ಕೋಲ್ಡ್ ಬ್ಲಡೆಡ್!
ಇಂದು ಅವಳಿಲ್ಲ. ಅದಕ್ಕೇ ಈ ಕಥೆ! ಅವಳ ಪರಿಚಯವೇ ನನ್ನ ಕಥೆಗಳ ಮೂಲಕ. “ನಿನ್ನ ಕಥೆಗಳನ್ನು ಓದಿ ನನಗನ್ನಿಸೋದು…, ನೀನೆಂತಾ ಕೋಲ್ಡ್ಬ್ಲಡೆಡ್ ಮನುಷ್ಯ ಅಂತ! ಯಪ್ಪ…, ಅದು ಹೇಗೆ ಬರೀತೀಯ ಅಷ್ಟು ರಿಯಲಿಸ್ಟಿಕ್ ಆಗಿ? ನೀನೇ ಕೊಲೆ ಮಾಡಿದಂತೆ?” ಎಂದಿದ್ದಳು. ನಕ್ಕೆ. ಒಬ್ಬ ಕಥೆಗಾರನಿಗೆ ಇದಕ್ಕಿಂತ ಯಾವ ಕಾಂಪ್ಲಿಮೆಂಟ್ ಬೇಕು? “ಇಷ್ಟವಾಯಿತ ಕಥೆ?” ಎಂದೆ. “ತುಂಬಾ…, ಕಣ್ಣಿಗೆ ಕಟ್ಟಿದಂತಿದೆ!” ಎಂದಳು. “ಆದರೆ ಎಲ್ಲರೂ ನನ್ನ ಕಥೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ ಅನ್ನುತ್ತಾರಲ್ಲ?” ಎಂದೆ. “ಅದು ನಿಜ! ನನಗೂ ಮೊದಮೊದು ಕಷ್ಟವಾಗುತ್ತಿತ್ತು! ಎರಡು ಮೂರು ಸಾರಿ ಓದಬೇಕಿತ್ತು. ಅಷ್ಟು ಸೂಕ್ಷ್ಮ ನಿನ್ನ ಕಥೆಗಳು! ಅದರಲ್ಲೂ ಕ್ರೈಂ ಕಥೆಗಳು! ಆ ಸಸ್ಪೆನ್ಸ್…, ಅದು ಹಾಗೇ ಇರಬೇಕು! ನಿನ್ನ ಶೈಲಿಯ ಪರಿಚಯವಾದಮೇಲೆ ಈಗ ಪರವಾಗಿಲ್ಲ.” ಎಂದಳು. ನಾನೇನೂ ಮಾತನಾಡಲಿಲ್ಲ. ಅವಳೇ…, “ಒಂದು ವಾಕ್ಯ ಇರಲಿ…, ಒಂದು ಪದ ಬಿಟ್ಟು ಹೋದರೆ, ಒಂದು ಕಾಮ, ಫುಲ್ಸ್ಟಾಪ್ ಬಿಟ್ಟುಹೋದರೆ ಪೂರ್ತಿ ಕಥೆಯೇ ಅರ್ಥವಾಗದಷ್ಟು ಕ್ಲಿಷ್ಟ! ಆತುರಾತುರವಾಗಿ ಓದುವ ಕಥೆಗಳಲ್ಲ ನಿನ್ನದು!” ಎಂದಳು. ನಾನೇನೂ ಮಾತನಾಡಲಿಲ್ಲ. ಕ್ಷಣಬಿಟ್ಟು ಅವಳೇ…, “ಆದರೂ ಹೇಗೋ….? ಆ ಇಂಟಿಮೇಟ್ ಸೀನ್ಗಳಿರುವ ಕಥೆಗಳು ಬರೆಯುತ್ತೀಯಲ್ಲಾ…? ಅದು ನಿನ್ನದೇ ಅನುಭವ ಅನ್ನಿಸೋದು! ಅದರಲ್ಲೂ ನೀನು ಬರೆಯೋದೋ…, ಒಬ್ಬನೇ ಎಲ್ಲಿಗಾದರೂ ಹೋಗಿ ಬಂದಮೇಲೆ!” ಎಂದಳು. ನಿಜಕ್ಕೂ ನಗು ಬಂತು. “ತಾಯಿ…, ನನಗೂ ಮದುವ...