ಗಣ

ಗಣ
*
ಗಾಢ ನಿದ್ರೆ.
ಕನಸು.
ಅಲರಾಂ ಸೌಂಡಿಗೆ ಬೆಚ್ಚಿ ಕಣ್ಣು ಬಿಟ್ಟೆ.
ಕತ್ತಲು.
ಕಾಣುತ್ತಿದ್ದ ಕನಸು ಮರೆಯದಂತೆ ಮತ್ತೊಮ್ಮೆ ನೆನಪಿಸಿಕೊಂಡೆ.
ಸುಮಾರು ನಲವತ್ತು ವರ್ಷ ಮುಂಚೆ ನಡೆದ ಸಣ್ಣ ಘಟನೆ- ಕನಸಿನಲ್ಲಿ!
ಆ ಘಟನೆ ಮರೆಯುವುದಿಲ್ಲ..., ಆದರೆ ಈಗ ಕನಸಾಗಿ ಬಂದಿದ್ದರ ಅರ್ಥವೇನಿರಬಹುದು?
ನನಗಾಗ ಹತ್ತು ವರ್ಷ ವಯಸ್ಸು.
ಐದನೇ ತರಗತಿಯಲ್ಲಿ ಓದುತ್ತಿದ್ದೆ. ಮಧ್ಯಾಹ್ನದ ಊಟದ ಸಮಯ. ಶಾಲೆಯ ಹಿಂಬಾಗದಲ್ಲಿ ಸ್ಮಶಾನ! ಗೆಳೆಯರು ಬರುವುದಿಲ್ಲವಾದ್ದರಿಂದ- ಒಬ್ಬನೇ ಕಾಂಪೌಂಡ್ ಹಾರಿ ಸ್ಮಾಶನಕ್ಕೆ ಹೋದೆ. ಅಲ್ಲೊಂದು ಹುಣಸೇ ಮರ. ಅದನ್ನು ಹತ್ತಿ ಹುಣಸೆ ಹಣ್ಣುಗಳನ್ನು ಕಿತ್ತು ಕೆಳಗಿಳಿದೆ. ಮರದ ಬುಡದಲ್ಲಿ ಕುಳಿತು ಹಣ್ಣೊಂದನ್ನು ಚಪ್ಪರಿಸುತ್ತಿದ್ದೆ. ಮರದ ಎಲೆಗಳ ಗಲಗಲ ಶಬ್ದದೊಂದಿಗೆ ಹದ್ದಿನ ಶಬ್ದವೂ ಕೇಳಿಸಿ ತಲೆಯೆತ್ತಿ ನೋಡಿದೆ. ಎಂತಹಾ ಅದ್ಭುತ ದೃಶ್ಯ! ಸಣ್ಣಸಣ್ಣ ಎಲೆಗಳ ನಡುವಿನಿಂದ ಕಾಣಿಸುತ್ತಿದ್ದ ಸೂರ್ಯ! ಆ ಸೂರ್ಯನ ಮಧ್ಯಭಾಗದಲ್ಲಿರುವಂತೆ..., ಹದ್ದು- ನೆರಳಿನಂತೆ! ನಡುಮಧ್ಯಾಹ್ನದ ಸೂರ್ಯನನ್ನು ನೇರವಾಗಿ ನೋಡಲಾಗದು, ಆದರೆ ಮರದ ಎಲೆಗಳ ನಡುವಿನಿಂದ..., ಹದ್ದಿನ ಮರೆಯಲ್ಲಿ..., ಕಣ್ಣು ಚಿಕ್ಕದು ಮಾಡಿ- ನೋಡಬಹುದು!
ಅತ್ಯಂತ ಏಕಾಗ್ರಚಿತ್ತನಾಗಿ ಅದನ್ನೇ ನೋಡುತ್ತಿದ್ದೆ. ಮೈ ಹಗುರಾದಂತೆ..., ನನ್ನಿಂದ ನಾನು ಬೇರೆಯಾದಂತೆ- ಭಾವ!
ಎದ್ದೇಳಲು ಶ್ರಮಿಸಿದವನು ತಲೆ ತಿರುಗಿದಂತಾಗಿ ಅಲ್ಲಿಯೇ ಬಿದ್ದುಬಿಟ್ಟೆ.
ನಂತರ ಎಷ್ಟುಹೊತ್ತು ಮೂರ್ಚಿತನಾಗಿ ಬಿದ್ದಿದ್ದೆನೋ ತಿಳಿಯದು- ಯಾರೋ ಕರೆದಂತಾಗಿ ಎಚ್ಚರಗೊಂಡೆ.
ಯಾರೂ ಇರಲಿಲ್ಲ!
ಎದ್ದು ತರಗತಿಗೆ ಹೋಗಿದ್ದೆ.
ಇದು ಘಟನೆ!
ಆದರೆ ಇಂದು ಕಂಡ ಕನಸಿನಲ್ಲಿ...., ಕರೆದವರು ಯಾರೆಂದು ಸ್ಪಷ್ಟವಾಗಿ ಕಾಣಿಸಿತ್ತು! ಕರೆದದ್ದು ಮಾತ್ರವಲ್ಲ...,
“ಸಮಯವಾದಾಗ ಕರೆದುಕೊಂಡು ಹೋಗುತ್ತೇನೆ!” ಎಂದು ಹೇಳಿದ್ದೂ ಕಿವಿಯಲ್ಲಿ ಮೊಳಗುತ್ತಿತ್ತು!!
ತಲೆ ಕೊಡವಿ ಎದ್ದು ಕುಳಿತೆ!
ಬೆಳಗಿನ ಮೂರು ಗಂಟೆಗೆ ಅಲರಾಂ ಇಟ್ಟಿದ್ದೆ.
ನಾಡಿದ್ದಿಗೆ ನನಗೆ ಐವತ್ತು ವರ್ಷ ತುಂಬುತ್ತದೆ.
ಒಂದು ಟೂರ್ ಹೋಗಬೇಕು.
ಮುಂಚೆಯಾಗಿದ್ದರೆ ಮೂಕಾಂಬಿಕಾಗೆ ಹೋಗುತ್ತಿದ್ದೆ. ಆದರೆ ಇತ್ತೀಚೆಗೆ ಯಾಕೊ ದೇವಸ್ಥಾನಗಳೆಂದರೇನೇ ಬೇಜಾರು!
ಆ ಜನಸಂದಣಿ, ಆ ನೂಕುನುಗ್ಗಲು....!
ಈ ವರ್ಷ ದೇವಸ್ಥಾನದ ಹೊರತು ಸುಮ್ಮನೆ ಒಂದು ಸುತ್ತು ಸುತ್ತೋಣ ಅನ್ನಿಸಿತು.
ಮೂರನೇಯ ದಿನ ಯಾವುದಾದರೂ ಬೀಚ್- ತಲುಪುವಂತೆ!
ಬೆಳಕು ಹರಿಯುವುದಕ್ಕಿಂತ ಮುಂಚೆ ಹೊರಟರೇನೇ ಪ್ರಯಾಣದ ಸುಖ ದೊರಕುವುದು!
ಎದ್ದು ತಯಾರಾಗಿ ಹೊರಟೆ.
ಕನಸು ಬೆಂಬಿಡದೆ ಕಾಡುತ್ತಿತ್ತು!
*
ಬೆಳಗಿನ ಹತ್ತುಗಂಟೆ ಆಗುವಷ್ಟರಲ್ಲಿ ಇನ್ನೂರು ಕಿಲೋಮೀಟರ್ ದೂರ ಪ್ರಯಾಣಿಸಿದ್ದೆ.
ಟಿ ಅಂಗಡಿಯೊಂದು ಕಾಣಿಸಿ ನಿಲ್ಲಿಸಿದೆ.
ಐದಾರು ಜನ; ಹುಡುಗಿಯೊಬ್ಬಳೊಂದಿಗೆ ಮಾತನಾಡುತ್ತಾ ನಿಂತಿದ್ದರು!
