ಮಾಡುವುದಾಗಲಿ ಏನೋ ಒಂದು ರೊಟೇಷನ್- ಪ್ರೋಟೋಕಾಲ್ ತರ!

ನಂತರ ನಿನ್ನ ಮೇಲಿನ ಅವರ ಆಸಕ್ತಿ ಕಡಿಮೆಯಾದಾಗ ಆ ರೊಟೇಷನ್ ಅವರಿಗೆ ಪಿರಿಪಿರಿಯಾಗುತ್ತದೆ! ನಿನಗೆ ಅವರ ಬದಲಾವಣೆ ಅರ್ಥವೇ ಆಗುವುದಿಲ್ಲ! ಆದರೆ ನೀನು ಅವರಿಗೆ ಪಿರಿಪಿರಿ ಆಗುತ್ತಿದ್ದಿ ಅನ್ನುವುದು ಅರ್ಥವಾಗುತ್ತದೆ! ಯಾಕೆ ಪಿರಿಪಿರಿ ಎಂದು ತಿಳಿದುಕೊಳ್ಳಲು ಶ್ರಮಿಸುತ್ತಿ! ಅದು ಅವರಿಗೆ ಮತ್ತಷ್ಟು ಪಿರಿಪಿರಿಯಾಗಿ..., ಯಾಕಿಷ್ಟು ಹಿಂಸೆ ಕೊಡುತ್ತೀಯ ಅನ್ನುವಂತೆ- ಆಗಿನ ನಿನ್ನ ವರ್ತನೆಯನ್ನು ಅವರೇ ಎತ್ತಿ ತೋರಿಸುತ್ತಾರೆ! ನಿನ್ನ ತಕರಾರಿಗೆ ಕಾರಣ ಅವರ ಬದಲಾವಣೆ ಅನ್ನುವುದನ್ನು ಅವರು ಒಪ್ಪುವುದೇ ಇಲ್ಲ!!

ಪ್ರಪಂಚವೇ ಹಾಗಿದೆಯೋ ಶಂಭು!

(ಅಂದರೆ..., ಒಬ್ಬರಿಗೆ ಯಾವುದೋ ಕಾರಣಕ್ಕೆ ನಮ್ಮ ಮೇಲೆ ಆಸಕ್ತಿ ಹುಟ್ಟುತ್ತದೆ. ನಿರಂತರವಾಗಿ ನಮ್ಮ ಸಾನ್ನಿಧ್ಯ ಬಯಸುತ್ತಾರೆ. ನಾವು ಅವರ ಅಭಿಮಾನಕ್ಕೆ ಗೌರವ ಕೊಡುತ್ತೇವೆ. ದಿನದ ಇಂತಿಷ್ಟು ಸಮಯ ಅವರಿಗೆ ಮೀಸಲಿಡುತ್ತೇವೆ. ಕಾಲ ಕಳೆದಂತೆ ಅವರ ಪ್ರಿಯಾರಿಟಿ ಬದಲಾಗುತ್ತದೆ. ನಾವು ಅವರಿಗೆ ಕೊಟ್ಟ ಸಮಯ- ಅವರು ನಮಗೆ ಕೊಟ್ಟ ಸಮಯವಾಗಿ ಬದಲಾಗುತ್ತದೆ! ಆ ಸಮಯದಲ್ಲಿ ನಾವು ಎಂದಿನಂತೆ ಅವರೊಂದಿಗೆ ಇರಲು ಶ್ರಮಿಸಿದರೆ ಅವರಿಗೆ ಹಿಂಸೆ ಅನ್ನಿಸುತ್ತದೆ- ಕಾರಣ ಆ ಸಮಯದ ಅವರ ಪ್ರಿಯಾರಿಟಿ ಬದಲಾಗಿರುತ್ತದೆ!! ಅವರ ಪ್ರಿಯಾರಿಟಿ ಬದಲಾಗಿದ್ದು ನಮಗೆ ಗೊತ್ತಾಗುವುದೇ ಇಲ್ಲ- ಅವರ ವರ್ತನೆ ಬದಲಾದಾಗ ಗೊಂದಲವಾಗುತ್ತದೆ! ಕಾರಣ ಕೇಳುತ್ತೇವೆ! ಆ ಕೇಳಿದ್ದನ್ನೇ ಅವರು ಕಾರಣವಾಗಿ ತೋರಿಸಿ ನಮ್ಮದೇ ಸಮಸ್ಯೆ ಅನ್ನುವಂತೆ ಬಿಂಬಿಸುತ್ತಾರೆ! ಸೋ... ಅವರಿಗೆ ನಿನ್ನ ಅಗತ್ಯವಿಲ್ಲ ಅನ್ನುವ ವಾಸ್ತವ ಒಪ್ಪು ಅಂತ!)

