ರಾಂ!

 ಅವಳಿಗೆ ತಿಳಿಯದು ಇದು ನಮ್ಮ ಕೊನೆಯ ಭೇಟಿಯೆಂದು!

ಅಂಗಾತನೆ ಮಲಗಿರುವ ನನ್ನ ಮುಖದ ತುಂಬಾ ಅವಳ ನೀಳವಾದ ಕೂದಲನ್ನು ಹರಡಿ, ಎದೆಯಮೇಲೆ ಬಲಗೆನ್ನೆ ಬರುವಂತೆ- ನಿಶ್ಚಿಂತೆಯಿಂದ ಮಲಗಿದ್ದಾಳೆ.

ಅವಳ ಕೂದಲ ನಡುವಿನಿಂದ ಕಾಣಿಸುತ್ತಿರುವ ಆಕಾಶ, ನಕ್ಷತ್ರ, ಹುಣ್ಣಿಮೆ ಚಂದ್ರ...,

ಉರುಳುರುಳಿ ಬಂದು ತೋಯಿಸಿ ಮರಳುತ್ತಿರುವ ಅಲೆಗಳು....,

ಶಾಂತಸಮುದ್ರದ ಗಂಭೀರ ನಿನಾದ!

ನನ್ನ ಬಲಗೈ ಬೆರಳುಗಳು..., ಬೋರಲು ಮಲಗಿರುವ ಅವಳ ಕುತ್ತಿಗೆಯ ಸ್ವಲ್ಪ ಮೇಲೆ..., ಕೂದಲುಗಳ ನಡುವೆ..., ತಂತಿಯನ್ನು ಮೀಟುವಂತೆ ಚಲಿಸುತ್ತಿದೆ.

ಎಡಗೈ ಅವಳ ಬಲ ಕಂಕುಳಿನ ಕೆಳಗಿನಿಂದ ಚಲಿಸಿ ಬೆನ್ನಿನಮೇಲೆ ತಾಳ ಹಾಕುತ್ತಿದೆ.

ಅವಳ ಎರಡೂ ಕೈಗಳು ನನ್ನ ತಲೆಯ ಆಸುಪಾಸಿನಲ್ಲಿ; ಮರಳಿನಮೇಲೆ ಚಿತ್ತಾರ ಬಿಡಿಸುತ್ತಿದೆ.

“ಹೇಳು..., ಯಾಕೆ ಅವಾಯ್ಡ್‌ ಮಾಡುತ್ತಿದ್ದಿ?” ಎಂದಳು.

ನಿಶ್ಚಿಂತೆಯಿಂದ ಮಲಗಿರುವವಳು ಕೇಳಬೇಕಾದ ಪ್ರಶ್ನೆಯಲ್ಲ!

ಅವಾಯ್ಡ್ ಮಾಡುತ್ತಿರುವುದಲ್ಲ ಎಂದು ಹೇಗೆ ಅರ್ಥ ಮಾಡಿಸಲಿ?

ಇಲ್ಲ..., ಇವಳಿಗೆ ಅರ್ಥವಾಗುತ್ತದೆ!

ಯಾವುದೇ ಆರೋಪಗಳಿಲ್ಲದೆ ಇಷ್ಟು ವರ್ಷದಿಂದ ಉಳಿದುಕೊಂಡಿದ್ದಾಳೆಂದರೆ..., ಇದುವರೆಗೆ ಅರ್ಥವಾಗಿದ್ದೇನೆಂದರೆ..., ಇದೂ ಅರ್ಥವಾಗುತ್ತದೆ!

ಅಥವಾ...,

ಆಲ್ರೆಡಿ ಅರ್ಥವಾಗಿದ್ದು ಕನ್ಫರ್ಮ್ ಮಾಡಿಕೊಳ್ಳುತ್ತಿದ್ದಾಳೆ!

“ಮುಂಚೆಯಿಂದಲೂ ನನಗೊಂದು ಗೊಂದಲವಿದೆಯೇ!” ಎಂದೆ.

“ಏನು ಗೊಂದಲ?”

“ಹೆಣ್ಣಿನ ವಿಷಯದಲ್ಲಿ, ಸುಖದ ವಿಷಯದಲ್ಲಿ!” ಎಂದೆ.

ತಲೆಯೆತ್ತಿ ನನ್ನ ಮುಖವನ್ನು ನೋಡಿದಳು. ಕೂದಲು ಮುಖದಿಂದ ಆಚೆ ಈಚೆ ಚಲಿಸಿತು. ಮತ್ತೆ ಮುಖದ ಮೇಲಕ್ಕೆ ಹರಡಿ ಮುಂಚಿನಂತೆ ಮಲಗಿದಳು.

“ಅರ್ಥವೇ ಆಗುವುದಿಲ್ಲ ನೀನು! ಹೇಳು ಅದೇನು ಹೊಸ ವಿಷಯ?” ಎಂದಳು.

“ಮುಂಚೆಯಿಂಂದ ಇರುವ ಗೊಂದಲ ಅಂದೆ- ಹೊಸ ವಿಷಯ ಹೇಗಾಗುತ್ತದೆ?”

“ನನಗೆ ಹೊಸದು- ಸನ್ಯಾಸಿ!” ಎಂದಳು.

“ಕಾಮದಿಂದ ಏನು ಸುಖವೋ ನನಗೆ ಗೊತ್ತಾಗುತ್ತಿಲ್ಲವೇ...! ಅಥವಾ ಹೆಣ್ಣಿನೊಂದಿಗಿನ ಕಾಮವನ್ನು ಅನುಭಾವಿಸಲಾಗುತ್ತಿಲ್ಲ!” ಎಂದೆ.

ಅವಳೇನೂ ಮಾತನಾಡಲಿಲ್ಲ.

ಕಾಮವೇ ಸುಖ ಎಂದಿರುವಾಗ ನನ್ನ ವಾದ ಅವಳಿಗೆಷ್ಟು ಅರ್ಥವಾಗುತ್ತದೋ ಅನ್ನಿಸಿ...,

“ಅಲ್ಲವೇ.., ನನ್ನ ಗೊಂದಲ ಇಷ್ಟೇ..., ನಿನ್ನ ಮೊಲೆಯನ್ನು ನಾನು ಅದುಮುತ್ತೇನೆ- ಅದರಿಂದ ನನಗೇನು ಸುಖ? ಅದು ಸುಖವೇ? ನನಗೆ ಅರ್ಥವಾಗುವುದಿಲ್ಲ. ಇಂಚು ಬಿಡದೆ ನಿನ್ನ ಮೈಮೇಲೆಲ್ಲಾ ಮುತ್ತಿಕ್ಕುತ್ತೇನೆ- ಅದರಿಂದ ನನಗೇನು ಸುಖ? ಅದು ಸುಖವೇ? ನನಗೆ ಅರ್ಥವಾಗುವುದಿಲ್ಲ- ಅದನ್ನು ಅನುಭಾವಿಸಲಾಗುತ್ತಿಲ್ಲ!! ಮತ್ತೆ ಯಾಕೆ ಹಾಗೆ ಮಾಡುತ್ತೇನೆ? ನಿನಗಾಗಿ..., ನೀನನುಭವಿಸುವ ಸುಖಕ್ಕಾಗಿ..., ನಿನ್ನ ನರಳುವಿಕೆಗಾಗಿ ಹೊರತು- 'ಸ್ಖಲಿಸುವ ನನ್ನ ಸುಖಕ್ಕೆ ನನಗೆ ಹೆಣ್ಣಿನ ಅಗತ್ಯವಿಲ್ಲ!’” ಎಂದೆ.