ಅಥವಾ...,
ಹುಡುಗಿಯೊಬ್ಬಳು ಐದಾರು ಜನರೊಂದಿಗೆ ಮಾತನಾಡುತ್ತಾ ನಿಂತಿದ್ದಳು.
ಟಿ ಅಂಗಡಿಯವನು ಅಂಗಡಿಯಿಂದ ಹೊರಕ್ಕೆ ಬರಲು ಶ್ರಮಿಸುತ್ತಿದ್ದಾಗ..., 
“ಒಂದು ಟೀ ಕೊಡಿ!” ಎಂದೆ.
ನನ್ನ ಮುಖವನ್ನೊಮ್ಮೆ ಸೂಕ್ಷ್ಮವಾಗಿ ನೋಡಿ...,
“ಇವರೊಂದಿಗೆ ಕಳಿಸೋಣ...!” ಎಂದು ಉಳಿದವರಿಗೆ ಹೇಳಿ..., ಪ್ಲಾಸ್ಕ್ ಅದುಮುತ್ತಾ...,
“ಎಲ್ಲಿಗೆ ಹೋಗ್ತಿದೀರಾ ಸಾ?” ಎಂದು ನನ್ನನ್ನು ಕೇಳಿದ.
“ಇಂತಾ ಕಡೆ ಅಂತೇನೂ ಇಲ್ಲ!” ಎಂದೆ.
ಅರ್ಥವಾಗದೆ ನೋಡಿದ. ಉಳಿದವರೂ ನೋಡಿದರು. ಒಬ್ಬ...,
“ನೋಡಿ ಸಾ..., ಒಬ್ಳೇ ಹುಡ್ಗೀನ ಹೇಗ್ ಬಿಟ್ಟು ಹೋಗಿದಾನೆ!” ಅಂದರು.
ಅಷ್ಟರಲ್ಲಿ ಅಂಗಡಿಯವನು...,
“ಸಿಗರೇಟು ಬೇಕಾ ಸಾ?” ಎಂದು ಕೇಳಿದ.
“ಬೇಡ..., ಟೀ ಮಾತ್ರ ಕೊಡಿ!” ಎಂದೆ.
ನಿಜ ಹೇಳಬೇಕೆಂದರೆ ಅವರ ವಿಷಯದಲ್ಲಿ ನನಗೆ ಯಾವುದೇ ಕುತೂಹಲ, ಆಸಕ್ತಿ ಇರಲಿಲ್ಲ.
ಟಿ ಕುಡಿಯುವುದು, ಗಾಡಿಯ ಇಂಜಿನ್ ಸ್ವಲ್ಪ ಕೂಲ್ ಆದ ತಕ್ಷಣ ಹೊರಡುವುದು- ಉದ್ದೇಶ.
ಆದರೆ ಅವರು ಬಿಡುವಂತೆ ಕಾಣಿಸಲಿಲ್ಲ.
“ಸಾ..., ಹಾಗೇ ಮುಂದೆ ಬಸ್‌ಸ್ಟಾಪಲ್ಲಿ ಬಿಟ್ಟುಹೋಗಿ ಸಾ..., ಪಾಪ ಒಬ್ಬಂಟಿ ಹುಡುಗಿ!” ಎಂದ ಒಬ್ಬ.
ನಾನು ಹುಡುಗಿಯ ಮುಖ ನೋಡಿದೆ. ಅವಳಲ್ಲಿ ಅಂತಾ ಹೆದರಿಕೆಯೇನೂ ಇರಲಿಲ್ಲ. ಹೇಗೆ ಹೋಗುವುದೆನ್ನುವ ಗೊಂದಲ ಮಾತ್ರ.
“ಹೆಲ್ಮೆಟ್ ಇದೆ- ಪ್ಲೀಸ್!” ಎಂದಳು- ಹೆಲ್ಮೆಟ್ ತೋರಿಸುತ್ತಾ!
“ಆದ್ರೂ ಅದು ಹೇಗೆ ಹೋಗ್ಬಿಟ್ಟ ಅವ್ನು? ಹೆಣ್ಮಗು ಅನ್ನೋದೂ ನೋಡದೆ...!” ಎಂದು ಮಾತನಾಡಿಕೊಳ್ಳುತ್ತಾ ಜನ ಹೇಗೆ ಮಾಯವಾದರೋ ಗೊತ್ತೇ ಆಗಲಿಲ್ಲ.
ನಾನು ಟಿ ಕುಡಿದು ದುಡ್ಡು ಕೊಟ್ಟು ಹೊರಡುವಾಗ ಜೊತೆಗೇ ಬಂದಳು.
“ಪ್ಲೀಸ್..., ಬಸ್ಸೋ, ಕಾರೋ, ಆಟೋನೋ ಸಿಗೋ ಜಾಗದಲ್ಲಿ ಬಿಟ್ರೆ ಸಾಕು- ಐ ವಿಲ್ ಮ್ಯಾನೇಜ್!” ಎಂದಳು.
ಅವಳ ಧೈರ್ಯಕ್ಕೆ ನನ್ನ ವಯಸ್ಸು ಕಾರಣವೇನೋ ಅನ್ನಿಸಿತು. ಆದರೆ..., ಹೆಚ್ಚು ಕಿರಾತಕರು ನನ್ನ ವಯಸ್ಸಿನವರೇ ಅನ್ನುವುದು ಪ್ರಪಂಚಕ್ಕೆ ಗೊತ್ತೇ ಆಗುವುದಿಲ್ಲ!!
ಗಾಡಿ ಸ್ಟಾರ್ಟ್ ಮಾಡಿದೆ. ಅವಳು ಹತ್ತಲೋ ಬೇಡವೋ ಅನ್ನುವ ಗೊಂದಲದಿಂದ ನೋಡಿದಳು. ನಂತರ..., ನಾನು ನಿಂತೇ ಇರುವುದು ಕಂಡು..., ಅದೇ ಸೂಚನೆ ಅನ್ನುವಂತೆ...,
“ಥ್ಯಾಂಕ್ಸ್!” ಎಂದು ಹೇಳಿ ಹತ್ತಿ ಕುಳಿತುಕೊಂಡಳು.
ಮುಂದಕ್ಕೆ ಚಲಿಸಿದೆವು.
ಏಳುವಾಗ ಕಂಡ ಕನಸಿನ ಪ್ರಭಾವ ಅನ್ನಿಸುತ್ತದೆ..., ಇವತ್ತು ಪರಿಚಯವಾಗುವ ಹುಡುಗಿ "ಕರೆದುಕೊಂಡು ಹೋಗಲು ಬಂದವಳೇ" ಆಗಿರುತ್ತಾಳೆ ಅನ್ನುವ ಭ್ರಮೆ ನನಗೆ!! ಅದೇ ಕಾರಣಕ್ಕೆ ಸ್ವಲ್ಪ ಬಿಗುವಾಗಿದ್ದೆ.
ಆದರೆ ಕನಸಿನಲ್ಲಿ ಕಂಡ ಮುಖ ಇವಳಲ್ಲ- ಅದು ಲಕ್ಷ್ಮಿಯ ಮುಖ!
ತಟ್ಟನೆ..., ಇಶ್ಶೀ..., ಅನ್ನಿಸಿತು!
ಒಂದು ಕನಸಿಗೆ ಇಷ್ಟು ಮಹತ್ವ ಕೊಡಬೇಕೆ?!
ದೂರದಲ್ಲಿ..., ರಸ್ತೆಬದಿಯಲ್ಲಿ ಗಾಡಿಯೊಂದು ನಿಂತಿರುವುದು ಕಾಣಿಸಿತು.
“ಸ್ಟಾಪ್ ಸ್ಟಾಪ್ ಸ್ಟಾಪ್!” ಎಂದಳು ಹುಡುಗಿ.
ಗಾಡಿ ನಿಲ್ಲಿಸಿದೆ.