*

*

ಇನ್ನು ಆ ವಿಷಯ ಹೇಳ್ತೀನಿ ಕೇಳು! ಅದು ಕೂಡ ತುಂಬಾ ಮಜ ಕೊಡ್ತು! ನಿನ್ನ ಬಾಯಿ ಮುಚ್ಚಿಹೋದ ಸಂದರ್ಭ!!! ಅವಳ ವಿಷಯದಲ್ಲಿ ಏನು ಹೇಳಲೂ ತೋಚದೆ ಮೌನಿಯಾದ ವಿಷಯ! ಪಾಪ ನೀನು...!

*

ಅವಳು ನನ್ನನ್ನು ಬೇಟಿಯಾಗಲು ಬಂದಿದ್ದಳು! ಆಗ ನನಗೂ ಅಮ್ಮನಿಗೂ ಹುಷಾರಿರಲಿಲ್ಲ. ಇಬ್ಬರಿಗೂ ಪರಿಪೂರ್ಣ ಮಂಪರು! ಅದಕ್ಕೇ ಬಾಗಿಲು ಸ್ವಲ್ಪವೇ ಸ್ವಲ್ಪ ತೆರೆದು..., ಅವಳನ್ನು ಮನೆಯ ಒಳಗೆ ಕರೆಯದೆ, ವಿಷಯ ಹೇಳಿ- ಹಾಗಿಂದ ಹಾಗೆಯೇ ಕಳಿಸಿಬಿಟ್ಟೆ!

ಪಾಪ ಹುಡುಗಿ ನಿನಗೆ ಕಾಲ್ ಮಾಡಿದಳು!

(ಇದು ನನ್ನ ಮತ್ತು ಶಂಭುವಿನ ಮ್ಯೂಚ್ವಲ್ ಗೆಳತಿಯ ವಿಷಯ! ನನಗೆ ಕ್ಲೋಸ್ ಫ್ರೆಂಡ್ ಅವಳು- ಇದುವರೆಗೆ ಶಂಭುವನ್ನು ಭೇಟಿಯಾಗಿಲ್ಲವಾಗಲಿ ಫೋನ್‌ನಲ್ಲಿ ಪರಸ್ಪರ ಮಾತಾಡಿದ್ದಾರೆ- ತುಂಬಾ! ಅವಳೊಮ್ಮೆ ನನ್ನ ಮನೆಗೆ ಬಂದಿದ್ದಳು- ಆದರೆ ನನಗೆ ಹುಷಾರಿರಲಿಲ್ಲ. ನನ್ನ ಅಮ್ಮನಿಗೂ. ಎಲ್ಲಿ ಒಳಗೆ ಕರೆದು ಮಾತನಾಡಿದರೆ ಅವಳಿಗೂ ರೋಗ ಹರಡುತ್ತದೋ ಅನ್ನೋ ಹೆದರಿಕೆ ನಮ್ಮದು! ಹಾಗೆಯೇ ವಾಪಸ್ ಕಳಿಸಿದ್ದೆ! ಅವಳು ಶಂಭುವಿಗೆ ಕಾಲ್ ಮಾಡಿದ್ದಾಳೆ!)

*

*

ಎಷ್ಟೇ ಹುಷಾರು ತಪ್ಪಿದರೂ..., ಅಷ್ಟು ವರ್ಷದ ನಂತರ ಮನೆಗೆ ಹೋದವಳನ್ನು ಒಳಗೇ ಕರೆಯಲಿಲ್ಲ- ಹೀಗೆ ಮಾಡಬಹುದಾ?!” ಎಂದು ಅವಳ ಸಂಕಟ ಹೇಳಿದರೆ..., ನೀನಾದರೂ ಏನು ಹೇಳಬೇಕು?