ನನ್ನ ಎದೆಯಮೇಲೆಯೇ ಹಣೆ ಬಡಿದುಕೊಂಡಳು! ನಂತರ...,

“ಅದು ಗೊತ್ತು! ನಾನಾಗಿ ಕೇಳದೆ, ಸಂದರ್ಭ ಕ್ರಿಯೇಟ್ ಮಾಡದೆ ನೀನು ಸಿಕ್ಕವನಲ್ಲ! ಇತ್ತೀಚೆಗಂತೂ ವರ್ಷ ಕಳೆದರೂ ನಿನಗಾ ಯೋಚನೆಯೇ ಇಲ್ಲ!” ಎಂದಳು.

“ಒಂದು ಕಾಲವಿತ್ತು, ಕುತೂಹಲದ ಕಾಲ! ಹೆಣ್ಣಿಗಾಗಿ ತಪಿಸುತ್ತಿದ್ದ ಕಾಲ. ಆಗ ಹೆಣ್ಣು, ಹೆಣ್ಣಿನ ಸಾನ್ನಿಧ್ಯ ನನಗೆ ಸಿಗಲಿಲ್ಲ! ಹೆಣ್ಣು ಸಿಕ್ಕಾಗ ಹೆಣ್ಣಿನಿಂದ ಸಿಗಬೇಕಾದ ಸುಖವೂ ಸಿಗಲಿಲ್ಲ- ಮಾನಸಿಕವಾಗಿಯೂ ದೈಹಿಕವಾಗಿಯೂ! ಈಗ ಹೆಣ್ಣಿನ ಅಗತ್ಯ ನನಗಿಲ್ಲ- ನೀನು ಅಂಟಿಕೊಂಡಿದ್ದಿ!” ಎಂದೆ.

“ನಾನೊಂದು ಹೊರೆಯಾದೆನಾ?” ಕೇಳಿದಳು.

“ಗೊತ್ತಿಲ್ಲವೇ..., ದಿನಗಳು ಕಳೆಯುತ್ತಿರುವುದಕ್ಕೆ ಅನುಸಾರವಾಗಿ ಹೆಣ್ಣಿನಿಂದ ನಾನು ದೂರಕ್ಕೆ- ಬಹುದೂರಕ್ಕೆ ಹೋಗುತ್ತಿರುವ ಫೀಲ್!” ಎಂದೆ.

“ಯಾವಾಗಲೋ ಗೊತ್ತಾಗಿತ್ತು! ಆದರೂ ನನಗೆ ಬೇಕು ನೀನು- ನನಗೊಬ್ಬಳಿಗಾದರೂ ಉಳಿ...!” ಎಂದಳು.

“ಹೊರ ಬರಬೇಕಾಗಿರುವುದೇ ನಿನ್ನೊಬ್ಬಳಿಂದ!” ಎಂದೆ.

ಅಲೆಗಳು ಬಂದು ಬಡಿಯುತ್ತಲೇ ಇದ್ದವು.

ಆಕಾಶ, ನಕ್ಷತ್ರ, ಚಂದ್ರ ಹಾಗೇ ಇದ್ದವು.

ಅವಳ ಹೃದಯಬಡಿತದ ವೇಗ ಮಾತ್ರ ಏರಿತು!

ಮಾತನಾಡಲು ಏನೂ ಇಲ್ಲ.

ನಾನಾಗಿ ಅವಳನ್ನು ಪಕ್ಕಕ್ಕೆ ಸರಿಸಲಾರೆ. ಅವಳೂ ಸರಿಯಲೊಲ್ಲಳು!

ಆ ಮೂಡ್‌ನಿಂದ ಹೊರಬರಲೇನೋ ಅನ್ನುವಂತೆ...,

“ಹೇಳು ರಾಮ್‌ನ ಬಗ್ಗೆ! ಅವನು ಮದುವೆಯಾಗದಿರುವುದು ಒಳ್ಳೆಯದು ಅಂದೆಯಲ್ಲಾ?! ಯಾಕೆ? ಅವನಬಗ್ಗೆ ಕಥೆ ಬರೆಯಬೇಕು ಅಂದಿದ್ದೆ? ಏನಿದೆ ಅಂತಾ ವಿಶೇಷ ಅವನಲ್ಲಿ?” ಎಂದಳು.

“ಅದನ್ನು ವಿಶೇಷ ಅನ್ನಬಹುದೇನೆ? ಅವನಿಗೆ ಸೈಕಿಯಾಟ್ರಿಸ್ಟ್‌ನ ಅಗತ್ಯವಿದೆ! ಅವನಲ್ಲಿರುವುದು ಗಂಡಸಿನ ಸಹಜ ಸ್ವಭಾವವೇ...! ಆದರೆ ಅದನ್ನು ಅವನು ಒಪ್ಪಬೇಕು! ಒಪ್ಪದೆ..., ಅದಕ್ಕೆ ವಿರುದ್ಧವಾಗಿ ನಂಬಿಸಲು ಹೋದರೆ ಏನು ಮಾಡುವುದು? ತನ್ನನ್ನು ತಾನು ಹೀಗೆ ಎಂದು ಒಪ್ಪಿಕೊಳ್ಳದವನನ್ನು ನಾವು ಹೇಗೆ ನಂಬುವುದು? ಅವನಲ್ಲಿನ ಲಕ್ಷಣಗಳನ್ನು ನೋಡಿದರೆ..., ಎಕ್ಷ್ಟ್ರೀಂ ಲೆವಲ್‌ನಲ್ಲಿದ್ದಾನೆ! ಕಥೆಯಲ್ಲ... ಕಾದಂಬರಿ ಬರೆಯಬಹುದು!” ಎಂದೆ.