ಸ್ವಲ್ಪ ದೂರದಲ್ಲಿ ಹುಡುಗನೊಬ್ಬ ಮೂತ್ರವಿಸರ್ಜನೆ ಮಾಡುತ್ತಿರುವುದು ಕಾಣಿಸಿತು.
ಗಾಡಿಯಿಂದ ಇಳಿದ ಹುಡುಗಿ ಗಡಿಬಿಡಿಯಲ್ಲಿ ಆ ಗಾಡಿಯ ಬಳಿ ಹೋಗಿ ಕೀ ಇದೆಯಾ ಎಂದು ನೋಡಿದಳು.
ನಮ್ಮನ್ನು ನೋಡಿದ ಹುಡುಗನೂ ಗಡಿಬಿಡಯಲ್ಲಿ ಝಿಪ್ ಎಳೆಯುತ್ತಾ ಓಡಿ ಬಂದ.
ಅದು ಯಾವ ಮಾಯದಲ್ಲಿ ಹುಡುಗಿ ಗಾಡಿ ಹತ್ತಿದ್ದಳೋ..., ಸ್ಟಾರ್ಟ್ ಮಾಡಿದ್ದಳೋ..., ಬರ್ರನೆ ಹೊರಟು ಹೋದಳು.
ಆ ಹುಡುಗನೂ ನಾನೂ ಪರಸ್ಪರ ಮುಖ ನೊಡಿಕೊಂಡೆವು!
ಅವನ ಚಡಪಡಿಕೆ ಕಂಡು ಕನಿಕರವಾದರೂ..., ಆ ಹುಡುಗಿಯನ್ನು ಬಿಟ್ಟು ಬಂದವ ಅನ್ನಿಸಿ..., ನಾನೂ ಗಾಡಿ ಮುಂದಕ್ಕೆ ತೆಗೆಯುವಾಗ...,
“ಹಲೋ..., ಸ್ಟಾಪ್!” ಎಂದ- ಅಧಿಕಾರ ವಾಣಿಯಿಂದ.
“ಗಾಡಿ ಕದ್ದು- ಹಾಗೇ ಹೋಗ್ತೀರ?” ಎಂದ.
ವಿಷಯ ಅರ್ಥವಾಯಿತು...!
ಅವನಿಗೂ ಅವಳಿಗೂ ಏನೂ ಸಂಬಂಧವಿಲ್ಲ..., ನಾನೂ ಅವಳೂ ಸೇರಿ ಅವನ ಗಾಡಿ ಕದ್ದೆವು- ಅನ್ನುವ ಗಿಲ್ಟ್ ಬರುವಂತೆ ಮಾಡಲು ಶ್ರಮಿಸುತ್ತಿದ್ದಾನೆ!
ನಾನು ಗಾಡಿ ಆಫ್ ಮಾಡಿ, ಸ್ಟ್ಯಾಂಡ್ ಹಾಕಿ ನಿಲ್ಲಿಸಿ, ಬೀಗ ಜೇಬಿಗೆ ಹಾಕಿಕೊಂಡೆ. ನಂತರ...,
“ಕ-ದ್ದು..., ನಾನೆಲ್ಲಿಗೂ ಹೋಗುವುದಿಲ್ಲ! ನೀನು ಎಷ್ಟುಹೊತ್ತು ಇಲ್ಲಿರುತ್ತೀಯೋ..., ಅಷ್ಟೂ ಹೊತ್ತು ನಾನೂ ಇಲ್ಲಿರ್ತೀನಿ!” ಎಂದೆ.
ಅವನೇನೂ ಮಾತನಾಡಲಿಲ್ಲ. ನಾನೇ...,
“ಅವಳನ್ನು ಅಲ್ಲಿ ಬಿಟ್ಟು ಬಂದವ ನೀನೇ ತಾನೆ?” ಎಂದು ಕೇಳಿದೆ.
“ಯಾಕೆ ಬಿಟ್ಟು ಬಂದೆ ಅಂದಳು ಸೂ...?” ಎಂದ.
ಮುಗುಳುನಕ್ಕು..., ಗಾಡಿ ಹತ್ತಿ ಸ್ಟಾರ್ಟ್ ಮಾಡಿದೆ!
ಗಿಲ್ಟ್‌ಗೆ ರೀಸನ್ ಇಲ್ಲ!!
ಅವ ಬಿಟ್ಟು ಬಂದವನೇ!! ಅವರಿಬ್ಬರ ಸಮಸ್ಯೆಯಲ್ಲಿ ನಾನಿಲ್ಲ!
ಅವಳು ಹಾಗೆ ಗಾಡಿ ತೆಗೆದುಕೊಂಡು ಹೋಗಿದ್ದರಲ್ಲಿ ನನ್ನ ಪಾತ್ರ- ಆಯಾಚಿತವಾದುದು- ಹೊಣೆ ಹೊರಿಸಲಾಗುವಂತದ್ದಲ್ಲ!
ಹೊರಟೆ.
ಅವನು ನನ್ನನ್ನೇ ನೋಡುತ್ತಾ ನಿಂತಿದ್ದ.
ಡ್ರಾಪ್ ಕೇಳುತ್ತಾನೇನೋ ಅಂದುಕೊಂಡೆ.... ಆದರೆ ಆ ಅವಕಾಶವನ್ನು ಕಳೆದುಕೊಂಡ ಅರಿವು ಅವನಿಗಿತ್ತು!!
ಸಂದರ್ಭವನ್ನು ಅವನು ಬೇರೆ ರೀತಿಯಲ್ಲಿ ಹ್ಯಾಂಡಲ್ ಮಾಡಬಹುದಿತ್ತು!
*
ಸುಮಾರು ಹತ್ತು ಕಿಲೋಮೀಟರ್ ದೂರ ಹೋಗಿರಬಹುದು.
ವಿಜನ ಪ್ರದೇಶ.
ರಸ್ತೆಬದಿಯಲ್ಲಿ ಗಾಡಿ ನಿಲ್ಲಿಸಿ..., ಗಾಡಿಗೆ ಒರಗಿ..., ಸಿಗರೇಟು ಸೇದುತ್ತಾ ನಿಂತಿದ್ದಾಳೆ ಹುಡುಗಿ!
ಅವಳ ಧೈರ್ಯಕ್ಕೆ ನನ್ನ ವಯಸ್ಸಲ್ಲ- ಅವಳ ಆತ್ಮವಿಶ್ವಾಸವೇ ಕಾರಣ ಅನ್ನುವುದು ಪ್ರೂ ಆಗಿತ್ತು!
ನಾನು ಗಾಡಿ ನಿಲ್ಲಿಸಲಿಲ್ಲ.
ಅವಳನ್ನು ದಾಟಿ ಮುಂದಕ್ಕೆ ಹೋದೆ.
ನನ್ನನ್ನೇ ಕುತೂಹಲದಿಂದ ನೋಡಿ..., ಸಿಗರೇಟು ಎಸೆದು..., ಗಾಡಿ ಹತ್ತಿ ಸ್ಟಾರ್ಟ್ ಮಾಡುತ್ತಿರುವುದು ಮಿರರ್‌ನಲ್ಲಿ ನೋಡಿದೆ.
ಬಂದೇ ಬಂದಳು..., ನನ್ನ ಸಮನಾಂತರವಾಗಿ ಗಾಡಿ ಓಡಿಸತೊಡಗಿದಳು.
ನಿಲ್ಲಿಸಲು ಹೇಳುತ್ತಾಳೆ ಅನ್ನುವ ನಂಬಿಕೆ ಹುಸಿಯಾಯಿತು!
ನಾನು ನಿಲ್ಲಿಸುವಲ್ಲಿಯವರೆಗೂ ಬರುತ್ತಾಳೆ ಅನ್ನಿಸಿ..., ದೂರದಲ್ಲಿ ಕಾಣಿಸಿದ ಮರವೊಂದರ ನೆರಳಿನಲ್ಲಿ ನಿಲ್ಲಿಸಿದೆ.