ಅಮ್ಮ ಇದ್ದರ? ಅಥವಾ ಅವಳೊಬ್ಬಳೇನಾ? ಅಮ್ಮ ಎಲ್ಲೋ ಹೋಗಿ ಅವಳೊಂದಿಗೆ ಬೇರೆ ಯಾರಾದರೂ ಇದ್ದಿರಬಹುದಾ?!” ಅಂದಿ- ನಿನ್ನ ತಲೆ!!

ನಿನ್ನ ಉದ್ದೇಶ..., ಗಂಡು ಹೆಣ್ಣು ಪ್ರೈವೇಟ್ ಆಗಿರುವ ಸಮಯದಲ್ಲಿ ಅವಳು ಬಂದಿದ್ದಳೇನೋ..., ಅದಕ್ಕೇ ನಾನು ಒಳಗೆ ಸೇರಿಸಿಲ್ಲವೇನೋ- ಎಂದು ಹೇಳುವುದು!! ಪ್ರಪಂಚದ ಬಗೆಗಿನ ನಿನ್ನ ದೃಷ್ಟಿಕೋನ- ಕರ್ಮ!!

(ಅವನ ತಲೆ! ಅಮ್ಮ ಎಲ್ಲೋ ಹೊರಗೆ ಹೋಗಿ ನಾನು ಯಾವುದಾದರೂ ಗಂಡಸಿನೊಂದಿಗೆ ಇದ್ದಿರಬಹುದೇನೋ ಅಂದಿದಾನೆ!! ಇಲ್ಲದಿದ್ದರೆ ಒಳಗೆ ಕರೆಯದೆ ಇರುತ್ತಿರಲಿಲ್ಲ ಅಂತ! ಪಾಪ ಆ ಹುಡುಗಿಗೆ ಇವನ ತರ್ಕವೆಲ್ಲ ಅರ್ಥವಾಗುವುದಿಲ್ಲ!)

*

*

ಅವಳಿಗೆ ಅದೆಲ್ಲ ಅರ್ಥವಾಗುವುದಿಲ್ಲವೋ...! ಅದಕ್ಕೇ..., ಪಾಪ..., ಅಷ್ಟು ಅತ್ತು ಕರೆದು...,

ಹೋಗಿ ಹೋಗಿ ನಿಮಗೆ ಹೇಳಿದೆನಲ್ಲಾ...? ಅವಳು ನಿಮಗಿಂತ- ನನಗಿಂತ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತಾಳೆ!” ಅಂದಳು!

ಎಷ್ಟು ಮುಗ್ಧೆ ಅಲಾ?!

ಗಂಡು ಹೆಣ್ಣು ಪ್ರೈವೇಟ್ ಆಗಿರುವುದಕ್ಕೂ..., ಅಮ್ಮನನ್ನು ನೋಡಿಕೊಳ್ಳುವುದಕ್ಕೂ ಸಂಬಂಧವಿಲ್ಲ ಅನ್ನುವುದು ಅವಳ ಅರಿವಿಗೇ ಬರುವುದಿಲ್ಲವೋ!

ಸೆಕ್ಸ್ ಅನ್ನುವುದು ಏನೋ ಕ್ರೈಂ..., ಅದನ್ನು ಮಾಡುವವರು ಅಪ್ಪ ಅಮ್ಮನನ್ನು ನೋಡಿಕೊಳ್ಳಲಾರದಷ್ಟು ಕೆಟ್ಟವರು- ಅನ್ನುವಂತೆ ಯೋಚಿಸುವ ಅವಳಿಗೆ ನೀನಾದರೂ ಏನು ವಿವರಣೆ ಕೊಡುತ್ತೀ?

ಸಧ್ಯ... ಏನೂ ವಿವರಣೆ ಕೊಡಲಿಲ್ಲವಲ್ಲ! ಕೊಡಬೇಡ..., ಅವಳಿಗೆ ಅರ್ಥವಾಗುವುದಿಲ್ಲ- ನಿನ್ನ ಮೌನವೇ ಒಳ್ಳೆಯದು!

-ಪಿಲ್..., ಕಾಂಡಂ-ಗಳನ್ನು ಇಟ್ಟುಕೊಂಡು ತಿರುಗಾಡುವ ಹದಿನಾಲ್ಕು ಹದಿನೈದು ವರ್ಷದ ಹೆಣ್ಣುಮಕ್ಕಳಿರುವ ಈ ಕಾಲದಲ್ಲಿ ಇವಳಂತವಳೂ ಇದ್ದಾಳೆನ್ನುವುದೇ ಒಂದು ಆಶ್ಚರ್ಯ..., ಅವಳನ್ನು ಹಾಗೇ ಉಳಿಸಿಕೋ...!