“ಸಂಕ್ಷಿಪ್ತವಾಗಿ ಹೇಳು.., ಕೇಳ್ತೀನಿ! ಏನಿದ್ದರೂ ನನ್ನ ಅಣ್ಣ...! ಅರ್ಥವಾಗುತ್ತಾನೆ!” ಎಂದಳು.

“ಸ್ವಲ್ಪ ದಿನದಿಂದ ಅವನು ನಡೆದುಕೊಳ್ಳುತ್ತಿರುವ ರೀತಿಗೆ..., ಅವನ ಬಗೆಗಿನ ನನ್ನ ದೃಷ್ಟಿಕೋನವೇ ಬದಲಾಗಿಹೋಯಿತು! ಮುಂಚಿನ ಅವನ ಬುದುಕಿಗೆ ಹೊಸಹೊಸ ಅರ್ಥಗಳು ಹೊಳೆಯಲಾರಂಭಿಸಿದವು!” ಎಂದೆ.

“ಯಾವುದು? ಮೊನ್ನೆಮೊನ್ನೆ ಯಾರೋ ಹೆಣ್ಣಿನೊಂದಿಗೆ ನಡೆದುಕೊಂಡ ರೀತಿಯೇ?” ಎಂದಳು.

“ಹೆಣ್ಣಿನೊಂದಿಗೆ ನಡೆದುಕೊಂಡದ್ದು ಬೇರೆ...! ನಂತರ ನನ್ನ ಬಗ್ಗೆ ನಡೆದುಕೊಳ್ಳುತ್ತಿರುವ ರೀತಿ...!” ಎಂದು ಮೌನವಾದೆ.

“ಅದೇನು ಹೇಳು, ಕೇಳುತ್ತೇನೆ! ಹಾಗಾದ್ರೂ ಸ್ವಲ್ಪ ಮಾತನಾಡು- ಮೌನ ಸನ್ಯಾಸಿ!” ಎಂದಳು.

*

ರಾಮ್‌ಗಾಗಿ ಕಾಯುತ್ತಾ ನಿಂತಿದ್ದೆ. ಇಪ್ಪತ್ತೈದು ವರ್ಷದ ಒಡನಾಟ- ಗೆಳೆತನ.

ನನ್ನನ್ನು ಕಾಯಿಸುವುದು ಅವನ ಆಜನ್ಮಸಿದ್ಧ ಹಕ್ಕು.

ಹೇಳಿದ್ದು ಹನ್ನೊಂದುಗಂಟೆ..., ಈಗ ಹನ್ನೆರಡಾಯಿತು..., ಇನ್ನೂ ಬಂದಿಲ್ಲ.

ಕಾಲ್ ಮಾಡಿದರೆ ಪಿಕ್ ಮಾಡುತ್ತಿಲ್ಲ. ಐದುನಿಮಿಷ- ಎಂದು ಮೆಸೇಜ್ ಮಾಡಿ ಮುಕ್ಕಾಲು ಗಂಟೆಯಾಗಿದೆ.

ಇವತ್ತು ನೋಡಿಯೇ ಬಿಡೋಣ ಅವನ ಬ್ಯುಸಿ-ನೆಸ್ ಏನೆಂದು; ಅನ್ನುವ ಯೋಚನೆಯಲ್ಲಿ ನನ್ನನ್ನು ಒಳಗೊಳ್ಳದ ಅವನ ಮತ್ತೊಂದು ಅಡ್ಡಕ್ಕೆ ಹೋದೆ.

ಸಿಗರೇಟು ಸೇದುತ್ತಾ..., ಉಳಿದವರೊಂದಿಗೆ ತಮಾಷೆಮಾಡುತ್ತಾ ಕುಳಿತಿದ್ದ.

ಅವನ ಕಣ್ಣಿಗೆ ಕಾಣಿಸದಂತೆ ನಿಂತು ಕಾದೆ.

ಮತ್ತೆ ಕಾಲ್ ಮಾಡಿದೆ. ಫೋನ್ ನೋಡಿ ಸೈಲೆಂಟ್ ಮಾಡಿ ಜೇಬಿಗೆ ಹಾಕಿಕೊಂಡ.

ಸಿಗರೇಟು ಮುಗಿಸಿ...,

“ಫ್ರೆಂಡ್ ಕಾಯ್ತಾ ಇರ್ತಾನೆ..., ಟಿ-ಗು ದುಡ್ಡಿಲ್ಲದೆ ನಿಂತಿರ್ತಾನೆ. ಹೋಗಿ ಒಂದು ಟಿ ಕೊಡ್ಸಿ ಬರ್ತೀನಿ! ನಾನು ಹೋಗದಿದ್ದರೆ ಅವನ ಗಂಟಲಲ್ಲಿ ಟಿ ಇಳಿಯುವುದಿಲ್ಲ!” ಎಂದು ಹೇಳಿ ಹೊರಟ.

ದಾರಿಯಲ್ಲಿ ಹೆಂಗಸೊಬ್ಬಳು ಕಾಣಿಸಿದಳು! ನೈಟಿ ಹಾಕಿದ್ದಾಳೆ. ಸ್ನಾನ ಮಾಡಿ ಎರಡುಮೂರು ದಿನವಾಗಿರಬಹುದಾಗಲಿ- ಕೊಳಕಿ ಅನ್ನಲಾಗುವುದಿಲ್ಲ! ಲಕ್ಷಣವಾಗಿದ್ದಾಳೆ- ಅನ್ನಬಹುದು!

ಗಾಡಿ ನಿಲ್ಲಿಸಿದ.

ನಾನು ಅವನ ಗಮನಕ್ಕೆ ಬರದಂತೆ ನನ್ನ ಗಾಡಿಯನ್ನು ರಸ್ತೆಬದಿಯಲ್ಲಿದ್ದ ಮರದ ಮರೆಯಲ್ಲಿ ನಿಲ್ಲಿಸಿ..., ಕಾದೆ.

“ಬರ್ತಿಯ?” ಎಂದ ಅವಳಿಗೆ.

“ಕಾಸು ಕೊಟ್ರೆ ಬರ್ತಿನಿ!” ಎಂದಳು.

“ಯಾವ ಊರು?” ಎಂದ.

ಅವಳೇನೂ ಮಾತನಾಡಲಿಲ್ಲ.

“ನಿಮ್ಮಂತೋರ್ನ ತುಂಬಾ ನೋಡಿದ್ದೀನಿ- ಎಲ್ಲಾ ಗೊತ್ತು- ಬಾ ಸುಮ್ನೆ!” ಎಂದ.

ಅವಳು ಮುಂದಕ್ಕೆ ನಡೆದಳು. ಅಷ್ಟರಲ್ಲಿ ಇಪ್ಪತ್ತೈದು ವರ್ಷದ ಹುಡುಗನೊಬ್ಬ ಅವಳ ಬಳಿಗೆ ಹೋಗಿ ದುಡ್ಡು ಕೊಟ್ಟು...,

“ಅಲ್ಲಿ ಇಲ್ಲಿ ತಿರುಗದೆ ಊರು ಸೇರು ತಾಯಿ!” ಎಂದು ಹೇಳಿ ಹೊರಟು ಹೋದ.