ಅವಳೂ ಗಾಡಿ ನಿಲ್ಲಿಸಿ...,
“ಅವನೂ ಇರ್ತಾನೆ ಅನ್ಕೊಂಡೆ! ಏನಂದ ಷಂ...?!” ಎಂದಳು.
“ನೋಡು ಪುಟ್ಟ..., ನನಗೆ ನಿಮ್ಮ ವಿಷಯದಲ್ಲಿ ಯಾವುದೇ ಆಸಕ್ತಿಯಿಲ್ಲ! ನಿಮ್ಮ ವಿಷಯ ಅಂತ ಅಲ್ಲ..., ಯಾವುದರಲ್ಲಿಯೂ ಆಸಕ್ತಿಯಿಲ್ಲ! ನನ್ನ- ನನ್ನಪಾಡಿಗೆ ಬಿಟ್ಟುಬಿಡು!” ಎಂದೆ.
“ಇಂಟ್ರಸ್ಟಿಂಗ್! ನೀವು ಹೀಗೆ ಇದ್ದರೆ ಹೇಗೆ ಬಿಡುವುದು? ನಿಮ್ಮಂತವರೇ ಹೆಣ್ಣುಮಕ್ಕಳ ಕುತೂಹಲ!!” ಎಂದಳು.
ನಾನೇನೂ ಮಾತನಾಡಲಿಲ್ಲ.
“ನಿಮ್ಮ ಜೊತೆ ಬಂದ ನಾನು..., ಅವನನ್ನು ಹಾಗೆ ಬಿಟ್ಟು ಬಂದಿದ್ದು ನಿಮಗೆ ಏನೂ ಅನ್ನಿಸಲಿಲ್ಲವಾ?” ಎಂದಳು.
ನಾನು ಬಾಯಿ ತೆರೆಯಲಿಲ್ಲ. ಅವಳೇ...,
“ಅನ್ನಿಸಿರುತ್ತೆ! ಗಿಲ್ಟ್ ಆಗಿರುತ್ತೆ- ಯಾಕಪ್ಪಾ ಕರ್ಕೊಂಡ್‌ಬಂದೆ ಇವಳನ್ನ ಅಂತ!! ಆದ್ರೆ ಆ ಬೋಳ ನಾನು ಮಾಡಿದ್ದು ಸರಿ ಅನ್ನೋದನ್ನ ಪ್ರೂ ಮಾಡಿರ್ತಾನೆ!” ಎಂದು ನಕ್ಕು...,
“ನಿಮಗೆ ಬೇಕೋ ಬೇಡವೋ..., ನನ್ನ ಸಮಾಧಾನಕ್ಕಾದರೂ ಏನಾಯಿತು ಅಂತ ನೀವು ಪೂರ್ತಿ ಕೇಳಲೇ ಬೇಕು!” ಎಂದು ಜೇಬಿನಿಂದ ಮೊಬೈಲ್ ತೆಗೆದು..., ಗ್ಯಾಲರಿ ಓಪನ್ ಮಾಡಿ ನನಗೆ ತೋರಿಸಿದಳು.
“ಇದ್ಯಾರು ಹೇಳಿ ನೋಡೋಣ...!” ಎಂದಳು.
ನಾನು ಅವಳ ಮುಖವನ್ನೇ ನೋಡಿದೆ.
“ನೀವೊಬ್ರು!! ನನ್ನ ಬದುಕಿನಲ್ಲಿಯೇ ಇಷ್ಟು ಡೀಪ್ ಕ್ಯಾರಕ್ಟರ್‌ನ ನೋಡಿಲ್ಲ!” ಎಂದು ಹೇಳಿ..., ಫೋನ್ ಜೇಬಿಗೆ ಹಾಕುತ್ತಾ...,
“ಅವನೇ ಅದು...! ನನ್ನ ಅಮ್ಮನೊಂದಿಗಿರೋ ಫೋಟೊ!” ಎಂದಳು.
ಅವಳ ಉದ್ದೇಶ ಫಲಿಸಿತು! ನನ್ನೊಳಗೆ ಕುತೂಹಲ....! ಆ ಕುತೂಹಲ ನನ್ನ ಕಣ್ಣಿನಲ್ಲಿ ಪ್ರತಿಫಲಿಸಿ..., ಗೆಲುವಿನ ನಗು ನಕ್ಕು...,
“ಹಾಗೆ ಬನ್ನಿ ದಾರಿಗೆ!” ಎಂದು ಏನೋ ಹೇಳತೊಡಗುವಾಗ ಯಾವುದೋ ವಾಹನ ಬರುತ್ತಿರುವ ಶಬ್ದ ಕೇಳಿಸಿತು.
ಜೀಪು.
ಒಳಗೂ, ಹೊರಗೂ, ಮೇಲೂ..., ಜನ!
ಹಿಂದೆ ನೇತಾಡುತ್ತಾ ನಿಂತಿದ್ದ ಅವನು ಇಳಿದ..., ಜೀಪು ಹೊರಟಿತು!
ಅವಳು ಗಾಡಿಯ ಕೀಯನ್ನು ಅವನೆಡೆಗೆ ಎಸೆದು...,
“ಬದುಕಿಕೋ ಹೋಗು!” ಎಂದಳು.
ಅವನು ಏನೂ ಮಾತನಾಡದೆ ಗಾಡಿ ಸ್ಟಾರ್ಟ್ ಮಾಡಿ ಹೊರಟು ಹೋದ!
ನಾನು ಅವಳ ಮುಖವನ್ನು ನೋಡಿದೆ.
“ಖಂಡಿತಾ ನೀವು ನನ್ನನ್ನು ಕರ್ಕೊಂಡ್ ಹೋಗ್ತೀರ! ನಾವೀಗ ಫ್ರೆಂಡ್ಸು!” ಎಂದಳು.
ನನ್ನೊಳಗಿನ ಕಥೆಗಾರ ತಲೆಕೊಡವಿದ!
*
“ಒಂದೇ ರೂಂ ಸಾಕು! ನನಗೆ ನನ್ನಬಗ್ಗೆ ನಂಬಿಕೆಯಿದೆ!” ಎಂದು ಕಣ್ಣು ಮಿಟುಕಿಸಿ ನಕ್ಕು...,
“ಬೇರೆ ಬೇರೆ ರೂಂ ಮಾಡಿದ್ರೆ ನಿದ್ದೆ ಬರೋವರೆಗೆ ಮಾತನಾಡೋಕೆ ಆಗಲ್ಲ!” ಎಂದಳು.
ಅವಳನ್ನು ನೋಡಿ ನಕ್ಕು...,
“ನಿನಗೆಷ್ಟು ವಯಸ್ಸು? ಇಪ್ಪತ್ತನಾಲ್ಕು? ಇಪ್ಪತ್ತೈದು?” ಎಂದು ಕೇಳಿದೆ.
“ಇಪ್ಪತ್ತನಾಲ್ಕೂವರೆ!” ಎಂದಳು.
“ನಿಮ್ಮಮ್ಮನಿಗೆ ನಲವತ್ತಾರೂ ವರೆ?” ಎಂದು ನಕ್ಕೆ.
“ನಲವತ್ತೇಳು!” ಎಂದಳು.
“ಅಮ್ಮನಬಗ್ಗೆ ಬೇಜಾರಿಲ್ಲವಾ?” ಎಂದು ಕೇಳಿದೆ- ಲಾಡ್ಜ್‌ಮುಂದೆ ಗಾಡಿ ನಿಲ್ಲಿಸುತ್ತಾ.
“ಪಾಪ ಅಮ್ಮ. ಅರ್ಥವಾಗುತ್ತದೆ ಅವರ ಅವಸ್ಥೆ. ಇಲ್ಲಿ ವಿಷಯ ಅಮ್ಮ ಅಲ್ಲ- ಅವನು!” ಎಂದಳು.
ನಾನೇನೂ ಮಾತನಾಡಲಿಲ್ಲ.