ಅವಳಿಗೆ ಪ್ರತಿ ಕ್ಷಣ ನೀನಿರು- ನಿನ್ನ ಅಗತ್ಯ ಅವಳಿಗೆ ಇದೆಯೋ ಇಲ್ಲವೋ..., ನೀನವಳಿಗೆ ಅರ್ಥವಾಗುತ್ತೀಯೋ ಇಲ್ಲವೋ..., ನಿನ್ನೊಳಗೆ ಅವಳಿಗೆ ನೀನು ಕೊಟ್ಟಿರುವ ಸ್ಥಾನದ ಅರಿವು ಅವಳಿಗೆ ಆಗುತ್ತೋ ಇಲ್ಲವೋ..., ಅವಳನ್ನು ಕಾಪಾಡಿಕೋ- ಅವಳ ಮುಗ್ಧತೆಯೊಂದಿಗೆ!

(ಅವನಿಗೆ ಅವಳೆಂದರೆ -ಒಳಿತೆಂದರೆ- ಪ್ರಾಣ! ಆದರೆ ನಂಬಿಕೆಯಿಲ್ಲ! ನಂಬು ಅಂತ!)

*

*

ಅವಳಿದ್ದರೆ ಪ್ರಪಂಚದೆಡೆಗಿನ ನಿನ್ನ ಕೆಟ್ಟ ದೃಷ್ಟಿಕೋನ ಬದಲಾಗುತ್ತೆ! ಹಾಗೇ ನಿನ್ನಿಂದ ಅವಳಿಗೆ 'ನಿನ್ನಂತಾ' ಕೆಟ್ಟ ಪ್ರಪಂಚದ ಅರಿವೂ ಆಗಲಿ!!

(ಇದು ಪ್ರಪಂಚದಲ್ಲಿ ಒಳ್ಳೆಯವರೂ ಇದ್ದಾರೆ ಎಂದು ತಿಳಿಸುವುದಷ್ಟೇ! ಪ್ರಪಂಚದ ಕೆಡುಕು ಅನ್ನುವುದು ಅವನ ದೃಷ್ಟಿಕೋನ! ನಿನಗೆ ಪ್ರಪಂಚ ಕೆಡುಕಾದರೆ ಪ್ರಪಂಚಕ್ಕೂ ನೀನು ಕೆಡುಕೇ! ದೃಷ್ಟಿಕೋನ ಬದಲಿಸು ಅಂತ)

*

*

ಇನ್ನು ಮುಖ್ಯ ವಿಷಯಕ್ಕೆ ಬರೋಣ...!

ಪ್ರಿಯಾರಿಟಿ!

ಇದೆಲ್ಲಾ ನಿನ್ನ ಪ್ರಿಯಾರಿಟಿಯನ್ನು "ಸಂಬಂಧಗಳಿಂದ" "ಕನಸಿನೆಡೆಗೆ" ತಿರುಗಿಸಲು ಸೂಚನೆಗಳು!

(ಅಂದರೆ..., ಇನ್ನಾದರೂ ಗುರಿಯೆಡೆಗೆ ನೋಡು ಅಂತ! ಏನಿದ್ದರೂ ಇನ್ನೊಬ್ಬರ ಪ್ರಿಯಾರಿಟಿ ನೀನಲ್ಲ- ಅವರ ಗುರಿ! ಹಾಗೇ... ನೀನೂ ಗುರಿಯನ್ನು ನೋಡು ಅಂತ!!)

*

*

ಗೊತ್ತು..., ಆಲ್ರೆಡಿ ನಿಶ್ಚಯಿಸಿದ್ದೀ..., ಶುರು ಮಾಡಿದ್ದೀ..., ಈ ಉಪದೇಶ ನಿನ್ನ ನಿಶ್ಚಯಕ್ಕೆ ನನ್ನ ಅನುಮತಿ!

ಇನ್ನು ನಿನಗೆ ವಿಶ್ರಾಂತಿಯಿಲ್ಲ!!