ನಾನು ಅವರನ್ನು ಗಮನಿಸುವ ವ್ಯವಧಾನದಲ್ಲಿ..., ಇಣುಕಿ ಇಣುಕಿ ಇಣುಕಿ ಮರದ ಮರೆಯಿಂದ ರಸ್ತೆಗೆ ಗಾಡಿಯನ್ನು ತಳ್ಳುತ್ತಾ ಬಂದು ಬಿಟ್ಟಿದ್ದೆ.

ಯಾರಾದರೂ ನೋಡಿದರಾ ಎಂದು ತಿರುಗಿದ ಗೆಳೆಯನಿಗೆ ಕಾಣಿಸಿದ್ದು ನಾನು!!

ಏನೂ ಗೊತ್ತಿಲ್ಲದವನಂತೆ ಅವನ ಬಳಿಗೆ ಹೋದೆ.

ಸೂಕ್ಷ್ಮವಾಗಿ ನೋಡಿದ.

“ಇಷ್ಟೊತ್ತಾದ್ರೂ ಕಾಣಿಸಲಿಲ್ಲವಲ್ಲ? ಅದ್ಕೇ ನಿನ್ನ ಅಡ್ಡಕ್ಕೆ ಹೋಗಿದ್ದೆ. ನೀನು ಹೊರಟೆ ಅಂದ್ರು...” ಎಂದೆ.

ಅವನೇನೂ ಮಾತನಾಡಲಿಲ್ಲ. ಭಾರಿ ಗೊಂದಲದಲ್ಲಿದ್ದ.

“ಏನಾಯ್ತು ರಾಂ? ಯಾಕೆ ಹೀಗೆ ಕರೆಂಟ್ ಹೊಡೆದವನ ಹಾಗೆ ನಿಂತಿದೀಯ? ಬಾ ಹೋಗೋಣ!” ಎಂದೆ.

ಇಬ್ಬರೂ 'ನಮ್ಮ' ಅಡ್ಡ ತಲುಪಿದೆವು.

“ಯಾವೋಳೋ ಸೂಳೆ..., ಭಿಕ್ಷೆ ಕೇಳೋಕೆ ಬಂದ್ಳು...! ಸಾವಿರ ರೂಪಾಯಿ ಕೊಡೋಣ ಅನ್ಕೊಂಡೆ. ಅಷ್ಟರಲ್ಲಿ ಯಾವೋನೋ ಲಫಂಗ ಬಂದು ಅವಳನ್ನ ಕರ್ಕೊಂಡ್ ಹೋದ!” ಎಂದ.

“ಹೌದಾ...? ಯಾವುದೋ ಹುಡುಗ ದುಡ್ಡು ಕೊಟ್ಟು ಕಳಿಸಿದ ಹಾಗೆ ಇತ್ತು?” ಎಂದೆ.

ಅಸಹನೆಯಿಂದ ನನ್ನನ್ನು ನೋಡಿ...,

“ಬೋಳೀಮಗ ನನ್ನ ಕೆಟ್ಟವನಾಗಿ ಮಾಡಿಬಿಟ್ಟ!” ಎಂದ.

ಅರ್ಥವಾಗದೆ ನೋಡಿದೆ.

“ದುಡ್‌ಗಾಗಿ ಜೇಬಿಗೆ ಕೈ ಹಾಕುವಷ್ಟರಲ್ಲಿ ಅವ ಅವಳನ್ನು ಕಳಿಸಿಬಿಟ್ಟ!” ಎಂದ.

“ಇದರಲ್ಲಿ ನಿನ್ನ ಕೆಟ್ಟವನಾಗಿ ಮಾಡೋದು ಏನಿದೆ? ಅವಳಿಗೆ ಸಾವಿರ ರೂಪಾಯಿಯ ಯೋಗವಿಲ್ಲ ಅಷ್ಟೆ!” ಎಂದೆ.

“ಸರಿ..., ಸ್ವಲ್ಪ ಕೆಲಸ ಇದೆ ಹೊರಡ್ತೀನಿ!” ಎಂದು ಹೇಳಿ ನನ್ನ ಪ್ರತಿಕ್ರಿಯೇಗೂ ಕಾಯದೆ ಹೊರಟು ಹೋದ!

ನಂತರ ಎರಡು ಮೂರು ದಿನ ಅವ ನನಗೆ ಸಿಗಲಿಲ್ಲ. ಕಾಲ್ ಮಾಡಿದರೆ ಪಿಕ್ ಮಾಡಲಿಲ್ಲ, ಮೆಸೇಜ್ ಇಲ್ಲ, ಕೊನೆಗೆ ಅವನ ಅಡ್ಡಕ್ಕೆ ಹೋದರೆ- ನನ್ನನ್ನು ಕಂಡ ತಕ್ಷಣ ಎದ್ದು ಹೋದ!

ನಾನೂ ತಲೆ ಕೆಡಿಸಿಕೊಳ್ಳುವುದು ಬಿಟ್ಟೆ.

ಒಂದು ವಾರವಾಗಿರಬೇಕು..., ನಮ್ಮಿಬ್ಬರ ಕಾಮನ್ ಗೆಳೆಯ ದೀಪಕ್ ಭೇಟಿಯಾದ.

“ಇದ್ಯಾಕೋ..., ರಾಮ್‌ನ ತುಂಬಾ ಅವಾಯ್ಡ್ ಮಾಡ್ತಿದೀಯಂತೆ?” ಎಂದ.

“ನಾನು ಅವಾಯ್ಡ್ ಮಾಡ್ತಿದೀನ?!” ಎಂದೆ.

“ಹೂ..., ಅದ್ಯಾವೋಳೋ ಭಿಕ್ಷುಕಿನ ಲಾಡ್ಜ್‌ಗೆ ಕರೆದೆಯಂತೆ? ಅದನ್ನ ಅವನು ನೋಡಿದ್ಕೆ ಅವನನ್ನ ಅವಾಯ್ಡ್ ಮಾಡ್ತಿದೀಯಂತೆ?” ಎಂದ.

ನಾನೇನೂ ಮಾತನಾಡಲಿಲ್ಲ. ಮೂಕನಾದೆ!