“ಅಮ್ಮನೊಂದಿಗೆ ಅವನು ಡೇಟ್ ಮಾಡಿಕೊಳ್ಳಲಿ.., ಸಮಸ್ಯೆ ಇಲ್ಲ! ನನ್ನೊಂದಿಗೂ ಮಾಡಿಕೊಳ್ಳಲಿ- ಸಮಸ್ಯೆ ಇಲ್ಲ! ಆದರೆ ಆ ಅಮ್ಮನ ಮಗಳು ನಾನು ಎಂದು ಗೊತ್ತಿದ್ದೂ ಮಾಡಲು ಬಂದನಲ್ಲಾ...? ಅದು ರೊಚ್ಚಿಗೆಬ್ಬಿಸಿತು!” ಎಂದಳು.
ರೂಂ ಬುಕ್ ಮಾಡಿ..., ಫ್ರೆಶಪ್‌ ಆಗಿ..., ಇಬ್ಬರೂ ಟೆರಸಿನ ಮೇಲಿದ್ದ ಓಪನ್ ಏರ್ ರೆಸ್ಟೋರೆಂಟ್‌ಗೆ ಹೋದೆವು.
ಅವಳು ಒಂದು ಬಿಯರ್, ಚಿಕನ್ ಕಬಾಬ್ ಆರ್ಡರ್ ಮಾಡಿದಳು. ನಾನು ಒಂದು ಸವೆನಪ್, ಚಿಕನ್ ಫ್ರೈಡ್‌ರೈಸ್ ಆರ್ಡರ್ ಮಾಡಿದೆ.
“ಮೊಟ್ಟಮೊದಲಬಾರಿ..., ಕುಡಿಯದ, ಸೇದದ..., ಐವತ್ತು ವರ್ಷ ವಯಸ್ಸಿನ ಬ್ರಹ್ಮಚಾರಿಯನ್ನ ನೋಡ್ತಿರೋದು!” ಎಂದಳು.
“ಅವಿವಾಹಿತ ಅಷ್ಟೆ! ಬ್ರಹ್ಮಚಾರಿಯಲ್ಲ!” ಎಂದು ನಕ್ಕೆ.
ಅವಳು ಕಣ್ಣರಳಿಸಿ ನೋಡಿ..., 
“ಅಂದ್ರೆ?” ಎಂದಳು.
“ಅಷ್ಟೆಲ್ಲಾ ಸೈಕಲಾಜಿಕಲ್ ಅನಾಲಿಸಿಸ್ ಮಾಡುವವಳು..., ಈ ವಿಷಯ ಬಂದ್ರೆ ಮಾತ್ರ ಬ್ಲಾಂಕ್ ಆಗ್ತಾಳೆ!” ಎಂದು ನಕ್ಕು...,
“ಅಪ್ಪನಷ್ಟು ವಯಸ್ಸಿರುವ ವ್ಯಕ್ತಿಯಮುಂದೆ ಸಿಗರೇಟು ಸೇದಿ, ಕುಡಿದು, ಬೋಲ್ಡ್ ಆಗಿ ಮಾತನಾಡಿ- ಏನು ಪ್ರೂ ಮಾಡ್ಬೇಕು ಅನ್ಕೊಂಡಿದೀಯ ಪುಟ್ಟ?” ಎಂದು ಕೇಳಿದೆ.
ತಲೆ ತಗ್ಗಿಸಿದಳು.
“ನಾನು ಹೀಗೇನೆ-ಅಂತ?” ಎಂದು ಕೇಳಿ ನಾನೂ ಸೈಲೆಂಟ್ ಆದೆ.
ಎರಡನೆಯ ಬಿಯರ್ ಆರ್ಡರ್ ಮಾಡಿದಳು..., ಕಬಾಬ್ ಖಾಲಿ ಆಗ್ತಿತ್ತು..., ನಿಧಾನವಾಗಿ ನನ್ನ ಮುಖ ನೋಡಿ...,
“ನೀವು..., ನೀವು ನನ್ನ ಅಮ್ಮನ್ನ ಮದುವೆ ಆಗ್ತೀರ? ಪ್ಲೀಸ್!” ಎಂದಳು.
ಅವಳನ್ನು ಕನಿಕರದಿಂದ ನೋಡಿದೆ.
“ನೀನಿನ್ನೂ ನೋಡಬೇಕಾದ ಪ್ರಪಂಚ ತುಂಬಾ ಇದೆ ಪುಟ್ಟ! ನೀವು ಹೆಣ್ಣುಮಕ್ಕಳೆಲ್ಲಾ ಹೀಗೇ..., ನಿಮ್ಮದುಃಖ, ನಿಮ್ಮ ಸಂಕಟ, ನಿಮ್ಮಬದುಕು..., ಅದಕ್ಕೆ ಅನುಗುಣವಾಗಿ ಪ್ರಪಂಚವಿರಬೇಕು!” ಎಂದು ನಿಲ್ಲಿಸಿ...,
“ನಿನ್ನ ಅಮ್ಮನನ್ನು ಯಾರೂ ಮದುವೆಯಾಗದಿರುವುದು ಒಳ್ಳೆಯದು...! ಹಾಗೇ..., ನೀನೂ ಮದುವೆಯಾಗದಿರುವುದು ಒಳ್ಳೆಯದು!” ಎಂದೆ.
ತಟ್ಟನೆ ತೆಲಯೆತ್ತಿ ನೋಡಿದಳು.
“ಈ ಮಾತು..., ನಿನ್ನನ್ನು ಕೀಳಾಗಿ ಕಂಡಿದ್ದರಿಂದ ಹೇಳಿದೆ- ಅನ್ನಿಸಿದರೆ..., ನೀನು ಬದುಕುತ್ತಿರುವ ರೀತಿಯಬಗ್ಗೆ ಮತ್ತೊಮ್ಮೆ ಅವಲೋಕನ ಮಾಡುವುದು ಒಳ್ಳೆಯದು!” ಎಂದು ಹೇಳಿ ಎದ್ದೆ.
ರೂಮಿಗೆ ಬಂದು..., ಬೆಡ್‌ನ ಅಂಚಿನಲ್ಲಿ ಮಲಗಿ..., ಬೆಡ್‌ಷೀಟ್ ಹೊದ್ದುಕೊಳ್ಳುವ ಸಮಯಕ್ಕೆ ಸರಿಯಾಗಿ ಬಂದಳು.
ಯಾವುದೇ ಮುಜುಗರವೋ, ಹಿಂಜರಿಕೆಯೋ ಇಲ್ಲದೆ ನೇರವಾಗಿ ಬಂದು ನನ್ನ ಹೆಗಲಮೆಲೆ ತಲೆಯಿಟ್ಟು, ಕಾಲನ್ನು ನನ್ನ ಹೊಟ್ಟೆಯಮೇಲಕ್ಕೆ ಹಾಕಿ ಅಪ್ಪಿ ಹಿಡಿದು ಮಲಗಿಬಿಟ್ಟಳು- ಅಧಿಕಾರಯುತವಾಗಿ!
ನನ್ನರಿವಿಲ್ಲದೆ ಅವಳ ನೆತ್ತಿಯಮೇಲೊಂದು ಮುತ್ತುಕೊಟ್ಟು..., ಅವಳ ಕೂದಲನಡುವೆ ಬೆರಳಾಡಿಸುತ್ತಾ ಮಲಗಿದೆ.
*
ಕಣ್ಣು ಬಿಟ್ಟಾಗ ನನ್ನನ್ನೇ ನೋಡುತ್ತಾ ಕುಳಿತಿದ್ದಳು!
ಎದ್ದು, ರೆಡಿಯಾಗಿ, ತಲೆಕೂದಲೆಲ್ಲಾ ಒಪ್ಪವಾಗಿ ಬಾಚಿ, ಕಣ್ಕಪ್ಪೆಲ್ಲಾ ಹಾಕಿ, ಜೀನ್ಸ್‌ಪ್ಯಾಂಟ್ ಟೀಷರ್ಟ್ ಹಾಕಿದ್ದಳು...., ಟಿಷರ್ಟ್- ನನ್ನದು!!