(ಅವನು ಆಲ್ರೆಡಿ ಗುರಿಯನ್ನು ನಿಶ್ಚಯಿಸಿದ್ದಾನೆ, ಶುರುವೂ ಮಾಡಿದಾನೆ.., ಆದರೆ ಈ ಬಾಂಧವ್ಯಗಳಿಂದಾಗಿ, ಅವರಿಗೆ ಕೊಡುವ ಪ್ರಿಯಾರಿಟಿಯಿಂದಾಗಿ ಮುಗ್ಗರಿಸುತ್ತಿದ್ದಾನೆ!)

*

*

ಸಂಬಂಧಗಳ ವಿಷಯ ಅನ್ನುತ್ತೀಯ?

ನೀನೇ ಹೇಳುವಂತೆ..., ಕೆಲವೊಮ್ಮೆ ನಮ್ಮ ನಿಷ್ಠುರತೆ ಇನ್ನೊಬ್ಬರಿಗೆ ಒಳಿತು ಮಾಡುವ ಹಾಗಿದ್ದರೆ ನಾವು ನಿಷ್ಠುರರಾಗಿಯೇ ಇದ್ದುಬಿಡೋದು ಒಳ್ಳೆಯದು!

(ಪದೇ ಪದೇ ಕನ್ಸರ್ನ್, ಪ್ರೀತಿ, ಗೌರವ ಅನ್ನೋ ಹೆಸರಿನಲ್ಲಿ ಇನ್ನೊಬ್ಬರಿಗೆ ತೊಂದರೆ ಕೊಡದೆ- ನಿನ್ನ ಪಾಡಿಗಿರು ಅಂತ!)

*

*

ಸಾಧಿಸುವವರೆಗೆ ನೀನೂ ಪ್ರಪಂಚದ ಕಣ್ಣಿಗೆ ಬೀಳಬೇಡ!!

ಆಲ್‌ದಿ ಬೆಸ್ಟ್ ಶಂಭು!

*

ನಿನ್ನ ಬಿಟ್ಟಿರಬಾರದ, ಬಿಟ್ಟಿರಲಾಗದ, ಬಿಟ್ಟಿರದ- ಲಕ್ಷ್ಮಿ!

(ಅವನ ಮೂವರು ಲಕ್ಷ್ಮಿಯರು ನಾನೇ! ಅವನ ದೇವಿ!!)