“ಕಾಲ್ ಮಾಡಿದ್ರೆ ಪಿಕ್ ಮಾಡ್ತಿಲ್ವಂತೆ, ಮೆಸೇಜ್‌ಗೆ ರಿಪ್ಲೆ ಇಲ್ವಂತೆ, ಅಡ್ಡಕ್ಕೆ ಬರ್ತಿಲ್ವಂತೆ, ನಿನ್ನ ಹುಡುಕ್ತಾ ಬರ್ವಾಗ ಅವನನ್ನ ನೋಡಿದ್ರೂ ನೋಡದ ಹಾಗೆ ಹೋದೆಯಂತೆ?” ಎಂದ.

“ನಾಳೆ ಮಾತನಾಡೋಣ ದೀಪು..., ಇವತ್ತು ತುಂಬಾ ಡಿಸ್ಟರ್ಬ್ ಆಗಿದೀನಿ! ಕೆಲವು ವಿಷಯಗಳು ಚರ್ಚೆ ಮಾಡಬೇಕು ನಾವು!” ಎಂದೆ.

*

ಯಾಕೋ ದೀಪುವನ್ನು ಇದರಲ್ಲಿ ಒಳಗೊಳ್ಳಿಸಬೇಕು ಅನ್ನಿಸಲಿಲ್ಲ.

“ಒಂದು ಕಥೆ ಬರೆಯುತ್ತೇನೆ- ಓದಿಕೋ ಸಾಕು!” ಎಂದು ದೀಪುವಿಗೆ ಮೆಸೇಜ್ ಮಾಡಿ...,

ರಾಮ್‌ನ ಬಗ್ಗೆ ಯೋಚಿಸಲಾರಂಬಿಸಿದೆ.

ಯಾರಬಗ್ಗೆ ಅವನು ಒಳ್ಳೆಯ ಮಾತನಾಡಿದ್ದಾನೆ?

ತಂಗಿ? ತಮ್ಮ? ಅಮ್ಮ? ಅಪ್ಪ? ದೀಪು? ನಾನು? ಇತರೆ ಗೆಳೆಯರು? ಕೊಲೀಗ್ಸ್? ಹೋಗಲಿ ಕೊನೆಗೆ ಪ್ರೇಮಿಸಿದ ಪ್ರೇಯಸಿಯಬಗ್ಗೆ?

ದಿನಕ್ಕೆ ಐದರಿಂದ ಎಂಟು ಗಂಟೆ ಸಮಯ ಬ್ಲೂ ಫಿಲಂ ನೋಡುವ ರಾಂ- ಹೆಂಗಸರಿಗೆ ತುಂಬಾ ಮರ್ಯಾದೆ, ಗೌರವ ಕೊಡುತ್ತಾನೆ!

ನಂಬಿದ್ದೆವು- ಒಪ್ಪಿದ್ದೆವು!

ಅವನ ಇತರ ಗೆಳೆಯರಿಗೆ- ನನ್ನನ್ನೂ ಸೇರಿ- ಹೆಂಗಸರ ಹುಚ್ಚು..., ಅವರೊಂದಿಗೆ ವೇಶ್ಯೆಯರ ಮನೆವರೆಗೆ ಹೋದರೂ ಇವ ಮಾತ್ರ ಹೊರಗೆ ಇರುತ್ತಿದ್ದ!

ನಂಬಿದ್ದೆವು- ಒಪ್ಪಿದ್ದೆವು!

ಬೇರೆ ಬೇರೆ ಹೆಂಗಸರೊಂದಿಗೆ ಅಫೇರ್‌ ಇಟ್ಟುಕೊಂಡಿದ್ದ ಇವನ ಮತ್ತೊಂದು ಅಡ್ಡದ ಗೆಳೆಯ..., ಆತನ ಹೆಂಡತಿ ಇವನೊಂದಿಗೆ ದುಃಖ ತೋಡಿಕೊಂಡಾಗ..., ಇವನ ಮೇಲಿನ ಗೌರವದಿಂದಾಗಿ ಅದನ್ನು ಬಿಟ್ಟ!

ನಂಬಿದ್ದೆವು- ಒಪ್ಪಿದ್ದೆವು!

ಇವನ ತಮ್ಮ ಇವನಿಗೆ ಯಾವುದೇ ಸಹಾಯ ಮಾಡುವುದಿಲ್ಲ- ಸ್ವಾರ್ಥಿ!

ನಂಬಿದ್ದೆವು- ಒಪ್ಪಿದ್ದೆವು!

ಇವನ ಅಮ್ಮ ಅಪ್ಪ; ತಂಗಿ ತಮ್ಮನಿಗೆ ಕೊಟ್ಟ ಪ್ರಾಶಸ್ತ್ಯ ಇವನಿಗೆ ಕೊಡಲಿಲ್ಲ, ಕಡೆಗಣಿಸಿದರು!

ನಂಬಿದ್ದೆವು- ಒಪ್ಪಿದ್ದೆವು!

ಇವನ ಕೊಲೀಗ್ಸ್‌ಗೆ ಏನೂ ಗೊತ್ತಿಲ್ಲ..., ಇವನನ್ನು ಯೂಸ್ ಮಾಡಿಕೊಂಡರು!

ನಂಬಿದ್ದೆವು- ಒಪ್ಪಿದ್ದೆವು!

ಇನ್ನು ಪ್ರೇಯಸಿ...,

ಅವನ ಪ್ರೇಮ ನನಗೋ ದೀಪೂಗೋ ಯಾರೆಂದರೆ ಯಾರಿಗೋ ಗೊತ್ತೇ ಇರಲಿಲ್ಲ!

ಗೊತ್ತಾದಾಗ ಅವನು ಹೇಳಿದ್ದು...,

ಅವನಿಗೆ ಅವಳಬಗ್ಗೆ ಯಾವುದೇ ಆಸಕ್ತಿಯಿಲ್ಲ! ಅವಳಾಗಿ ಅವಳು ಇವನ ಮೇಲೆ ಬಿದ್ದು ಹಿಂಸೆ ನೀಡಿದಳು. ಸ್ವಲ್ಪ ಒಳ್ಳೆತನ ತೋರಿಸಿದ್ದನ್ನೇ ಇಟ್ಟುಕೊಂಡು ಅವನನ್ನು ಜಾಲಾಡಿದಳು. ಮಾನಸಿಕ ಹಿಂಸೆ ನೀಡಿದಳು. ಎಲ್ಲರಮುಂದೆ ಅವಮಾನ ಮಾಡಿದಳು. ಅವನ ಜೀವನವನ್ನೇ ಹಾಳು ಮಾಡಿದಳು!

ಆದರೆ ನಂತರ ನಮಗೆ ಗೊತ್ತಾಗಿದ್ದು...,

ಅವನು ಅವಳನ್ನು ದೂರ ಇಡಲು ಕಾರಣ ಅವಳ ಜಾತಿ!