“ನನಗೆ ಗೊತ್ತು ನಿಮ್ಮಂತವರನ್ನ!! ನನಗಿಂತ ಮುಂಚೆ ಎದ್ದು..., ನಾನು ಎಚ್ಚರವಾಗದಂತೆ ರೆಡಿಯಾಗಿ..., ಬಿಟ್ಟು ಹೋಗ್ಬಿಡ್ತೀರ!! ಅದ್ಕೇ..., ನಾನೇ ಮೊದಲು ಎದ್ಬಿಟ್ಟೆ!!” ಎಂದಳು.
ಹಣೆ ಬಡಿದುಕೊಂಡೆ. ಮೆಚ್ಚಿಕೆ ಆಗದೇ ಇರಲಿಲ್ಲ.
“ನಿಮ್ಮಪ್ಪ ಪುಣ್ಯಾತ್ಮನ ಬಗ್ಗೆ ಹೇಳಲೇ ಇಲ್ಲ ನೀನು!” ಎಂದೆ.
“ನನ್ನ ಮೂರನೇ ವಯಸ್ಸಿಗೇ ತೀರಿಕೊಂಡರಂತೆ! ಅಮ್ಮ ಹೇಳಿದ್ದು- ಅದನ್ನೇ ನಂಬಿದ್ದೇನೆ!” ಎಂದಳು.
ಎದ್ದು ಟವೆಲ್‌ನೊಂದಿಗೆ ಬಾತ್‌ರೂಮಿಗೆ ಹೋದೆ. ಹೊರಬರುವಷ್ಟರಲ್ಲಿ ರೂಂ..., ಚೆಕ್ ಇನ್ ಆಗುವಾಗ ಇರುವಂತೆ..., ನೀಟ್ ಆಗಿತ್ತು!
“ಹೋಗೋಣ!” ಎಂದಳು.
*
ಮೂರನೆಯ ದಿನ ಸಮುದ್ರ ಅಂದುಕೊಂಡಿದ್ದೆ! ಎರಡನೇಯ ದಿನವೇ ತಲುಪಿದ್ದೆ-ವು!
ಶಾಂತಸಮೃದ್ಧ ಸಮುದ್ರ.
ಅಂಚಿನಲ್ಲಿ ಇನ್ನೇನು ಮುಳುಗುತ್ತೇನೆ ಅನ್ನುವಂತೆ- ಸೂರ್ಯ. ಸೆಕೆಂಡುಗಳ ವ್ಯತ್ಯಾಸದಲ್ಲಿ ಮಾಯವೇ ಆಗಿಹೋದ!
“ನೀವೇಕೆ ಮದುವೆಯಾಗಲಿಲ್ಲ?” ಕೇಳಿದಳು.
“ಮದುವೆಯಾಗುವ ಒಂದೇ ಒಂದು ಸಂದರ್ಭವಿತ್ತು...! ಆಗಲಿಲ್ಲ!” ಎಂದು ಹೇಳಿ ಅವಳ ಮುಖ ನೋಡಿದೆ.
ಕುತೂಹಲದಿಂದ ನೋಡುತ್ತಿದ್ದಳು.
“ಬೇಕಾಬಿಟ್ಟಿ ಬದುಕು ನನ್ನದು! ಯಾವ ಬಂಧನಕ್ಕೂ ಒಳಪಡದೆ..., ನನ್ನ ಪಾಡಿಗೆ ನಾನು ಬದುಕಬೇಕು ಅಂದುಕೊಂಡವ. ಬದುಕಿದವ ಕೂಡ. ನನ್ನಿಂದ ಎಲ್ಲರಿಗೂ ಒಳಿತೇ ಆಗಿರುವುದು. ಎಷ್ಟೋ ಜನರಿಗೆ ನಾನೊಂದು ಪರಿಹಾರ- ಮಾನಸಿಕ ಸಮಸ್ಯೆಗಳಿಗೂ, ದೈಹಿಕ ಸಮಸ್ಯೆಗಳಿಗೂ (ಅನ್ನುವಾಗ ಅವಳು ಹಿಹ್ಹಿಹ್ಹಿ ಎಂದು ನಕ್ಕಳು!) ಹಾಗಿರುವಾಗ ಒಬ್ಬಳ ಪರಿಚಯವಾಯಿತು!” ಎಂದು ಹೇಳಿ ಅವಳ ಮುಖ ನೋಡಿದೆ.
“ಕಂಟಿನ್ಯು!” ಎಂದಳು.
“ಅವಳು ಸಿಕ್ಕಾಗ..., ನಾನೂ ಮದುವೆಯಾಗಿ ಸೆಟಲ್ ಆಗುತ್ತೇನೆ ಅಂದುಕೊಂಡೆ!” ಎಂದು ಒಂದು ನಿಟ್ಟುಸಿರುಬಿಟ್ಟು...,
“ಪ್ರೇಮ! ಅದೆಷ್ಟು ಅದ್ಭುತ! ಅವಳ ನಿಷ್ಕಳಂಕ ಪ್ರೇಮ, ಅವಳಮೇಲಿನ ನನ್ನ ಪರಿಪೂರ್ಣ ಪ್ರೇಮ..., ಅವಳೊಂದು ಆಶ್ಚರ್ಯವಾಗಿದ್ದಳು ನನಗೆ! ಬದುಕೆಂತ ವಿಚಿತ್ರ ಅಲಾ? ಅವಳನ್ನು ಕಂಡಾಗಲೆಲ್ಲಾ ಒಂದು ಅಪ್ಪುಗೆ, ಒಂದು ಮುತ್ತು...! ಪ್ರೇಮದ ಒಂದು ಭಾಗ ಅದು! ಪುಟಾಣಿ ಮಕ್ಕಳನ್ನು ಕಂಡಾಗ ಮುದ್ದಿಸಬೇಕು ಅನ್ನಿಸುವಂತೆ, ಅಮ್ಮನ ಎದೆಗೆ ಒರಗಬೇಕು ಅನ್ನಿಸುವಂತೆ, ಅಕ್ಕಂದಿರ ತೊಡೆಯಮೇಲೆ ತಲೆಯಿಟ್ಟು ಮಲಗಬೇಕು ಅನ್ನಿಸುವಂತೆ..., ಪ್ರೇಮಿಯನ್ನು ಕಂಡಾಗ ಒಂದು ಮುತ್ತು ಒಂದು ಅಪ್ಪುಗೆ...! ಆದರೆ ಅದೇ ಕಾರಣವಾಗಿ ಅವಳು ನನ್ನಿಂದ ದೂರ ಹೋದಳು! (ಅನ್ನುವಾಗಲೂ ಹಿಹ್ಹಿಹ್ಹಿ ಅಂದಳು!) ಯಾವ ಕಾರಣದಿಂದ ಪ್ರೇಮಿಗಳು ಬೇರ್ಪಡುವುದೇ ಇಲ್ಲವೋ..., ಅದೇ ಕಾರಣ ಹೇಳಿ ಅವಳು ದೂರ ಹೋದದ್ದು ನನ್ನ ಬದುಕಿನ ವಿಪರ್ಯಾಸ- ವಿರೋಧಾಭಾಸ! ಪರಿಚಯ ಆಗುತ್ತಾ ಆಗುತ್ತಾ..., ನನ್ನ ಹಳೆಯ ಕಥೆಗಳನ್ನೆಲ್ಲಾ ಕೇಳಿ, ತಮ್ಮ ತೀಟೆಗೆ ನನ್ನನ್ನು ಬಳಸಿಕೊಂಡ ಹೆಂಗಸರಂತೆ- ಅವಳೂ ಎಲ್ಲಿ ಒಬ್ಬಳಾಗುತ್ತಾಳೋ ಅನ್ನುವ ಹೆದರಿಕೆಯಂತೆ!” ಎಂದು ನಿಲ್ಲಿಸಿದೆ.