Comments

  1. ದೇವರೇ ಈಗ ಒಂದು ರೀತಿಲಿ ಅರ್ಥ ಆಯಿತು ಅನಿಸುತ್ತೆ 😔ಲಕ್ಹ್ಮೀಯ ಮತ್ತು ಶoಭುವಿನ ಮ್ಯೂಚುವಳ್ ಗೆಳತಿಯಿಂದ ಎಡವಟ್ಟಾದ ಅನಾಹುತ ಅವಳು ಎಂತವಳೋ ನೋಡಿ,ಸರಿಯಾಗಿ ಸತ್ಯವನ್ನು ವಿಚಾರಣೆ ಮಾಡದೇ ಅದೇ ಕೆಲ್ಸವಾಗಿ ಶoಭುವಿಗೆ ಕೆಟ್ಟ ರೀತಿಲಿ ಬಿಂಬಿಸಿ ಇಲ್ಲದ್ದೆಲ್ಲ ಹೇಳಿ ಅಳಲು ತೋಡಿಕೊಂಡು ಇಬ್ಬರ ಮದ್ಯೆ ದೊಡ್ಡ ಅಡ್ಡ ಗೋಡೆಯಾಗಿ ನಿಂತ ದುಃಷ್ಠ ಗೆಳತಿ 😔ಅದನ್ನು ಶಂಭು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಲಕ್ಷ್ಮಿ ಯ ಮೇಲೆ ಸಂಶಯ ಪಡಲು ಕಾರಣವಾಯಿತು ಲಕ್ಹ್ಮೀಯನ್ನು ನೋಡಕ್ಕೆ ಹೋದವಳು ಪಾಪ ಅವಳ ಒಳ್ಳೆಯದಕ್ಕೆ ಕಾಯಿಲೆ ಅವರಿಗೆ ಹರಡಬಾರದು ಅಂತ ಕಳಿಸಿದರೆ ಇವಳು ಮಾಡಿದ ಘನಕಾರ್ಯ 🤦ಮತ್ತೆ ಲಕ್ಷ್ಮಿ ಸಂಭುವಿಗೆ ಸತ್ಯದ ಅರಿವನ್ನು ಈ ಕತೆಯ ಮೂಲಕ ನಿರೂಪಿಸಿದ್ದಾಳೆ.. ಒಳ್ಳೆ ಪ್ರೇಮಿಗಳಿಗೆ ಇಂತವರಿಂದಲೇ ದೊಡ್ಡ ಅವಾಂತರಗಳು ಬರುವುದು ಇನ್ನುಮೇಲೆ ಇವೆಲ್ಲ ತೊಳಗಿ ಶoಭು ಮತ್ತು ಮತ್ತು ಲಕ್ಹ್ಮೀಯರು ಅರ್ಥಮಾಡಿಕೊಂಡು ಬೇರೆಯವರ ಮಾತುಗಳಿಗೆ ಎಡೆಕೊಡದೆ ಮನಸ್ಸು ಬಿಚ್ಚಿ ಮಾತಾಡಿ ಒಳ್ಳೆ ಪ್ರೇಮಿಗಳಾಗಿ ಈ ಶಿವರಾತ್ರಿಗೆ ಕಥೆಯಲ್ಲಿ ಮದುವೆ ಮಾಡಿಸಿ ಸರ್ ಇಲ್ಲ ಇದು ನಿಜವಾದ ಘಟನೆಯಾದರೆ ಇಬ್ಬರಿಗೂ ಮದುವೆ ಮಾಡಿಸಿ ಇಬ್ಬರು ಜೊತೆ ಜೊತೆಯಾಗಿ ಜೀವನ ಕಟ್ಟಿಕೊಂಡು ಸಾಧನೆ ಮಾಡಲಿ ಅ ಮೂರು ಲಕ್ಹ್ಮೀಯರು ಒಂದು ಆದ ಆ ಮಹಾಲಕ್ಹ್ಮೀಯ ಮತ್ತು ಶಂಭುವಿನ ಮದುವೆಯಾದರೆ ನಿಮ್ಮ ಕತೆ ಸಾರ್ಥಕವಾಗುತ್ತದೆ ಸರ್ 💐💐ಶುಭಾವಾಗಲಿ ನಿಮ್ಮ ಕತೆಯ ಶoಭುವಿಗೆ ಮತ್ತು ಲಕ್ಹ್ಮೀಗೆ ಶುಭ ಲಗ್ನಪ್ರಾಪ್ತಿರಸ್ತು ಜೊತೆಗೆ ಅವರ ಸ್ವಂತ ಅಮ್ಮನು ಅರ್ಥ ಮಾಡಿಕೊಂಡು ಇನ್ನೊಬ್ಬ ಅಮ್ಮನಲ್ಲದ ಅಮ್ಮನು ಇಬ್ಬರು ಮತ್ತು ಮಿಕ್ಕ ಅಮ್ಮಂದಿರು ಅರ್ಥ ಮಾಡಿಕೊಂಡು ಆಶೀರ್ವದಿಸಲಿ ಸುಮಂಗಲಿ ಅಮ್ಮಂದ್ದೀರ.'ಅಕ್ಕಂದಿರ ಮೂಲಕ ಮಂಗಳ ಕಾರ್ಯ ಆಗುವಂತೆ ಆಗಲಿ ನಿಮ್ಮ ಕತೆಲಿ ಸರ್. ಶುಭವಾಗಲಿ ಶುಭ ಸುದ್ದಿಯೊಂದಿಗೆ ಒಳ್ಳೆವೈಭವದ ಬಿತ್ತರವಾಗಲಿ 💐💐ಹೀಗೆ ಬರೀತೀರಿ ನಿಮ್ಮ ಸಾಹಿತ್ಯ ಒಳ್ಳೆ ಆಶಯಗಳೊಂದಿಗೆ ಜೀವಂತವಾಗಿರಲಿ 💐💐🙏🙏

    ReplyDelete

Post a Comment

Popular posts from this blog

ಹಾರರ್ ಥೀಂ

ಕಡಲು ಬೆಟ್ಟ ಮತ್ತು ನಾನು!

ದಾರಿಯಲ್ಲಿ ಸಿಕ್ಕವಳು!