ಮತ್ತೊಂದು ಮಸ್ತು ವಿಷಯವೆಂದರೆ...,

ಅವಳ ಮದುವೆ ಬೇರೊಬ್ಬನೊಂದಿಗೆ ನಡೆಯುವ ದಿನ- ಇವ ಪ್ರಪೋಸ್ ಮಾಡಿದ್ದಾನೆ!!

ನನಗೆ ನಿನ್ನ ಮದುವೆ ಆಗಬೇಕು ಅಂತ ಇದೆ- ಅಂದಿದ್ದಾನೆ!

ಅವಳು ಬರಲಿಲ್ಲ!

ಅದನ್ನೇ ಅವನು ನಮಗೆ ಹೇಳಿದ ರೀತಿ ಹೀಗೆ...,

ನಾನು ನನ್ನ ನಂಬಿಕೆ ಉಳಿಸಿಕೊಂಡೆ..., ಅವಳೇ ಬರಲಿಲ್ಲ..., ಬಂದಿದ್ದರೆ ಚಿನ್ನದಂತೆ ನೋಡಿಕೊಳ್ಳುತ್ತಿದ್ದೆ- ಎಂದು!!

ದೊಡ್ಡಸ್ತಿಕೆ!!

ಇದರಮಧ್ಯೆ ಇತ್ತೀಚೆಗೆ ಗೊತ್ತಾದ ಮತ್ತೊಂದು ವಿಷಯವೆಂದರೆ....,

ಅವನ ಪ್ರೇಯಸಿಯನ್ನು ಕಡೆಗಣಿಸಲು..., ನಾನು- ಭದ್ರ ಕಾರಣವಂತೆ!!

ನಾನು ಅವಳನ್ನು ಅವನಿಂದ ದೂರ ಮಾಡಿದೆ- ಅಂತೆ!

ಹೇಗೆ ಎಂದೆಲ್ಲಾ ಕೇಳಬಾರದು!!

ಯಾಕೆ ಹೀಗೆ?

ಅವ ಆ ಹೆಂಗಸನ್ನು ಕರೆದದ್ದು ನನಗೆ ಗೊತ್ತಾಯಿತು ಅನ್ನುವ ಒಂದೇ ಒಂದು ಕಾರಣಕ್ಕೆ.....!

ಒಬ್ಬಳು ಹೆಣ್ಣಿನಲ್ಲಿ ಆಸಕ್ತಿ ಹುಟ್ಟಿತು- ಅದು ಪ್ರಕೃತಿ ಸಹಜ ಕ್ರಿಯೆ!

ಅದನ್ನು ಒಪ್ಪಿಕೊಂಡರೆ ಏನು?

ಒಬ್ಬಳು ಹೆಣ್ಣಿನಲ್ಲಿ ಪ್ರೇಮ ಹುಟ್ಟಿತು- ಅದು ಮನುಷ್ಯ ಸಹಜ ಕ್ರಿಯೆ!

ಅದನ್ನು ಒಪ್ಪಿಕೊಂಡರೆ ಏನು?

ಇನ್ನೊಬ್ಬರನ್ನು ಕೆಟ್ಟದಾಗಿ ಬಿಂಬಿಸುವುದರಿಂದ ತಾನು ಒಳ್ಳೆಯವನಾಗುತ್ತಾನೆ ಅನ್ನುವ ನಂಬಿಕೆಯವನನ್ನು ಏನು ಮಾಡುವುದು?

ನಿಜಕ್ಕಾದರೆ ಉತ್ತರವಿದೆ! ಭ್ರಮೆಗೆ ಪರಿಹಾರವೇನು?

ಅಂದರೆ..., ನಾನು ಅವನನ್ನು ನೋಡಿದರೂ ನೋಡದಂತೆ ಹೋದದ್ದು ನಿಜವಾದರೆ..., ಕ್ಷಮೆ ಕೇಳಬಹುದು- ತಿದ್ದಿಕೊಳ್ಳಬಹುದು!

ಅದು ವಾಸ್ತವವೇ ಅಲ್ಲದಿರುವಾಗ ಏನು ಮಾಡುವುದು?

ಪ್ರಪಂಚ ಪೂರ್ತಿ ಕೆಟ್ಟದ್ದು ಅವನು ಮಾತ್ರ ಒಳ್ಳೆಯವ ಅನ್ನುವ ನಂಬಿಕೆಯಲ್ಲಿರುವವನನ್ನು ಹೇಗೆ ತಿದ್ದುವುದು?

ತನ್ನ ಮನಸ್ಸನ್ನು ತಾನೇ ಒಪ್ಪದವನೊಂದಿಗೆ ಏನೆಂದು ಚರ್ಚಿಸುವುದು?

ಅದಕ್ಕೇ...., ಅವನನ್ನು ದೂರ ಇಡುವ ತೀರ್ಮಾನ ಮಾಡಿದೆ!

ಅವನು ಯಾರೊಂದಿಗೆ ನನ್ನಬಗ್ಗೆ ಏನು ಹೇಳಿದ್ದಾನೋ ನನಗೆ ಗೊತ್ತಿಲ್ಲ! ಗೊತ್ತಾದರೂ ನಾನೇನೂ ತಿದ್ದಲು ಹೋಗುವವನಲ್ಲ.

ನಾನೇ ಕೆಟ್ಟವ- ಚಿಂತೆಯಿಲ್ಲ! ಅವನ ಸಹವಾಸ ಬೇಡ- ಅಷ್ಟೆ!

“ಎಷ್ಟು? ಐನೂರು ಪುಟಕ್ಕಿರುವ ವಿಷಯವಿದೆಯಾ?” ಎಂದಳು.

“ನಿನ್ನ ಅಣ್ಣನ ಬಗ್ಗೆ ಹೇಳುತ್ತಿದ್ದೇನೆಯೇ...! ಸಾರಿ!” ಎಂದೆ.

“ಹುಂ...! ನನಗೂ ಹೇಳಿದ್ದ ನೀನೆಷ್ಟು ಕೆಟ್ಟವನೆಂದು! ಆದರೂ ನಿನಗಾಗಿ ಸಾಯುತ್ತಿದ್ದೇನೆ!” ಎಂದಳು.

ನಾನೇನೂ ಮಾತನಾಡಲಿಲ್ಲ. ಅವಳೇ ಹೇಳಿದಳು...,

“ಅವನಬಗ್ಗೆ ಗೊತ್ತೋ...! ಅದೆಷ್ಟುಬಾರಿ ಇಣುಕಿಲ್ಲ ಅವ ನಾನೊಬ್ಬಳೇ ಇರುವಾಗ!!”

“ಅಲ್ಲವೇ..., ಹೆಣ್ಣಿನ ಮೇಲೆ ಹುಟ್ಟಿದ ಆಸಕ್ತಿಯನ್ನು ಒಪ್ಪಿಕೊಳ್ಳುವುದು ಅಷ್ಟು ದೊಡ್ಡ ಅಪರಾಧವಾ?” ಎಂದೆ.