ಗಹಗಹಿಸಿ ನಕ್ಕಳು!
“ಎಕ್ಸ್ಟ್ರೀಂ ಕೇಸು ನೀವು! ಈ ಪ್ರಪಂಚದಲ್ಲಿ ವಿಶ್ವಾಸಕ್ಕೆ ಅರ್ಹನಾದವನು ಯಾರಾದರೂ ಇದ್ದರೆ ಅದು ನೀವು! ಆ ನಿಮ್ಮಬಗ್ಗೆಯೇ ಅಪನಂಬಿಕೆ! ಪಾಪ ನೀವು...!” ಎಂದಳು.
“ಪಾಪ ಅವಳೇ...! ಮುಗ್ಧೆ! ಎಷ್ಟು ಮುಗ್ಧೆಯೆಂದರೆ..., ನಾನು ಪಿಹೆಚ್‌ಡಿ ಮಾಡುತ್ತಿರವ ವಿಷಯವನ್ನು ಎಲ್‌ಕೆಜಿ ಓದುತ್ತಿರುವ ಅವಳಿಗೆ ಅರ್ಥಮಾಡಿಸಲು ಸಾಧ್ಯವಾ?!” ಎಂದೆ.
“ಅರ್ಥವಾಯಿತು ಬಿಡಿ..., ನಿಮ್ಮಿಂದ ಬರೀ ಒಳಿತೇ ಆಗಿರುವುದು ಅಂದಿರಲ್ಲಾ? ಯಾರಿಗೂ ನೋವೇ ಆಗಿಲ್ಲವ?!” ಎಂದು ಕೇಳಿದಳು.
“ಆಗಿದೆ...! ಒಬ್ಬಳಿಗೆ! ನನ್ನ ಲಕ್ಷ್ಮಿ!! ಅವಳಿಗೆ ಯಾರು ಹೇಳಿದ್ದು? ನನಗಿಂತ ಮುಂಚೆ ಹುಟ್ಟಿ ಬೇರೆ ಯಾರದೋ ಹೆಂಡತಿಯಾಗೋಕೆ?! ಆದರೇನು ಮಾಡುವುದು? ನಾನು ಅವಳಿಗೆ ದುಃಖವಲ್ಲ! ನಮ್ಮ ಪರಿಚಯ- ಗಾಢ ಪ್ರೇಮ- ಅವಳ ನೋವಿಗೆ ನೆಪವಾಯಿತು- ಅಷ್ಟೆ! ಅದಕ್ಕೆ ಯಾರನ್ನು ಹೊಣೆ ಮಾಡುವುದು?” ಎಂದೆ.
ಅವಳೇನೂ ಮಾತನಾಡಲಿಲ್ಲ.
ಅಂಗಾತನೆ ಮಲಗಿ..., ಕತ್ತಲಾಗುತ್ತಿರುವುದಕ್ಕೆ ಅನುಸಾರವಾಗಿ ಆಕಾಶದಲ್ಲಿ ಹುಟ್ಟಿಕೊಳ್ಳುತ್ತಿರುವ ನಕ್ಷತ್ರಗಳನ್ನೇ ನೊಡುತ್ತಿದ್ದೆ. 
ಕಂಡ ಕನಸಿನ ನೆನಪಾಯಿತು. ತಲೆ ತಿರುಗಿಸಿ ಅವಳನ್ನು ನೋಡಿದೆ. ಅವಳೂ ಆಕಾಶವನ್ನೇ ನೋಡುತ್ತಾ ಮಲಗಿದ್ದಾಳೆ.
ನನಗೆ ಗೊತ್ತು..., ನನ್ನ ಬದುಕಿಗೆ ಬಂದವರಿಗೆ ಒಳಿತೇ ಆಗಿರುವುದು. ಯಾರಿಗೆ ನೆಮ್ಮದಿ, ಸಮಾಧಾನಗಳು ಬೇಕಿರುತ್ತದೋ ನನ್ನ ಬದುಕಿಗೆ ಬರುತ್ತಾರೆ. ಅವರ ಅಗತ್ಯಗಳು ನೆರವೇರಿದ ನಂತರ ಆಟೋಮ್ಯಾಟಿಕ್ ಆಗಿ ದೂರ ಹೋಗುತ್ತಾರೆ. ಹೋಗಬೇಕು!
ನನ್ನಿಂದ ದೊರಕಿದ ನೆಮ್ಮದಿ, ಸಮಾಧಾನಗಳಿಗಿಂತ- ನಾನು ದೊರಕಲಿಲ್ಲ ಅನ್ನುವ ದುಃಖವೇ ಅಧಿಕವಾದರೆ..., ಅದಕ್ಕೆ ನಾನು ಹೊಣೆಗಾರನಲ್ಲ!!
ಆ ವಿಷಯದಲ್ಲಿ ಲಕ್ಷ್ಮಿ ಒಂದು ಅಪವಾದ. ಅವಳದ್ದು ನನ್ನೊಂದಿಗೆ ಆತ್ಮಬಂಧ!
ಯಾಕೆ?
ಉತ್ತರ ನಾಳೆ ದೊರಯಲಿತ್ತು!
“ನಾಳೆ ಯಾವ ಕಡೆಗೆ ಪ್ರಯಾಣ?” ಕೇಳಿದಳು.
“ನಿಮ್ಮ ಮನೆಗೆ!” ಎಂದೆ.
ಮೌನ.
*
ಅವಳ ಅಮ್ಮನಿಗೆ; ಯಾವುದೇ ಮುಜಗರವಿಲ್ಲದೆ ಆ ಹುಡುಗನಬಗ್ಗೆ ಹೇಳಿದಳು.
ತಗ್ಗಿಸಿದ ತಲೆ ಎತ್ತಲೇ ಇಲ್ಲ ಅಮ್ಮ.
“ತಾಯಿ..., ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿದ್ದ ನಿಮ್ಮ ಮಗಳನ್ನು ಮರಳಿಸಿದ್ದೇನೆ. ಇನ್ನೇನಿದ್ದರೂ ಅವಳ ಜವಾಬ್ದಾರಿ ನಿಮ್ಮದು. ಸಾಯದೇ ಉಳಿದ ಅವಳ ಬದುಕಿಗೆ ಅರ್ಥ ಬರಬೇಕೆಂದರೆ..., ನೀವು ಉಳಿಯಬೇಕು!” ಎಂದೆ.
ಅಮ್ಮ ಅವಳ ಮುಖವನ್ನೂ..., ಅವಳು ನನ್ನ ಮುಖವನ್ನೂ ಆಘಾತದಿಂದ ನೋಡಿದರು.
ಮುಗುಳುನಕ್ಕು...,
“ನಿನಗೆ ಎಲ್ಲರೂ ಅರ್ಥವಾಗುತ್ತಾರೆ.., ನೀನು ಯಾರಿಗೂ ಅರ್ಥವಾಗುವುದಿಲ್ಲ ಅಂದುಕೊಳ್ಳಬೇಡ ಪುಟ್ಟ! ಕೆಲವರಿಗೆ ನೀನೂ ಅರ್ಥವಾಗುತ್ತಿ..., ಹಾಗೇ..., ಕೆಲವೊಂದು ವ್ಯಕ್ತಿತ್ವಗಳು ನಿನ್ನ ಎಟುಕಿಗೆ ದಕ್ಕುವುದಿಲ್ಲ!” ಎಂದೆ.
ಓಡಿಬಂದು ದಪ್ಪನೆ ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತಳು- ಹುಡುಗಿ.
ತಡೆಯಲಿಲ್ಲ..., ತಲೆ ನೇವರಿಸುತ್ತಾ ನಿಂತುಬಿಟ್ಟೆ.
