ಕಡಲು ಬೆಟ್ಟ ಮತ್ತು ನಾನು!
ಕಡಲು ಬೆಟ್ಟ ಮತ್ತು ನಾನು! * ಇದು ಕಥೆಯ? ಗೊತ್ತಿಲ್ಲ. ಬರೆಯಬೇಕು ಅನ್ನಿಸುತ್ತಿದೆ- ಬರೆಯುತ್ತಿದ್ದೇನೆ! ಯಾಕೆ ಅನ್ನಿಸುತ್ತಿದೆ? ಗೊತ್ತಿಲ್ಲ! ಕಡಲನ್ನು ಕಂಡಾಗ, ಬೆಟ್ಟವನ್ನು ಹತ್ತಿದಾಗ…, ಆಗಾಗ…, ಬರೆಯಬೇಕು ಅನ್ನಿಸುತ್ತದೆ! ಪ್ರಸ್ತುತಾ ಹೇಳಬೇಕು ಅಂದುಕೊಂಡಿರುವ ವಿಷಯವನ್ನು ವಿವರಿಸುವುದು ಸ್ವಲ್ಪ ಕಷ್ಟ! ಆದ್ದರಿಂದ…, ಅವಳ ಸಹಾಯವನ್ನು ಪಡೆದುಕೊಳ್ಳುತ್ತೇನೆ. ಶಾರದೆ! ಯಾರವಳು? ವಾಗ್ದೇವಿ ಅಂದುಕೊಳ್ಳೋಣ! ಪ್ರತೀ ಅವಳೂ…, ಶಾರದೆಯೇ! ಪ್ರತೀ ಶಾರದೆಯೂ…, ಅವಳೇ! ಇಷ್ಟಕ್ಕೂ ವಿಷಯವೇನು? ಎಷ್ಟು ಬರೆದರೂ ಮುಗಿಯದ…, ವಿವರಿಸಲಾಗದ…, ಎಷ್ಟು ದಕ್ಕಿದರೂ ಸಾಲದ…, ಅರ್ಥಕ್ಕೆ ಎಟುಕದ…, ಅನುಭವಿಸಿ ಮಾತ್ರ ಅರಿತುಕೊಳ್ಳಬಹುದಾದ…, ಅದ್ಭುತ ಆನಂದಾನುಭೂತಿಗೆ ಕಾರಣವಾದ…, ಪ್ರೇಮ! * ಮತ್ತೆ ಬರಬೇಡವೆಂದು ಎಷ್ಟೇ ಹೇಳಿದರೂ…, ಮತ್ತೆ ಮತ್ತೆ ಉರುಳುರುಳಿಬಂದು ಮುತ್ತಿಕ್ಕಿ ಹೋಗುತ್ತಿದೆ…, ಅಲೆಗಳು! ಅಲೆಗಳಿಂದ ಆಚೆಗೆ ದೃಷ್ಟಿ ಹಾಯಿಸಿದರೆ…, ಶಾಂತಗಂಭೀರವಾಗಿ ಹರಡಿಕೊಂಡಿದೆ…, ಕಡಲು! ಕಡಲಿನಂಚಿನಲ್ಲಿ…, ಎಷ್ಟು ಅದ್ಭುತವಾದ ದೃಶ್ಯ! ಆಕಾಶದಿಂದ ಜಾರಿ…, ಕಡಲನ್ನು ಚುಂಬಿಸಿ…, ತನ್ನನ್ನು ತಾನು ಕಳೆದುಕೊಳ್ಳುತ್ತಿದ್ದಾನೆ…, ಸೂರ್ಯ! ಕತ್ತಲು ಬೆಳಕಿನ ಆಟ! ಅಲೆಗಳಂತೆ ಪ್ರಕ್ಷುಬ್ಧವಾಗಿದ್ದ ನನ್ನ ಮನಸ್ಸು…, ಅದೇ ಅಲೆಗಳ ಒಡೆಯನಾದ ಕಡಲಿನಂತೆ ಶಾಂತವಾದ ಭಾವ! ಹೌದು…, ನಾನು ನಿರಾಳವಾಗಿದ್ದೇನೆ…, ನೆಮ್ಮದಿಯಾಗಿದ್ದೇನೆ…, ಇದುವರೆಗಿನ ನನ್ನ ಜೀವನದ...