ಅವಳೇನೂ ಮಾತನಾಡಲಿಲ್ಲ. ನಾನೇ...,

“ಒಟ್ಟು ನೀನು ಜೋಪಾನವಾಗಿರು!” ಎಂದೆ.

“ಯಾಕೆ?” ಎಂದಳು.

“ಒಮ್ಮೆ ಹೇಳಿದ್ದ- ಅವ ಪ್ರೇಮಿಸಿದವಳ ಬಗ್ಗೆ! ಅವಳ ಟಾರ್ಚರ್ ತಡೆದುಕೊಳ್ಳಲಾಗದೆ ಅವಳಿಗೆ ಸುಪಾರಿ ಕೊಟ್ಟಿದ್ದನಂತೆ! ಇಪ್ಪತ್ತು ಸಾವಿರಕ್ಕೆ! ಆಕ್ಸಿಡೆಂಟ್ ಆಗಿ ಎಲ್ಲಾದರೂ ಸತ್ತು ಬಿದ್ದಿರುತ್ತಾಳೆ ಸೂಳೆ- ಅಂದಿದ್ದ!” ಎಂದೆ.

ಅವಳೇನೂ ಮಾತನಾಡಲಿಲ್ಲ. ನಾನೇ...,

“ಎಂತಾ ವಿರೋಧಾಭಾಸ ಅಲಾ? ಅವನೇ ಕೊಲೆ ಮಾಡಬೇಕು ಅಂದುಕೊಂಡವಳಿಗೆ ಕೊನೆಗೆ ಅವನೇ ಪ್ರಪೋಸ್ ಮಾಡಿದನಂತೆ- ಅವಳ ಮದುವೆಯ ಸಮಯದಲ್ಲಿ!” ಎಂದೆ.

“ಮತ್ತೆ ಯಾಕೆ ಕೊಲ್ಲಲಿಲ್ಲ?” ಎಂದು ಕೇಳಿದಳು.

“ಅದೇ ಮಜ! ಅವನೊಬ್ಬ ಹೇಡಿಯೇ...! ಕೈಯ್ಯಲ್ಲಾಗದ ಕೇಸು! ನಾನು ಚಿಕ್ಕವನಿದ್ದಾಗ ಕನಸು ಕಾಣುತ್ತಿದ್ದೆ..., ದೇಶಕ್ಕಾಗಿ ಹೋರಾಡಿದಂತೆ, ಕ್ರಿಕೆಟ್‌ನಲ್ಲಿ ಒಬ್ಬನೇ ಸಂಚುರಿ ಹೊಡೆದಂತೆ, ಹತ್ತೂ ವಿಕೆಟ್ ತೆಗೆದುಕೊಂಡಂತೆ, ಹೆಣ್ಣುಮಕ್ಕಳನ್ನು ಚುಡಾಯಿಸುವವರೊಂದಿಗೆ ಫೈಟ್ ಮಾಡಿ ಅವರನ್ನು ಕಾಪಾಡಿದಂತೆ! ಹಾಗೆ ಅವ..., ಉತ್ತರ ಕುಮಾರ! ಏನೋ ಮಾಡಿಬಿಡುತ್ತೇನೆ, ಮಾಡಿಬಿಟ್ಟಿದ್ದೇನೆ, ನಾನು ಹಾಗೆ ನಾನು ಹೀಗೆ ಎಂದು ಕೊಚ್ಚಿಕೊಳ್ಳವುದಷ್ಟೆ- ಏನೂ ಮಾಡುವುದಿಲ್ಲ!” ಎಂದೆ.

“ಮತ್ತೆ ನಾನೇಕೆ ಜೋಪಾನವಾಗಿರಬೇಕು?” ಎಂದಳು.

“ಕೆಲವೊಮ್ಮೆ ಹೇಳಲಾಗುವುದಿಲ್ಲವೇ..., ಸೈಕೋ ಮೆಂಟಾಲಿಟಿ! ಗತಿಯಿಲ್ಲದಾಗ ಕೇರೇ ಹಾವೇ ಕಚ್ಚುತ್ತದಂತೆ..., ನಾವಿಬ್ಬರೂ ಇದನ್ನು ಮಾತನಾಡಿಕೊಂಡಿದ್ದೇವೆ ಅಂತ ಗೊತ್ತಾದರೆ..., ಅದರಲ್ಲೂ ನಾನು ಕಥೆಯಂತೆ ಬರೆದು ಹಾಕಿದರೆ..., ಯಾರಿಗೆ ಗೊತ್ತು? ಕೊಂದರೂ ಕೊಂದನೇ...!” ಎಂದೆ.

ಅವಳು ಎದೆಯಿಂದ ತಲೆಯೆತ್ತಿದಳು. ಎದ್ದು ಆಚೆ ಈಚೆ ಕಾಲು ಹಾಕಿ ನನ್ನ ಹೊಟ್ಟೆಯಮೇಲೆ ಕುಳಿತು...,

“ತಂಗಿಯಾಗಿ..., ಅವನಿಗಾಗಿ ನಾನೇ ನಿನ್ನನ್ನು ಕೊಂದರೆ ಹೇಗಿರುತ್ತದೆ? ಏನಿದ್ದರೂ ಹೆಣ್ಣಿನಮೇಲಿನ ಆಸಕ್ತಿ ಕಳೆದುಕೊಳ್ಳುತ್ತಿರುವವನು! ಬದುಕಿದ್ದು ಏನು ಪ್ರಯೋಜನ?” ಎಂದಳು.

“ಕೊಂದುಬಿಡು- ನಿನ್ನ ಕೈಯಿಂದ ಸಾಯುವ ಹಾಗಿದ್ದರೆ ಸಂತೋಷದಿಂದ ಹೋಗಿಬಿಡುತ್ತೇನೆ!” ಎಂದೆ.

ಬಾಗಿ ನನ್ನ ಕಣ್ಣುಗಳನ್ನೇ ದಿಟ್ಟಿಸಿದಳು. ಆ ಕತ್ತಲಿನಲ್ಲಿಯೂ ಅವಳ ಕಣ್ಣಿನಲ್ಲಿದ್ದ ಆರ್ದ್ರತೆ... ಅವಳ ತಲೆಯನ್ನು ಮತ್ತಷ್ಟು ಬಾಗಿಸಿ ಹಣೆಗೆ ಮುತ್ತೊಂದು ಕೊಟ್ಟು...,

“ಹೊರಡೋಣ..., ಇನ್ನು ತಡವಾದರೆ ಇವತ್ತೇ ತಲುಪೋದು ಕಷ್ಟವಾಗುತ್ತದೆ!” ಎಂದೆ.

