ಭೇಟಿ!
೧ ಎಷ್ಟು ದೂರ ಹೋಗಿರಬಹುದು ನಾನು ? ರಸ್ತೆ ಬದಿಯಲ್ಲಿ ಯಾರೋ ಕೈ ತೋರಿಸಿದರು , ಡ್ರಾಪ್ ಬೇಕು ಅನ್ನುವಂತೆ . ಸಮೀಪ ತಲುಪಿದಾಗಲೇ ತಿಳಿದದ್ದು… , ಹೆಣ್ಣು - ಕಣ್ಣು ಮಾತ್ರ ಕಾಣಿಸುವಂತಾ ಬುರ್ಖಾಧಾರಿ - ಹೆಣ್ಣು ! ಗಾಡಿ ಸ್ಲೋ ಮಾಡಿದೆನಾದರೂ ನಿಲ್ಲಿಸಲೋ ಬೇಡವೋ ಅನ್ನುವ ಗೊಂದಲ . ನನ್ನ ಗೊಂದಲ ಅರಿತವಳಂತೆ… , “ ತಲೆ ಕೆಡಿಸಿಕೊಳ್ಳಬೇಡಿ… , ನಿಲ್ಲಿಸಿ !” ಎಂದಳು . ನಿಲ್ಲಿಸಿದೆ . ಯಾವುದೇ ಮುಜುಗರವಿಲ್ಲದೆ ಬುರ್ಖಾವನ್ನು ಮೊಣಕಾಲಿಗಿಂತ ಮೇಲೆತ್ತಿ - ಜೀನ್ಸ್ಪ್ಯಾಂಟ್ ಧರಿಸಿದ್ದಳು - ಆಚೆ ಈಚೆ ಕಾಲು ಹಾಕಿ ಕಂಫರ್ಟ್ ಆಗಿ ಕುಳಿತು… , “ ರೈಟ್ !” ಎಂದಳು . ಮುಂದಕ್ಕೆ ಚಲಿಸಿದೆ . “ ಎಲ್ಲಿಗೆ ಹೋಗಬೇಕು ?” ಎಂದು ಕೇಳಿದೆ . “ ನೀವು ಎಲ್ಲಿಗೆ ಹೋಗುತ್ತಿದ್ದೀರೋ ಅಲ್ಲಿಗೆ !” ಎಂದಳು . ಗೊಂದಲಗೊಂಡೆ . ಚಂಚಲಗೊಂಡೆ . ದುಗುಡಗೊಂಡೆ ! “ ನಾನೆಲ್ಲಿಗೆ ಹೋಗುತ್ತಿದ್ದೇನೋ ನನಗೂ ತಿಳಿಯದು… , ಗುರಿಯಿಲ್ಲದ ಪ್ರಯಾಣ !” ಎಂದೆ . “ ಇನ್ನೂ ಒಳ್ಳೆಯದೇ ಆಯಿತು ! ನಾನೇನೂ ನಿಮಗೆ ಹೊರೆಯಾಗುವುದಿಲ್ಲ - ನಿಮ್ಮೊಂದಿಗೆ ಬಂದರೆ !” ಎಂದಳು . “ ಒಬ್ಬನೇ ಹೋಗಬೇಕೆಂದುಕೊಂಡವನಿಗೆ ನೀವೊಂದು ಹೊರೆಯೇ… !” ಎಂದೆ . “ ಸರಿ ಗಾಡಿ ನಿಲ್ಲಿಸಿ !” ಎಂದಳು . ನಿಲ್ಲಿಸಿದೆ . ಗಾಡಿಯಿಂದ ಇಳಿದು ನನ್ನ ಮುಖವನ್ನೊಮ್ಮೆ ನೋಡಿ… , “ ಹೆದರಿಕೆಯಾ ?” ಎಂದಳು . ಮುಗುಳುನಕ್ಕೆ . ಅವಳಿಗದೇನು ಅರ್ಥವಾಯಿತೋ ಏನೋ… , ಮತ್ತೆ ಗಾಡಿ ಹತ್...