ಕೊನೆಗೆ..., ಉಳಿದುಬಿಡಲೇ ಇವರೊಂದಿಗೆ ಅನ್ನುವ ಭಾವ ಮನದಲ್ಲಿ ಸುಳಿದಾಗ...,
“ಇನ್ನು ನನಗೆ ನಿಮ್ಮ ಅಗತ್ಯವಿಲ್ಲ- ಅಮ್ಮ ಸಾಕು!” ಎಂದಳು.
ಅವಳಿಗೆ ಗೊತ್ತು ಅವಳ ಕರ್ತವ್ಯ...!
ಅವಳ ನೆತ್ತಿಯಮೇಲೊಂದು ಮುತ್ತುಕೊಟ್ಟು- ಹೊರಟೆ.
*
ಇಂದು ನನ್ನ ಐವತ್ತನೇ ಬರ್ತ್‌ಡೆ!
ಗಾಡಿ ನಿಲ್ಲಿಸಿ ಇಳಿದೆ.
ಜುಳುಜುಳುಜುಳು ಹರಿಯುತ್ತಿದೆ ನದಿ. ಪಕ್ಕದಲ್ಲಿದ್ದ ಹುಣಸೇ ಮರವೊಂದರ ಕೆಳಗೆ ಕುಳಿತೆ. ತಲೆಯೆತ್ತಿ ನೋಡುತ್ತೇನೆ..., ಅದೇ ದೃಶ್ಯ! ಎಲೆಗಳ ಮಧ್ಯದಿಂದ ಸೂರ್ಯ! ಸೂರ್ಯನಿಗೆ ಮಧ್ಯದಲ್ಲಿದೆ ಅನ್ನುವಂತೆ ಹದ್ದಿನ ನೆರಳು! ಸೂಕ್ಷ್ಮವಾಗಿ..., ಏಕಾಗ್ರತೆಯಿಂದ ನೋಡಿದೆ. ತಲೆ ತಿರುಗಿದಂತಾಯಿತು. ನೀರು ಕುಡಿಯೋಣವೆಂದು ಏಳಲು ಶ್ರಮಿಸಿದೆ.
ಎಚ್ಚರತಪ್ಪಿತು!
ಯಾರೋ ಕರೆದಂತಾಗಿ ಕಣ್ಣು ತೆರೆದೆ.
ಲಕ್ಷ್ಮಿ!
ಸುತ್ತಲೂ ನೋಡಿದೆ. ಅದೇ ಹುಣಸೇಮರ, ನದಿ, ಗಾಡಿ....!
ಹುಡುಗ- ಹುಡುಗಿ ಜೋಡಿಯೊಂದು ನಮ್ಮಬಳಿಗೆ ಬರುತ್ತಿದ್ದವರು..., ನಾವು ಕಾಣಿಸಲೇ ಇಲ್ಲವೇನೋ ಅನ್ನುವಂತೆ ನಮ್ಮನ್ನು ದಾಟಿ ಮುಂದಕ್ಕೆ ಹೋಗಿ..., ನಿರ್ಜನ ಪ್ರದೇಶ ಅನ್ನುವ ನಂಬಿಕೆಯಲ್ಲಿ..., ಪ್ರಕೃತಿ ನಿಯಮವಾದ..., ಗಂಡು ಹೆಣ್ಣಿನ ಸಹಜ ಧರ್ಮಕ್ಕೆ ತೊಡಗಿಕೊಂಡರು!!
ನಾನು ಆಶ್ಚರ್ಯದಿಂದ ಲಕ್ಷ್ಮಿಯ ಮುಖ ನೋಡಿದೆ.
“ಅವರಿಗೆ ನಾವು ಕಾಣಿಸುವುದಿಲ್ಲ!” ಎಂದಳು.
ತಲೆ ಭಾರ ಅನ್ನಿಸಿ ಅವಳ ಎದೆಗೊರಗಿದೆ.
ಸುಷುಪ್ತಿ!
ಎಚ್ಚರವಾದಾಗ ಅರಿವಾಯಿತು..., ಮನುಷ್ಯ ಜನ್ಮವನ್ನು ಮುಗಿಸಿ ನಾನು ಮತ್ತೆ ಗಣವಾಗಿದ್ದೇನೆ- ಎಂದು!
ಇಲ್ಲಿ..., ಲಕ್ಷ್ಮಿಯೇ ನನ್ನ ಆತ್ಮಾರ್ಧ!

Comments

  1. ಗಣ ಅಂದರೇನು ಸಾ..

    ReplyDelete
  2. ಕಥಾನಾಯಕ ಹೆಣ್ಣುಗಳ ಹಳೇ ಕಥೆಗಳು ಹೇಳಿದಾಗ.. ಅದು ಕಥಾನಾಯಕನಾ ನಡವಳಿಕೆಯಲ್ಲಿ ಇದೆಯಾ ಅಂತ ನೋಡಬೇಕು.ಸಂಶಯ ಪಡಬಾರ್ದು... ಸಂಶಯ ಪಟ್ಟಿದ್ದಕ್ಕೆ ಇಬರ್ದು ವಿಷಾದದಲ್ಲಿ ಮುಗಿತು ಸಮಾಜಕ್ಕೆ ಒಳಿತನ್ನೇ ಬಯಸುವ ವ್ಯಕ್ತಿತ್ವ ಎಂದಾದರೂ ಕೆಡಕು ಮಾಡುತ್ತ ಅಂತ ಯೋಚಿಸಿರಬೇಕು ಲಕ್ಷ್ಮಿ.. ತನ್ನ ಬಲಿ ಚಂದವೇ ಇದ್ದಾನೆ ತಾನೇ ಅದೆಷ್ಟು ಕಥೆಗಳು ಆದರೂ ಹೇಳಲಳಿ ಮದುವೆ ಆಗತೀನಿ ಅಂತ ಹೇಳಿದ್ದರು ಅಲ್ವಾ ಕಥಾನಾಯಕ.. ಮತ್ತೇನು... ಬೆರ್ಯವರನ್ನು ಮದುವೆ ಮಾಡಿಕೊಂಡಾಗ ವಾಸ್ತವ ಅರಿವಾಗಿ ತಾನು ಸತ್ತು ಪಾಪ ಕಥಾನಾಯಕನನ್ನು ಕರೆದುಕೊಂಡು ಗಣಗಳು ಆಗೋದು ಸದ್ಯ ಪ್ರೇತಗಳು ಆಗಲಿಲ್ಲ ಅದರಲ್ಲೂ ಸತ್ತ ಮೇಲು ಅದರಲ್ಲೂ ವಿಶೇಷತೆಯನ್ನು ಹಿಡಿದುತ್ತಿಕೊಂಡ ಕಥೆ.. ಏನಿದ್ದರೂ ಮನುಷ್ಯರಾಗಿ ಇರುವಾಗ ಪಡೆಯದ ಸುಖವೇ ಸುಖ ಅದು ವಾಸ್ತವ ಅಲ್ಲಿ ಇರುವಾಗ ಅನುಭವಿಸಬೇಕು ಕನಸಲ್ಲಿ ಕಥೆಯಲ್ಲಿ ಕವಿತೆಯಲ್ಲಿ ಎಷ್ಟು ಆನಂದಿಸಿದರೇನು ಫಲ..

    ReplyDelete
  3. ಮೇಲೆ ಕಾಮೆಂಟ್ಲ್ಲಿ ಮನುಷ್ಯರಾಗಿ ಇರುವಾಗ ಪಡೆದ ಸುಖವೇ ಸುಖ ಹಾಗೆ ಇರಬೇಕು ಸಾ... ಪಡೆಯದ ಅಲ್ಲ ಸಾ...ಮಿಸ್ಟೇಕ್ ಆಗಿ ಯಾ ಸೇರಿಕೊಂಡು ಬಿಟ್ಟಿದೆ ಸಾ...

    ReplyDelete

Post a Comment

Popular posts from this blog

ಇನ್ನೂರು!

ದೇವಿ

ಶಾಂತಿಪ್ರಿಯರು!