“ಕಷ್ಟವಾಗಲಿ! ಹೋಗೋದೇ ಬೇಡ! ಇಲ್ಲೇ.., ಹೀಗೇ..., ಇದ್ದುಬಿಡೋಣ!” ಎಂದಳು.

ಅವಳನ್ನು ಎಬ್ಬಿಸಿ ನಾನೂ ಎದ್ದೆ.

“ಒಂದು ವೇಳೆ ಅಣ್ಣ ಪ್ರಾಣಕ್ಕೆ ಕುತ್ತು ಬರುವಂತೆ ಏನಾದರೂ ಮಾಡಿದರೆ ಏನು ಮಾಡುವುದು?” ಎಂದಳು.

“ನಿನ್ನ ವಿಷಯ ನನಗೆ ಗೊತ್ತಿಲ್ಲ! ನಾನಂತೂ ಕಥೆಬರೆದು ಅದರ ಕೊನೆಯಲ್ಲಿ..., ಈ ಕಥೆ ಪ್ರಕಟವಾದ ನಂತರ ನನಗೇನಾದರೂ ಆದರೆ ಅದಕ್ಕೆ ಅವನೇ ಹೊಣೆ ಅಂತ ಅವನ ಹೆಸರುಬರೆದು ನನ್ನ ಸಹಿ ಹಾಕುತ್ತೇನೆ!” ಎಂದೆ.

“ತಂಗಿಯನ್ನು ಕೊಲ್ಲುತ್ತಾನ?” ಎಂದಳು.

ಮುಗುಳುನಕ್ಕು..., ಅವಳ ಕೈ ಹಿಡಿದು ನಡೆದೆ!

*

ಜೀವನವೊಂದು ಸಾಗರ- ಅನುಭವಗಳೆಂಬ ನದಿಗಳು ಹರಿದುಬಂದು ಸೇರುವ ಸಮುದ್ರ!

ಪ್ರತಿ ಸಣ್ಣ ಅನುಭವವೂ ಮನುಷ್ಯನ ಬದುಕಿನಲ್ಲಿ ಬೀರುವ ಪ್ರಭಾವ ಗಾಢವಾಗಿರುತ್ತದೆ.

ಪ್ರತಿಕ್ಷಣದ ಅನುಭವ- ಅದನ್ನು ನಾವು ಅಳವಡಿಸಿಕೊಳ್ಳುವ ರೀತಿಯೇ..., ನಮ್ಮ ವ್ಯಕ್ತಿತ್ವ!

ವಾಸ್ತವ ಮತ್ತು ಭ್ರಮೆಗಳ ನಡುವಿನ ರೇಖೆಯನ್ನು ಅರಿಯದಿದ್ದರೆ, ಅರಿತರೂ ಒಪ್ಪಿಕೊಳ್ಳದಿದ್ದರೆ ನಷ್ಟವಾಗುವುದು ನಮ್ಮ ಜೀವನವೇ ಹೊರತು ಪ್ರಪಂಚಕ್ಕೇನೂ ನಷ್ಟವಿಲ್ಲ!

ಜೀವನದಲ್ಲಿ ಬಹಳಷ್ಟನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ, ಮಾಗಿದ್ದೇನೆ!

ಹೊರಗಿನ ಯಾವುದರಲ್ಲಿಯೂ ನನಗೆ ಆಸಕ್ತಿಯಿಲ್ಲ. ನನ್ನ ಒಳಗನ್ನು ಹುಡುಕುವುದರಲ್ಲಿ ಆಸಕ್ತಿಗಿಂತ ಹೆಚ್ಚಾಗಿ ತನ್ಮಯತೆಯಿದೆ!

ಈ ವಿಶಾಲ ಪ್ರಪಂಚದಲ್ಲಿ ಯಾರು ಹೇಗೆಬೇಕಿದ್ದರೂ ಬದುಕಬಹುದು ಎಂದಿರುವಾಗ...,

ಯಾವುದೇ ಕಟ್ಟುಪಾಡುಗಳಿಲ್ಲದ ನನಗೇನು ಚಿಂತೆ?

ಮುಂದಕ್ಕೆ ಏನು ಬರೆಯಲಿ ಎಂದು ಯೋಚಿಸುತ್ತಿದ್ದಾಗ ಅವಳ ಕಾಲ್ ಬಂತು. ಪಿಕ್ ಮಾಡಿ...,

“ಹಲೋ...!” ಎಂದೆ.

“ನನ್ನ ಅಣ್ಣ ಎಲ್ಲಿ ಭದ್ರ? ಒಂದು ವಾರದಿಂದ ಕಾಣಿಸುತ್ತಿಲ್ಲ!” ಎಂದಳು.

“ಗೊತ್ತಿಲ್ಲವೇ...! ನಾವು ಮಾತುಬಿಟ್ಟು ತಿಂಗಳ ಮೇಲಾಯಿತು!” ಎಂದೆ.

“ನಿಜ ಹೇಳು ಭದ್ರ...! ಒಂದು ವೇಳೆ..., ಅಣ್ಣ ಬರುವವರೆಗೆ.., ಅಥವಾ ಅಣ್ಣ ಸಿಗುವವರೆಗೆ ನಾನು ನಿನ್ನನ್ನು ಭೇಟಿಯಾಗುವುದಿಲ್ಲ ಅಂದರೆ..., ನಿನ್ನ ಉತ್ತರವೇನು?” ಎಂದಳು.

ಕಾಲ್ ಕಟ್ ಮಾಡಿದೆ.

ನಿಜಕ್ಕೂ..., ಅಸಾಮಾನ್ಯ ಬುದ್ಧಿವಂತೆ.

ತಲೆಕೊಡವಿ..., ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು...,

ಬರೆದ ಕಥೆಯನ್ನು ಮತ್ತೊಮ್ಮೆ ಓದಿ ನೋಡಿದೆ.

ಮುಂದೆ ಬರೆಯಲೇನೂ ಉಳಿದಿಲ್ಲ ಅನ್ನಿಸಿತು!!

ಅವಳಿಗೆ ತಿಳಿಯದು ಇದು ನಮ್ಮ ಕೊನೆಯ ಭೇಟಿಯೆಂದು- ಅನ್ನುವ ಮೊದಲ ಸಾಲನ್ನು...,

ನಮ್ಮ ಕೊನೆಯ ಭೇಟಿ ಅದು- ಎಂದು ತಿದ್ದಿದೆ!

ಅವಳಿಗೆ ಉತ್ತರ!

Comments

Popular posts from this blog

ಇನ್ನೂರು!

ದೇವಿ

ಶಾಂತಿಪ್ರಿಯರು!